ಸಿಂಡ್ ಬ್ಯಾಂಕ್ ಲಾಭ 1313 ಕೋಟಿ

7

ಸಿಂಡ್ ಬ್ಯಾಂಕ್ ಲಾಭ 1313 ಕೋಟಿ

Published:
Updated:
ಸಿಂಡ್ ಬ್ಯಾಂಕ್ ಲಾಭ 1313 ಕೋಟಿ

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ 2011-12ನೇ ಹಣಕಾಸು ವರ್ಷದಲ್ಲಿ ರೂ 1313 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ 25.33ರ ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷದ ನಿವ್ವಳ ಲಾಭ 1048 ಕೋಟಿಯಷ್ಟಿತ್ತು.ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 1.26 ಲಕ್ಷ ಕೋಟಿ ಠೇವಣಿ(ಶೇ 16 ಹೆಚ್ಚಳ) ಸಂಗ್ರಹವಾಗಿದ್ದು, 1.11 ಲಕ್ಷ ಕೋಟಿ(ಶೇ 14 ಅಧಿಕ) ಸಾಲ ವಿತರಿಸಿ ಒಟ್ಟು 2.84 ಲಕ್ಷ ಕೋಟಿ ವಹಿವಾಟು ನಡೆಸಲಾಗಿದೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಬ್ಯಾಂಕ್ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಸಾಂಗ್ವಿ, 2012-13ರಲ್ಲಿ 3.50 ಲಕ್ಷ ಕೋಟಿ ವಹಿವಾಟು ಗುರಿ ಇದೆ ಎಂದರು.ಬ್ಯಾಂಕ್‌ನ ಬಡ್ಡಿ ಮೂಲದ ವರಮಾನದಲ್ಲಿಯೂ ಶೇ 33ರಷ್ಟು ಹೆಚ್ಚಳವಾಗಿದ್ದು, ರೂ 11451 ಕೋಟಿಯಿಂದ 15,268 ಕೋಟಿಗೆ ಏರಿದೆ. ಪ್ರತಿ ಷೇರಿನ ಗಳಿಕೆಯೂ ರೂ 22.89ರಷ್ಟಾಗಿದೆ ಎಂದು ವಿವರಿಸಿದರು.ಆದರೆ, 3ನೇ ತ್ರೈಮಾಸಿಕದಲ್ಲಿ 338.12 ಕೋಟಿಯಷ್ಟಿದ್ದ ಬ್ಯಾಂಕ್‌ನ ನಿವ್ವಳ ಲಾಭ  4ನೇ ತ್ರೈಮಾಸಿಕದಲ್ಲಿ 309.43 ಕೋಟಿಗೆ ಕುಸಿದಿದೆ. ಸಿಬ್ಬಂದಿ ಮೇಲಿನ ನಿರ್ವಹಣಾ ವೆಚ್ಚವೂ 394.17 ಕೋಟಿಯಿಂದ 594.14 ಕೋಟಿಗೆ ಏರಿದೆ. ಇದೇ ಅವಧಿಯಲ್ಲಿನ ಒಟ್ಟಾರೆ ಅನುತ್ಪಾದಕ ಆಸ್ತಿ(ಗ್ರಾಸ್ ಎನ್‌ಪಿಎ) ಪ್ರಮಾಣವೂ ಶೇ 2.29ರಿಂದ ಶೇ 2.53ಕ್ಕೆ ಹೆಚ್ಚಳವಾಗಿದೆ. ಅಂದರೆ 2673.57 ಕೋಟಿಯಿಂದ 3183 ಕೋಟಿಗೆ ಹೆಚ್ಚಿದೆ. ನಿವ್ವಳ ಎನ್‌ಪಿಎ ಸಹ 993 ಕೋಟಿ(ಶೇ 0.86)ಯಿಂದ 1185 ಕೋಟಿ(ಶೇ 0.96)ಗೆ ಹೆಚ್ಚಿದೆ.ಬ್ಯಾಂಕ್ ಮಾರ್ಚ್ 31ರ ವೇಳೆಗೆ ಒಟ್ಟು 108 ಹೊಸ ಶಾಖೆಗಳನ್ನು ಆರಂಭಿಸಿದೆ. ಸದ್ಯ 2700 ಶಾಖೆಗಳು ಮತ್ತು 1240 ಎಟಿಎಂ ಕೇಂದ್ರಗಳು ಇವೆ. ಗಮನಾರ್ಹ ಸಂಗತಿ ಎಂದರೆ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಇರುವ 2 ಶಾಖೆಗಳನ್ನೂ ಆರಂಭಿಸಲಾಗಿದೆ ಎಂದು ಸಾಂಗ್ವಿ ವಿವರಿಸಿದರು.2011-12ನೇ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ರೂ 3.80 (ಶೇ 38) ಲಾಭಾಂಶ ನೀಡಲು ನಿರ್ದೇಶಕರ ಮಂಡಳಿ ಒಪ್ಪಿದೆ ಎಂದರು.ಹೆಚ್ಚುವರಿ ಬಂಡವಾಳಕ್ಕಾಗಿ ಮಾರುಕಟ್ಟೆಯಿಂದ (ಆದ್ಯತಾ ಷೇರು ಮಾರಾಟ ಮೂಲಕ) ರೂ 539 ಕೋಟಿ ಸಂಗ್ರಹಿಸಲು ಯೋಜಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಸಾಂಗ್ವಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry