ಶನಿವಾರ, ಮೇ 8, 2021
23 °C

ಸಿಂಧನೂರು ಬಯಲು `ರಂಗಮಂದಿರ!'

ಪ್ರಜಾವಾಣಿ ವಾರ್ತೆ/-ಡಿ.ಎಚ್.ಕಂಬಳಿ Updated:

ಅಕ್ಷರ ಗಾತ್ರ : | |

ಸಿಂಧನೂರು: ಪಟ್ಟಣದ ಸುಕಾಲಪೇಟೆ ರಸ್ತೆಯ ಹಳೆ ಶರಣಬಸವೇಶ್ವರ ಟಾಕೀಸ್ ಹತ್ತಿರದ  ನಿರ್ಮಾಣಗೊಳ್ಳುತ್ತಿರುವ ಬಹುನಿರೀಕ್ಷೆಯ ರಂಗಮಂದಿರ ಕಾಮಗಾರಿ ಸ್ಥಗಿತಗೊಂಡಿದೆ.ಇಲ್ಲಿನ ಪಿಲ್ಲರ್‌ಗಳ ಉಕ್ಕಿ ಕಂಬಿಗಳು ತುಕ್ಕು ಹಿಡಿಯುತ್ತಿವೆ. ಪಕ್ಕದಲ್ಲಿ ಚರಂಡಿ ನೀರು, ಹಂದಿಗಳ ಓಡಾಟದಿಂದ ಈ ಜಾಗವು ನಿಜಕ್ಕೂ ದನಗಳ  ಕೊಟ್ಟಿಗೆಯಾಗಿ ಮಾರ್ಪಟ್ಟಿದೆ. ತಾಲ್ಲೂಕಿನ ಕಲಾಸಕ್ತರ ಕನಸು ಇನ್ನೂ ಕನಸಾಗಿಯೇ ಉಳಿದಿದೆ.ಹಲವು ವರ್ಷಗಳಿಂದ ಸಾಹಿತ್ಯ ಮತ್ತು ಕಲಾಸಕ್ತರು ಒತ್ತಾಯ, ಮನವಿಗಳ ಮೂಲಕ ರಂಗಮಂದಿರ ನಿರ್ಮಾಣಕ್ಕಾಗಿ ಆಡಳಿತ ಯಂತ್ರ, ಜನಪ್ರತಿನಿಧಿಗಳು ಮೇಲೆ ನಿರಂತರ ಒತ್ತಡ ತಂದ ಹಿನ್ನೆಲೆಯಲ್ಲಿ ಮಾಜಿ ಶಾಸಕ ವೆಂಕಟರಾವ್ ನಾಡಗೌಡರ ಅವಧಿಯಲ್ಲಿ 1.30 ಕೋಟಿ ವೆಚ್ಚದ ರಂಗಮಂದಿರ ಕಾಮಗಾರಿ ಮಂಜೂರಾಗಿದೆ. ಆದರೆ ಕಾಮಗಾರಿ ಬುನಾದಿ ಹಂತದಲ್ಲೇ ಸ್ಥಗಿತಗೊಂಡಿದ್ದು ಕಲಾಸಕ್ತರ ಬೇಸರಕ್ಕೆ ಕಾರಣವಾಗಿದೆ.ಎಷ್ಟು ಅನುದಾನ? :ರಂಗಮಂದಿರದ ಅವಶ್ಯಕತೆಯನ್ನು ಮನಗಂಡು 1.10 ಕೋಟಿ ಅಂದಾಜು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 20 ಲಕ್ಷ, ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಮತ್ತು ವಿಜಯ್ ಮಲ್ಯ ಅವರ ಅನುದಾನದಿಂದ ತಲಾ 10 ಲಕ್ಷ, ವಿಧಾನ ಪರಿಷತ್ ಸದಸ್ಯ ಕೃಷ್ಣಪ್ಪ ಅನುದಾನದಿಂದ 6 ಲಕ್ಷ, ನಗರಸಭೆಯ ಸಿಆರ್‌ಜಿಎಫ್ ಅನುದಾನದಿಂದ 30 ಲಕ್ಷ ಸೇರಿದಂತೆ ಒಟ್ಟು 1.10 ಕೋಟಿ ಹಣ ಜಿಲ್ಲಾಧಿಕಾರಿಗಳ ಖಾತೆಗೆ ಜಮಾವಣೆಯಾಗಿದೆ.

ಹಣ ದುರ್ಬಳಕೆ : ಜಿಲ್ಲಾಧಿಕಾರಿಯು ಕಾಮಗಾರಿಯ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದಾರೆ. ಆದರೆ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕಾಮಗಾರಿ ಹಣ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾಮಗಾರಿ ಬುನಾದಿ ಬಿಟ್ಟು ಮೇಲೆದ್ದಿಲ್ಲ. ಅವ್ಯವಹಾರ ನಡೆಸಿದ ಅಧಿಕಾರಿಗಳು ಸಿಬಿಐ ತನಿಖೆಯನ್ನು ಎದುರಿಸುತ್ತಿರುವ ಕಾರಣ ಕಾಮಗಾರಿ ಇಂದಿಗೂ ವಿಳಂಬವಾಗುತ್ತಾ ಸಾಗಿದೆ.ಕಾರ್ಯಕ್ರಮ ಆಯೋಜನೆ ಕಷ್ಟ : ಸಿಂಧನೂರಿನಂತಹ ನಗರದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಷ್ಟದ ಕೆಲಸವೇ ಸರಿ. ಒಂದು ನಿರ್ದಿಷ್ಟ ಸ್ಥಳದ ಕೊರತೆ ಕಲಾಸಕ್ತರನ್ನು ಹಲವು ದಿನಗಳಿಂದ ಕೊರಗುವಂತೆ ಮಾಡಿದೆ. ಬಹುತೇಕ ಕಾರ್ಯಕ್ರಮಗಳು ತಾಲ್ಲೂಕು ಪಂಚಾಯಿತಿ ಆವರಣ ಇಲ್ಲವೇ ನಗರಸಭೆ ಮೈದಾನದಲ್ಲಿ ನಡೆಯುತ್ತವೆ. ಜಾಗಕ್ಕಾಗಿ   ಅಧಿಕಾರಿಗಳ ದುಂಬಾಲು ಬಿಳಬೇಕಾಗಿದೆ. ಹೊರಾಂಗಣದಲ್ಲಿ ಕಾರ್ಯಕ್ರಮ ನಡೆಯುವಾಗ ಮಳೆ ಅಥವಾ ವಾತಾವರಣ ವೈಪರಿತ್ಯ ಕಂಡುಬಂದರೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದ ಕಾರ್ಯಕ್ರಮ ಸ್ಥಗಿತಗೊಂಡು ಅಸ್ತವ್ಯಸ್ತವಾಗುತ್ತದೆ.ನಾಟಕ, ಸಾಹಿತ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಕನ್ನಡ ಸಾಂಸ್ಕೃತಿಕ ಭವನ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ. ಇದರಿಂದ ಕಾರ್ಯಕ್ರಮಗಳ  ಆಯೋಜನೆಗೆ ಸಂಘ-ಸಂಸ್ಥೆಗಳು ಹಿಂದೇಟು ಹಾಕುತ್ತಿವೆ.

       

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.