ಸಿಂಧನೂರು ನಗರಸಭೆಯಲ್ಲಿ ಸಾಮಾನ್ಯ ಸಭೆ: ಹೊಸ ನಿರ್ಣಯಗಳಿಗೆ ಸಮ್ಮತಿ

ಮಂಗಳವಾರ, ಜೂಲೈ 23, 2019
20 °C

ಸಿಂಧನೂರು ನಗರಸಭೆಯಲ್ಲಿ ಸಾಮಾನ್ಯ ಸಭೆ: ಹೊಸ ನಿರ್ಣಯಗಳಿಗೆ ಸಮ್ಮತಿ

Published:
Updated:

ಸಿಂಧನೂರು: ಹಿಂದಿನ ಸಭೆಯಲ್ಲಿ ಕೈಗೊಂಡ ವಿವಿಧ ನಿರ್ಣಯಗಳು ಸಮರ್ಪಕವಾಗಿ ಜಾರಿಗೆ ಬಾರದೇ ಇದ್ದರೂ ಬುಧವಾರ ನಗರದ ಎಸ್‌ಜೆಎಸ್‌ಆರ್‌ವೈ ಕಾರ್ಯಾಲಯದಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಗದ್ದಲ, ಆರೋಪ -ಪ್ರತ್ಯಾರೋಪಗಳ ಮಧ್ಯೆ ಮತ್ತಷ್ಟು ಹೊಸ ನಿರ್ಣಯಗಳನ್ನು ಆಡಳಿತ ಮಂಡಳಿ ಕೈಗೊಂಡಿತು.ಎಸ್‌ಎಫ್‌ಸಿ ಯೋಜನೆಯಡಿ 2012-13ನೇ ಸಾಲಿಗೆ ಬಿಡುಗಡೆಯಾದ 4.41ಕೋಟಿ ಹಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಮಗಾರಿಗಳಿಗೆ ಶೇ.25.75 ಮೀಸಲಿರಿಸಿದ್ದು ನಗರಸಭೆ ವಾರ್ಡುಗಳ ಅಭಿವೃದ್ಧಿಗೆ 2.50ಕೋಟಿ ತೆಗೆದಿರಿಸಬೇಕು.ಇದರಲ್ಲಿ ಉಳಿದ 45ಲಕ್ಷ ಹಾಗೂ 13ನೇ ಹಣಕಾಸು ಯೋಜನೆಯ 28.50 ಲಕ್ಷ ಹಣವನ್ನು ದೇವರಾಜು ಅರಸು ತರಕಾರಿ ಮಾರುಕಟ್ಟೆ, ಸ್ಮಶಾನಗಳ ಅಭಿವೃದ್ಧಿ, ಹಳೇಬಜಾರ ರಸ್ತೆ ದುರಸ್ತಿಗೆ ಬಳಸಿಕೊಳ್ಳುವಂತೆ ಸದಸ್ಯ ಮಲ್ಲಿಕಾರ್ಜುನ ಪಾಟೀಲ್ ಸಭೆಗೆ ಒತ್ತಾಯಿಸಿದಾಗ ಸಭೆ ಸಮ್ಮತಿಸಿತು.ಮೀಟರ್ ಅಳವಡಿಕೆಗೆ ವಿರೋಧ: ನಗರದಲ್ಲಿ ಕೈಗೊಳ್ಳುತ್ತಿರುವ ಎಡಿಬಿಯ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಸ್ಪ್ಯಾನ್ ಕನ್ಸಲ್ಟೆನ್ಸಿ ಕಂಪನಿಯ ಅಧಿಕಾರಿ ರೇಣುಕಯ್ಯ ಮಾತನಾಡಿ ನಗರವನ್ನು ಆರು ಝೋನ್‌ಗಳಾಗಿ ವಿಭಾಗಿಸಲಾಗಿದ್ದು ದಿನದ 24ಗಂಟೆ ನೀರಿನ ಸೌಲಭ್ಯ ಕಲ್ಪಿಸಿ ನಲ್ಲಿಗಳಿಗೆ ಮೀಟರ್ ಅಳವಡಿಸಲಾಗುವುದು ಎಂದು ವಿವರಿಸಿದರು.

 

ಇದಕ್ಕೆ ಸದಸ್ಯರು ಪಕ್ಷಭೇದ ಮರೆತು ತೀವ್ರ ವಿರೋಧ ವ್ಯಕ್ತಪಡಿಸಿದರು. ಅವರನ್ನು ಸಮಾಧಾನಪಡಿಸಿದ ನಗರಸಭೆ ಉಪಾಧ್ಯಕ್ಷ ಎಂ.ಡಿ.ನದೀಮ್‌ಮುಲ್ಲಾ ಎಡಿಬಿ ಮಾರ್ಗದರ್ಶನದ ಪ್ರಕಾರ ಆರರಲ್ಲಿ ಒಂದು ಝೋನ್‌ನ್ನು ಆಯ್ಕೆ ಮಾಡಿ 5ಕೋಟಿ ಖರ್ಚು ಮಾಡಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.ಕಳೆದ 15 ದಿನಗಳಿಂದ ನಗರದ ಜನತೆಗೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಸದಸ್ಯ ಹನುಮಂತಪ್ಪ ಗುಡಿ ಅಸಮಾಧಾನ ವ್ಯಕ್ತಪಡಿಸಿದಾಗ ಕಾಲುವೆಗೆ ಹೊಸ ನೀರು ಬಂದಿರುವುದರಿಂದ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತವಾಗಿದ್ದು ಶೀಘ್ರವೇ ಸರಿಪಡಿಸಿ ಶುದ್ಧ ನೀರು ಪೂರೈಸುವುದಾಗಿ ಪೌರಾಯುಕ್ತ ಕಾಳಪ್ಪ ಭರವಸೆ ನೀಡಿದರು.ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಗಳಂತೆ ವಿವಿಧ ಕಾಮಗಾರಿಗಳಿಗೆ ಆರಾರು ತಿಂಗಳಾದರೂ ಅಂದಾಜು ಪತ್ರಿಕೆ ತಯಾರಿಸಿಲ್ಲ. ಬಿಲ್‌ಗಳನ್ನು ಪಾವತಿಯಾಗಿಲ್ಲ, ಆಡಳಿತ ಮಂಡಳಿ ವೈಫಲ್ಯ ಹೀಗೆ ಮುಂದುವರೆದರೆ ಸಭೆಯ ನಿರ್ಣಯಗಳಿಗೆ ಅರ್ಥವಿರುವುದಿಲ್ಲ.ಮೊದಲು ಕೈಗೊಂಡ ನಿರ್ಣಯಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ಸದಸ್ಯರಾದ ಚಂದ್ರಶೇಖರ ಮೈಲಾರ, ಪ್ರಭುರಾಜ ಆಗ್ರಹಿಸಿದರು. ವಾರ್ಡ್‌ಗಳಲ್ಲಿ ವಿದ್ಯುತ್ ಕಂಬಗಳಿಗೆ ಅಳವಡಿಸುತ್ತಿರುವ ಬಲ್ಬ್‌ಗಳು ಬಾಳಿಕೆ ಬರುತ್ತಿಲ್ಲ. ಟ್ಯೂಬ್‌ಲೈಟ್ ಬದಲಾಗಿ ಗುಣಮಟ್ಟದ ಸಿಎಫ್‌ಎಲ್ ಬಲ್ಬ್‌ಗಳನ್ನು ಅಳವಡಿಸುವಂತೆ ಸದಸ್ಯರಾದ ಕೃಷ್ಣಕುಮಾರಿ, ವಲಿಸಾಬ ಮಿಟ್ಟಿಮನಿ ಸಭೆಗೆ ಮನವಿ ಮಾಡಿದರು.ನಗರಸಭೆ ಅಧ್ಯಕ್ಷೆ ಯಮನಮ್ಮ ಕರ್ನಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರು, ಕಚೇರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry