ಭಾನುವಾರ, ಅಕ್ಟೋಬರ್ 20, 2019
21 °C

ಸಿಂದಗಿ ಧ್ವಜ ಪ್ರಕರಣ: ಶ್ರೀರಾಮ ಸೇನೆಯ ಆರು ಯುವಕರ ಬಂಧನ

Published:
Updated:

ವಿಜಾಪುರ: ಸಿಂದಗಿಯ ಮಿನಿ ವಿಧಾನಸೌಧದ ಎದುರು ಪಾಕಿಸ್ತಾನದ ಧ್ವಜ ಹಾರಿಸಿ ರಾಷ್ಟ್ರದ್ರೋಹವೆಸಗಿದ ಆರೋಪದ ಮೇಲೆ ಪೊಲೀಸರು ಶ್ರೀರಾಮಸೇನೆ ಸಂಘಟನೆಯ ಆರು ಮಂದಿಯನ್ನು ಬಂಧಿಸಿದ್ದಾರೆ.`ಸಿಂದಗಿ ಪಟ್ಟಣದ ರಾಕೇಶ್ ಸಿದ್ರಾಮಯ್ಯ ಮಠ (19), ಅನಿಲಕುಮಾರ ಶ್ರೀರಾಮ ಸೋಲಂಕರ, ಮಲ್ಲನಗೌಡ ವಿಜಕುಮಾರ ಪಾಟೀಲ (18), ಪರಶುರಾಮ ಅಶೋಕ ವಾಘ್ಮೋರೆ (20), ರೋಹಿತ್ ಈಶ್ವರ ನಾವಿ (18), ಸುನೀಲ್ ಮಡಿವಾಳಪ್ಪ ಅಗಸರ (18) ಎಂಬವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅರುಣ ವಾಘ್ಮೋರೆ (20) ಪರಾರಿಯಾಗಿದ್ದಾನೆ~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.`ರಾಕೇಶ್ ಮಠ ಶ್ರೀರಾಮ ಸೇನೆಯ ಸಿಂದಗಿ ಪಟ್ಟಣದ ವಿದ್ಯಾರ್ಥಿ ಘಟಕದ ಅಧ್ಯಕ್ಷನಾಗಿದ್ದು, ಉಳಿದವರೂ ಆ ಸಂಘಟನೆಯ ಪದಾಧಿಕಾರಿಗಳಾಗಿದ್ದಾರೆ. ಇವರೆಲ್ಲರೂ ವಿಜಾಪುರ ಮತ್ತು ಸಿಂದಗಿಯ ವಿವಿಧ  ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಂದು ವಾರದಿಂದ ಸಂಚು ರೂಪಿಸಿ ಈ ಕೃತ್ಯವೆಸಗಿದ್ದಾರೆ~ ಎಂದರು.ಹೊಸ ವರ್ಷದ ಮೊದಲ ದಿನ ನಸುಕಿನ ಜಾವ 3.30ರಿಂದ 4 ಗಂಟೆಯ ಅವಧಿಯಲ್ಲಿ ಸಿಂದಗಿಯ ತಹಸೀಲ್ದಾರ ಕಚೇರಿ ಆವರಣದ ಹೊರಗೆ ಒಂದು ದ್ವಿಚಕ್ರ ವಾಹನ ನಿಂತಿದ್ದ ಬಗ್ಗೆ ಮಾಹಿತಿ ಲಭ್ಯವಾಯಿತು.  ಈ ಮಾಹಿತಿ ಆಧರಿಸಿ ತನಿಖಾ ತಂಡದ ಸದಸ್ಯರು ಆ ವಾಹನ ಪತ್ತೆ ಮಾಡಿ ಆ ದಿನ ಆ ವಾಹನ ಉಪಯೋಗಿಸಿದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಪತ್ತೆಯಾಯಿತು ಎಂದು ಹೇಳಿದರು.`ಖಚಿತ ಮಾಹಿತಿಯ ಮೇರೆಗೆ ಅನಿಲ್‌ಕುಮಾರ ಶ್ರೀರಾಮ ಸೋಲಂಕರ ಎಂಬಾತನನ್ನು ಸಿಂದಗಿಯಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ತಾವೆಲ್ಲ ಸೇರಿ ಸಿಂದಗಿ ಪಟ್ಟಣದ ಮಿನಿ ವಿಧಾನಸೌಧದ ಎದುರು ಇರುವ ಧ್ವಜ ಸ್ತಂಬಕ್ಕೆ ಪಾಕಿಸ್ತಾನದ ಧ್ವಜ ಹಾರಿಸಿದ್ದನ್ನು ಒಪ್ಪಿಕೊಂಡ. ಹುಬ್ಬಳ್ಳಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ಉಳಿದ ಆರೋಪಿಗಳನ್ನು ಚಿಕ್ಕ ಸಿಂದಗಿ ಬಳಿ ಬಂಧಿಸಲಾಯಿತು `ಎಂದು ತಿಳಿಸಿದರು.`ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ತಂಡದ ಎಲ್ಲ ಸದಸ್ಯರು ಈ ಕೃತ್ಯವನ್ನು ತಾವು ಮಾಡಿದ್ದಾಗಿ ಒಪ್ಪಿಕೊಂದ್ದಾರೆ. ಈ ವ್ಯಕ್ತಿಗಳು ತಾವೇ ಪಾಕಿಸ್ತಾನದ ಧ್ವಜ ತಯಾರಿಸಿ, ಅದನ್ನು ಹಾರಿಸಿರುವ ಬಗ್ಗೆ ಸಾಂದರ್ಭಿಕ ಸಾಕ್ಷ್ಯಗಳು ನಮ್ಮ ಬಳಿ ಇವೆ. ಈ ಕೃತ್ಯ ನಡೆಸಲು ಕಾರಣ ಹಾಗೂ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ~ ಎಂದರು. `ಒಂದು ವಾರದಿಂದ ಈ ಎಲ್ಲ ಆರೋಪಿಗಳು ಒಂದೆಡೆ ಸೇರಿ ಸಂಚು ರೂಪಿಸಿದ್ದರು.ಸುನೀಲ್ ಅಗಸರ ಎಂಬಾತನ ಮನೆಯಲ್ಲಿ ಪಾಕಿಸ್ತಾನದ ಧ್ವಜವನ್ನು ತಯಾರಿಸಿದ್ದರು. ಅದನ್ನು ವ್ಯವಸ್ಥಿತವಾಗಿ ಜನವರಿ 1ರಂದು ಬೆಳಗಿನ ಜಾವ ಸಿಂದಗಿ ಮಿನಿ ವಿಧಾನಸೌಧದ ಆವರಣದಲ್ಲಿ ಹಾರಿಸಿದ್ದರು. ನಂತರ ಬೆಳಿಗ್ಗೆ 6ಕ್ಕೆ ತಾವೇ ಆ ಕಚೇರಿ ಆವರಣಕ್ಕೆ ಬಂದು ಜನರನ್ನು ಸೇರಿಸಿ ಗಲಾಟೆ ಪ್ರಾರಂಭಿಸಿ, ವಾಹನಗಳಿಗೆ ಕಲ್ಲು ತೂರಿದ್ದರು~ ಎಂದು ಹೇಳಿದರು.ಅತ್ಯಂತ ಸೂಕ್ಷ್ಮ ಹಾಗೂ ಗಂಭೀರವಾಗಿದ್ದ ಈ ಪ್ರಕರಣದ ತನಿಖೆಗೆ ಇಂಡಿ ಡಿವೈಎಸ್ಪಿ ಎಂ.ಮುತ್ತುರಾಜ್ ನೇತೃತ್ವದಲ್ಲಿ, ಡಿಸಿಐಬಿ ಇನ್ಸ್‌ಪೆಕ್ಟರ್ ಸಿದ್ದೇಶ್ವರ, ಪಿಎಸ್‌ಐ ಬಾಬಾಗೌಡ ಪಾಟೀಲ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು.ಬಹುಮಾನ: ಘಟನೆ ನಡೆದ ಮೂರು ದಿನಗಳಲ್ಲಿಯೇ ಆರೋಪಿಗಳನ್ನು ಬಂಧಿಸಿರುವ ತಂಡಕ್ಕೆ 10 ಸಾವಿರ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ.ಪ್ರಭಾರ ಜಿಲ್ಲಾಧಿಕಾರಿ ಕಾಶಿನಾಥ ಪವಾರ, ತನಿಖಾ ತಂಡದವರು ಪತ್ರಿಕಾಗೋಷ್ಠಿಯಲ್ಲಿದ್ದರು.ಹೊಸ ವರ್ಷದ ಮೊದಲ ದಿನ ನಸುಕಿನಲ್ಲಿ ನಡೆದಿದ್ದ ಈ ಘಟನೆ ಜಿಲ್ಲೆಯಲ್ಲಿ ತೀವ್ರ ಖಂಡನೆಗೆ ಒಳಗಾಗಿತ್ತು. ಆರೋಪಿಗಳ ಪತ್ತೆಗೆ ಆಗ್ರಹಿಸಿ ನಿರಂತರ ಪ್ರತಿಭಟನೆ, ಬಂದ್‌ಗಳನ್ನು ನಡೆಸಲಾಗಿತ್ತು.ಶ್ರೀರಾಮ ಸೇನೆಯವರೇ ಬುಧವಾರ ವಿಜಾಪುರ ಬಂದ್‌ಗೆ ಕರೆ ನೀಡಿದ್ದರು. ಹಿಂದೂಪರ ಸಂಘಟನೆಯವರೇ ಈ ಕೃತ್ಯವೆಸಗಿದ್ದಾರೆ ಎಂಬ ಪೊಲೀಸರ ಹೇಳಿಕೆಯಿಂದ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

Post Comments (+)