ಗುರುವಾರ , ಮಾರ್ಚ್ 4, 2021
20 °C

ಸಿಂಡಿಕೇಟ್ ಬ್ಯಾಂಕ್ ಮಹಿಳಾ ಶಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಡಿಕೇಟ್ ಬ್ಯಾಂಕ್ ಮಹಿಳಾ ಶಾಖೆ

ಪದ್ಮನಾಭ ನಗರದಲ್ಲಿ `ಮಹಿಳಾ ಶಾಖೆ~ ಪ್ರಾರಂಭಿಸುವುದರೊಂದಿಗೆ, ಬ್ಯಾಂಕಿಂಗ್ ಇತಿಹಾಸದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದೆ. ಇದೇ ವೇಳೆ ಈ ಮಹಾಸಂಸ್ಥೆ 108 ಶಾಖೆಗಳನ್ನು ದೇಶದಾದ್ಯಂತ ಪ್ರಾರಂಭಿಸಿ, ಬ್ಯಾಂಕಿನ ಅಭಿವೃದ್ಧಿಯಲ್ಲಿ ಒಂದು `ಮೈಲಿಗಲ್ಲು~ ಎನ್ನುವ ಪ್ರಶಂಸೆಗೆ ಪಾತ್ರವಾಗಿದೆ. ಪದ್ಮನಾಭನಗರದ ಶಾಖೆ, ಬ್ಯಾಂಕಿನ 2700ನೇ ಶಾಖೆಯಾಗಿರುತ್ತದೆ.ಸಿಂಡಿಕೇಟ್ ಬ್ಯಾಂಕಿನ ಜನ್ಮ ಸ್ಥಾನ. ಉಡುಪಿಯ ಸಮೀಪದ ಗ್ರಾಮಾಂತರ ಪ್ರದೇಶಗಳಲ್ಲಿ ಜನಿಸಿದ ಮೂರು ಅಸಾಧಾರಣ ವ್ಯಕ್ತಿಗಳಾದ ಉಪೇಂದ್ರ ಅನಂತ ಪೈ ವ್ಯವಹಾರಸ್ತರು, ಡಾ. ಟಿ. ಎಂ. ಪೈ ವೈದ್ಯರು ಹಾಗೂ  ವಿ. ಎಸ್. ಕುಡ್ರುವ ಇಂಜಿನಿಯರ್ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ 1925 ರಲ್ಲಿ `ದಿ ಕೆನರಾ ಇಂಡಸ್ಟ್ರಿಯಲ್ ಅಂಡ್ ಬ್ಯಾಂಕಿಂಗ್ ಸಿಂಡಿಕೇಟ್~ ಎನ್ನುವ ಹೆಸರಿನಲ್ಲಿ, ಬ್ಯಾಂಕ್ ಒಂದನ್ನು ಉಡುಪಿಯಲ್ಲಿ ಸ್ಥಾಪಿಸಿದರು.1963 ರಲ್ಲಿ ಈ ಬ್ಯಾಂಕಿಗೆ `ಸಿಂಡಿಕೇಟ್ ಬ್ಯಾಂಕ್~ ಎಂದು ಮರು ನಾಮಕರಣ ಮಾಡಲಾಯಿತು. ಬ್ಯಾಂಕಿನ ಅಂದಿನ ಅಧಿಕೃತ ಬಂಡವಾಳ ರೂ. ಒಂದು ಲಕ್ಷವಾಗಿದ್ದು, ವಸೂಲಾದ ಬಂಡವಾಳ ಬರೇ ರೂ. 8,000 ಮಾತ್ರವಾಗಿತ್ತು. ತಾ. 10-11-1925 ರಂದು ಒಂದು ಸಣ್ಣ ಕೋಣೆಯಲ್ಲಿ, ಒಂದೇ ಒಂದು ನೌಕರನಿಂದ, ಬರೇ ರೂ. 8,000 ಬಂಡವಾಳದಿಂದ, ಉಡುಪಿಯಲ್ಲಿ, ಈ ಬ್ಯಾಂಕ್ ತನ್ನ ವ್ಯವಹಾರವನ್ನು ಪ್ರಾರಂಭಿಸಿತು.ಸಣ್ಣ ಉಳಿತಾಯದ ಪರಿಕಲ್ಪನೆಯನ್ನು ಭಾರತದಲ್ಲಿ ಹೊರ ಹೊಮ್ಮಿಸಿದ ಕೀರ್ತಿ `ಸಿಂಡಿಕೇಟ್ ಬ್ಯಾಂಕಿಗೆ~ ಸಲ್ಲುತ್ತದೆ. ಜನಸಾಮಾನ್ಯರನ್ನು ಸ್ಪಂದಿಸಿ, ಜನರ ಬಾಗಿಲಿಗೇ ಹೋಗಿ, ಸಣ್ಣ ಮೊತ್ತದ ಠೇವಣಿ ಸಂಗ್ರಹಿಸುವ `ಪಿಗ್ಮಿ~ ಎನ್ನುವ ವಿನೂತನ ಠೇವಣಿ ಯೋಜನೆ 1928 ರಲ್ಲಿ ಪ್ರಾರಂಭವಾಯಿತು.ಪ್ರತಿ ದಿವಸ ಸಂಪಾದನೆ ಮಾಡುವ ಕೂಲಿ ಜನಾಂಗ, ವ್ಯಾಪಾರಸ್ಥರು, ವೈದ್ಯರು, ವಕೀಲರು ಹಾಗೂ ಇನ್ನಿತರರಿಗೆ ಈ ಠೇವಣಿ ಒಂದು ಬಹುದೊಡ್ಡ ವರದಾನವಾಗಿದೆ. ಬಡ ಮತ್ತು ಮಧ್ಯಮವರ್ಗದ ಜನರು ನಿರಂತವಾಗಿ ಹಾಗೂ ಕಡ್ಡಾಯವಾಗಿ ಹಣ ಉಳಿಸಲು ದಾರಿ ದೀಪವಾಗಿರುವ ಈ ಠೇವಣಿ ಯೋಜನೆ, ಲಕ್ಷಾಂತರ ಪಿಗ್ಮಿ ಏಜಂಟರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಈ ಠೇವಣಿಯ ರೂವಾರಿ ಹಾಗೂ ಶಿಲ್ಪಿ, ಅಂದಿನ ಅಧ್ಯಕ್ಷರಾದ ದಿವಂಗತ ಪದ್ಮಶ್ರೀ ಡಾ. ಟಿ. ಎಂ. ಎ. ಪೈಯವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.