ಬುಧವಾರ, ಜೂನ್ 16, 2021
28 °C

ಸಿಂಧು, ಕಶ್ಯಪ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಿ. ಕಶ್ಯಪ್, ಅಜಯ್ ಜಯರಾಮ್ ಮತ್ತು ಪಿ.ವಿ. ಸಿಂಧು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು.ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಕಶ್ಯಪ್ 13-21, 21-15, 9-21 ರಲ್ಲಿ ಜರ್ಮನಿಯ ಮಾರ್ಕ್ ವೆಬ್ಲರ್ ಕೈಯಲ್ಲಿ ಪರಾಭವಗೊಂಡರು. ಒಂದು ಗಂಟೆ ಐದು ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಹೋರಾಟದ ಬಳಿಕ ಕಶ್ಯಪ್ ಎದುರಾಳಿಗೆ ಶರಣಾದರು.ಅಜಯ್ ಜಯರಾಮ್ 18-21, 15-21 ರಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಚೀನಾದ ಲಿನ್ ಡಾನ್ ಎದುರು ಸೋಲು ಅನುಭವಿಸಿದರು.ಸಿಂಧು ಕೂಡಾ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮುಗ್ಗರಿಸಿದರು. ಚೈನೀಸ್ ತೈಪೆಯ ಸು ಯಿಂಗ್ ತಾಯ್ 14-21, 21-16, 21-19 ರಲ್ಲಿ ಭಾರತದ ಪ್ರತಿಭಾನ್ವಿತ ಆಟಗಾರ್ತಿಯ ವಿರುದ್ಧ ಜಯ ಪಡೆದರು. ಮೊದಲ ಸೆಟ್‌ನಲ್ಲಿ ಗೆದ್ದ ಸಿಂಧು ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಆದರೆ ಸು ಯಿಂಗ್ ಅದಕ್ಕೆ ಅವಕಾಶ ನೀಡಲಿಲ್ಲ.ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಮಲೇಷ್ಯದ ಪೆಂಗ್ ಸೂನ್ ಚಾನ್- ಲಿಯು ಯಿಂಗ್ ಗೊ 21-14, 21-12 ರಲ್ಲಿ ವಿ. ದಿಜು- ಜ್ವಾಲಾ ಗುಟ್ಟಾ ಅವರನ್ನು ಮಣಿಸಿದರು. ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ರೂಪೇಶ್ ಕುಮಾರ್- ಸನಾವೆ ಥಾಮಸ್ 22-24, 17-21 ರಲ್ಲಿ ಜರ್ಮನಿಯ ಇಂಗೊ ಕಿಂಡರ್‌ವೇಟರ್- ಜೊಹಾನೆಸ್ ಶ್ಕಾಟ್ಲರ್ ಎದುರು ನಿರಾಸೆ ಅನುಭವಿಸಿದರು.ಗುರುವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜ್ವಾಲಾ ಗುಟ್ಟಾ- ಅಶ್ವಿನಿ ಪೊನ್ನಪ್ಪ 10-21, 15-21 ರಲ್ಲಿ ಚೀನಾದ ಕ್ವಿಂಗ್ ತಿಯಾನ್- ಯುನ್‌ಲೀ ಜಾವೊ ಎದುರು ಪರಾಭವಗೊಂಡರು. ಇದೀಗ ಸೈನಾ ನೆಹ್ವಾಲ್ (ಮಹಿಳೆಯರ ಸಿಂಗಲ್ಸ್) ಮಾತ್ರ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಭರವಸೆ ಎನಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.