ಸಿಂಧನೂರು ಬಂದ್ ಭಾಗಶಃ ಯಶಸ್ವಿ

7
ಎಂಆರ್‌ಎಚ್‌ಎಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್‌ಗೆ ಖಂಡನೆ

ಸಿಂಧನೂರು ಬಂದ್ ಭಾಗಶಃ ಯಶಸ್ವಿ

Published:
Updated:

ಸಿಂಧನೂರು: ಬೆಳಗಾವಿ ಅಧಿವೇಶನದ ವೇಳೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಸುವರ್ಣ ಸೌಧದ ಮುಂದೆ ಹೋರಾಟ ನಡೆಸುತ್ತಿದ್ದ ಎಂಆರ್‌ಎಚ್‌ಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆಯನ್ನು ಖಂಡಿಸಿ ಮಾದಿಗ, ಛಲವಾದಿ ಮೀಸಲಾತಿ ಹೋರಾಟ ಸಮಿತಿ ಶುಕ್ರವಾರ ಕರೆ ನೀಡಿದ್ದ ಸಿಂಧನೂರು ಬಂದ್ ಭಾಗಶಃ ಯಶಸ್ವಿಯಾಯಿತು.ನಗರದ ಗಾಂಧಿ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಟೈರ್‌ಗಳಿಗೆ ಬೆಂಕಿ ಹಚ್ಚಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೆರವಣಿಗೆ ಮುಖಾಂತರ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.ಏಕಾಏಕಿ ಬಂದ್‌ಗೆ ಕರೆ ನೀಡಿದ್ದರಿಂದ ಅಂಗಡಿ ಮಾಲೀಕರು, ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಸ್ಥರು ತೊಂದರೆಗೊಳಗಾದರು. ಬಸ್ ಸಂಚಾರ ಸುಗಮವಾಗಿತ್ತು. ಎಂದಿನಂತೆ ಶಾಲಾ-ಕಾಲೇಜುಗಳು ನಡೆದವು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಶೇಖರಪ್ಪ ಗಿಣಿವಾರ, ಸ್ವಾತಂತ್ರ್ಯದ ಮುಂಚೆ ಹಾಗೂ ನಂತರದಲ್ಲಿ ದಲಿತರ ಮೇಲೆ ಮೇಲ್ವರ್ಗದ ದೌರ್ಜನ್ಯ ನಡೆಯುತ್ತಲೇ ಇದೆ. ಸವರ್ಣಿಯರ ಕುಮ್ಮಕ್ಕಿನಿಂದ ದಲಿತರ ಏಳಿಗೆ ಸಾಧ್ಯವಾಗುತ್ತಿಲ್ಲ. ಈಗ ಬಿಜೆಪಿ ಸರ್ಕಾರ ನಮ್ಮ ಹಕ್ಕುಗಳಿಗೆ ಹೋರಾಟ ಮಾಡುವ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ.ತಾನೇ ನೇಮಿಸಿದ ಸದಾಶಿವ ಆಯೋಗವು ಮಾದಿಗರಿಗೆ ಒಳಮೀಸಲಾತಿ ಕಲ್ಪಿಸಬೇಕೆಂದು ಶಿಫಾರಸು ಮಾಡಿದ್ದರೂ ಅದನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದರ ವಿರುದ್ಧ ಹೋರಾಟಕ್ಕಿಳಿದ ದಲಿತರ ಮೇಲೆ ಪೊಲೀಸರನ್ನು ಬಿಟ್ಟು ಹಲ್ಲೆ ಮಾಡಿಸಿದೆ ಎಂದು ಆರೋಪಿಸಿದರು.ನೂರಾರು ಕಾರ್ಯಕರ್ತರು ತಹಸೀಲ್ದಾರ ಕಚೇರಿಗೆ ತೆರಳಿ ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಸದಾಶಿವ ಆಯೋಗದ ವರದಿ ಕೂಡಲೇ ಜಾರಿ ಮಾಡಬೇಕು, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪಕುಮಾರರನ್ನು ಅಮಾನತುಗೊಳಿಸಬೇಕು, ಘಟನೆಯಲ್ಲಿ ಜಖಂಗೊಂಡ ಕಾರ್ಯಕರ್ತರ ವಾಹನಗಳಿಗೆ ಪರಿಹಾರ ಒದಗಿಸಬೇಕು, ಗೃಹಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ದಲಿತ ಮುಖಂಡರಾದ ನರಸಪ್ಪ ಕಟ್ಟಿಮನಿ, ಆರ್.ಅಂಬ್ರೂಸ್, ಯಮನಪ್ಪ ಮಲ್ಲಾಪುರ, ಎಚ್.ಎನ್.ಬಡಿಗೇರ, ಮಹದೇವ ಧುಮತಿ, ಕೆ.ಮರಿಯಪ್ಪ, ಹನುಮಂತಪ್ಪ ಮುದ್ದಾಪುರ, ಅಶೋಕ ನಂಜಲದಿನ್ನಿ, ಹನುಮೇಶ ಧುಮತಿ, ಮರಿಯಪ್ಪ ವಕೀಲ, ಅಲ್ಲಮಪ್ರಭು, ಪಿ.ಹನುಮಂತಪ್ಪ, ಪಂಪಾಪತಿ ಗುಡದೂರು, ಸಿ.ದಾನಪ್ಪ ಮಸ್ಕಿ, ವೆಂಕಟೇಶ ಗಿರಿಜಾಲಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry