ಮಂಗಳವಾರ, ಜೂನ್ 22, 2021
28 °C

ಸಿಂಧು ಬ್ಲಾಗಿನ ದಂಡೆಯಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧು ಬ್ಲಾಗಿನ ದಂಡೆಯಲ್ಲಿ...

“ರಾಜ್‌ಕುಮಾರ ನನ್ನ ಮಗಳ ನೆಚ್ಚಿನ ಮಾಮ. ಅವಳು ಅವನನ್ನು ಕರೆಯುವುದೇ `ಎಲ್ಲೂ ಹೋಗಲ್ಲ ಮಾಮ~ ಎಂದು. ಅವನ ಹಳೆಯ ಕೆಲವು ಹಾಡುಗಳು ಅವಳ ಫೇವರಿಟ್ಟು.ನಗುನಗುತಾ ನಲಿ, ಬಾನಿಗೊಂದು ಎಲ್ಲೆ ಎಲ್ಲಿದೆ, ಆಗದು ಎಂದು, ಸಿಹಿಮುತ್ತು ಸಿಹಿಮುತ್ತು ನಂಗೊಂದು, ಥೈ ಥೈ ಬಂಗಾರಿ, ಇಫ್ ಯೂ ಕಮ್ ಟುಡೇ, ಒಂದು ಎರಡು ಮೂರು ನಾಕು ಆಮೇಲೆ ಏನು, ಲಾಲಿ ಲಾಲಿ ಸುಕುಮಾರ.. ಇತ್ಯಾದಿ. ರಾಜ್‌ಕುಮಾರ್‌ನ ಯಾವ ಹಾಡು ಟೀವಿಯಲ್ಲಿ ಬಂದರೂ ಹತ್ತಿರ ಹೋಗಿ ನಿಂತು ನೋಡುತ್ತಾ ಕೇಳುತ್ತಾ ಇರುತ್ತಾಳೆ.

 

ಮೊದಮೊದಲು ನಾವು ಅವಳನ್ನ ಬೆಳಗ್ಗೆ ಪ್ಲೇಹೋಮಿಗೆ ಬಿಡುವಾಗ, ಮೇಲೆ ಆಕಾಶ ನೋಡಿ ಟಾಟಾ ಮಾಡುತ್ತಿದ್ದಳು. ಏನೆಂದು ಕೇಳಿದರೆ, ನಕ್ಷತ್ರವಾಗಿರುವ ಎಲ್ಲೂ ಹೋಗಲ್ಲ ಮಾಮಂಗೆ ಟಾಟಾ ಎಂದು ವಿವರಿಸಿದ್ದಳು”.ಹೀಗೆ, ತಮ್ಮ ಮಗಳ ಬಗ್ಗೆ, ಮಗಳ ರಾಜ್‌ಪ್ರೀತಿಯ ಬಗ್ಗೆ ಹೇಳಿಕೊಳ್ಳುವ ಸಿಂಧು, ತಮಗೆ ಸಂಬಂಧಿಸಿದಂತೆ ಹೇಳಿಕೊಳ್ಳುವ ವಿಷಯದಲ್ಲಿ ಕೊಂಚ ಜಿಪುಣರೇ. `ನನ್ನ ಬಗ್ಗೆ ಹೇಳಿಕೊಳ್ಳೋಕೇನಿದೆ. ಅಂಥದ್ದೇನೂ ಇಲ್ಲ. ನಾನೊಬ್ಬಳು ಪ್ರಕೃತಿಯ ಉತ್ಕಟ ಆರಾಧಕಿ~ ಎಂದಷ್ಟೇ ಮಾತು ಮುಗಿಸುತ್ತಾರೆ. ಇರಲಿ, ಬರಹಗಳ ಮೂಲಕವೇ ಅವರನ್ನು ಪರಿಚಯಿಸಿಕೊಳ್ಳೋಣ.ನೆನಪು-ನೇವರಿಕೆ ( www.nenapu-nevarike.blogspot.in ) ಅವರ ಬ್ಲಾಗ್ ಹೆಸರು. ಹೆಸರಿಗೆ ತಕ್ಕಂತೆ ಅದರ ತುಂಬಾ ಭಾವನೆಗಳ ಮೆರವಣಿಗೆ. ಸಿಂಧು ಅವರಿಗೆ ಗದ್ಯವೂ ಪ್ರಿಯ, ಪದ್ಯವೂ ಹೃದ್ಯ. `ಸುಳಿದು ನಿನ್ನ ನೆನಪು / ಕತ್ತಲ ಮನದಂಗಳದ ತುಂಬ ಬೆಳಕು~ ಎಂದವರು ಭಾವುಕವಾಗಿ ಬರೆಯಬಲ್ಲರು. ಊರುಬಿಟ್ಟು ಹೋದ ಗೆಳೆಯನ ನೆನಪಲ್ಲಿ ಬದುಕಿನ ವೈರುಧ್ಯಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಈ ಬ್ಲಾಗತಿ, ಗಜಲ್ ಮತ್ತು ಗಜಲ್‌ಕಾರರ ಬಗ್ಗೆ ಆಪ್ತವಾಗಿ ಬರೆಯಬಲ್ಲರು. ಗದ್ಯ ಸಾಕೆನಿಸಿದಾಗ, ಹಲ್ಲುನೋವಿನ ಬಗ್ಗೆ ಪದ್ಯ ಬರೆಯುವರು.ಬ್ಲಾಗಿನ ಹೆಸರಷ್ಟೇ ನವಿರಾದ ಭಾಷೆ ಸಿಂಧು ಅವರದು. ವೈಚಾರಿಕತೆಯ ಭಾರವಿಲ್ಲದ, ವಾಚ್ಯವೂ ಅಲ್ಲದ ಬರವಣಿಗೆ `ನೆನಪು-ನೇವರಿಕೆ~ಯ ಬರಹಗಳಲ್ಲಿದೆ. ಒಂದು ಉದಾಹರಣೆ ನೋಡಿ-“ಅಕ್ಷರ, ಸಾಹಿತ್ಯ, ಸಂಗೀತ, ಲಯ ಎಲ್ಲವೂ ತುಂಬ ಪರಿಶ್ರಮ ಬೇಡುತ್ತವೆ. ಕರೋಕೆ ಸೀಡಿಗಳನ್ನಿಟ್ಟು ಕವಿತೆ ತುಂಬಿಸುವುದು, ಎಲ್ಲೆಲ್ಲಿಂದಲೂ ಕದ್ದ ರಾಗಗಳನ್ನಿಷ್ಟು ಮಿಸಳ್ ಭಾಜಿ ಮಾಡುವುದು ಹೊಸದೇನಲ್ಲ. ಎಲ್ಲರೂ ಅನಂತಸ್ವಾಮಿ, ಅಶ್ವತ್ಥ ಆಗುವುದಿಲ್ಲ. ಎಲ್ಲ ಅಸಂಗತ ಕವಿತೆಗಳೂ ಗೋಪಿ ಮತ್ತು ಗಾಂಡಲೀನ ಎನಿಸುವುದಿಲ್ಲ. ದೂರದ ನಕ್ಷತ್ರದತ್ತ ಕಣ್ಣು ನೆಟ್ಟವನ ಕೈಗಳಲ್ಲಿ ಮನೆಯ ಸುತ್ತಲಿನ ಕತ್ತಲಿಗೆ ಒಂದು ಹಣತೆ ಬೆಳಗುವ ಕೆಲಸ ಮಾಡಬೇಕೆಂಬ ತೀವ್ರತೆ ಎಲ್ಲರಿಗೂ ಅನಿಸುವುದೂ ಇಲ್ಲ. ದೀಪು ಮಾಡಿದ್ದು ಇಂತಹ ಪ್ರಯತ್ನ. ಊರಿಂದ ಬಂದು ಇಲ್ಲಿ ನೆಲೆಸಿದವರ ಹಾಗೆ ಹಳಹಳಿಕೆಗೆ ಬಲಿಯಾಗದೆ, ಯುವ ಸಹಜ ಉತ್ಸಾಹವನ್ನು ಮೊಟಕುಗೊಳಿಸದೆ ತನ್ನ ಚೈತನ್ಯಕ್ಕೊಂದು ಹರಿವನ್ನು ತಾನೇ ಒದಗಿಸಿಕೊಂಡ ಈ ಪ್ರಯತ್ನವನ್ನು ಮೆಚ್ಚಲೇಬೇಕು. ಅಭಿನಂದಿಸಲೇಬೇಕು. ಇಷ್ಟಕ್ಕೂ ಇವನು ಮಾಡಿದ್ದು ಏನು? ಅನಿಸಿದ ಕೂಡಲೆ ಸಂಗೀತ ಕಲಿಯಲು ಹೊರಟಿದ್ದು. ಗಿಟಾರು ಕೊಂಡಿದ್ದಲ್ಲದೇ, ಕೀ ಬೋರ್ಡನ್ನೂ ಕಲಿತಿದ್ದು, ಗೆಳೆಯ-ಗೆಳತಿಯರ ಗುಂಪಲ್ಲಿ ಕವಿತೆ ಹುಡುಕಿದ್ದು, ಮಾತುಗಳ ಸೇತುವೆಯಲ್ಲಿ ಆಲ್ಬಂ ಮಾಡಲು ಬೇಕಿರುವ ನಂಟು ಹುಡುಕಿದ್ದು, ಸ್ಟುಡಿಯೋ ರೆಕಾರ್ಡಿಂಗ್, ಕೋ-ಆರ್ಡಿನೇಶನ್, ಗಾಯಕ-ಗಾಯಕಿಯರ ಆಯ್ಕೆ ಮತ್ತು ಮನವೊಲಿಕೆ, ಓಡಾಟ, ಹೊಂದಾಣಿಕೆ, ಕಾರ್ಯಕ್ಷಮತೆ ಎಲ್ಲವನ್ನೂ ನಿಭಾಯಿಸಿದ್ದು. ಇದೆಲ್ಲದರ ಒಟ್ಟು ಮೊತ್ತವೇ - ಒಂಬತ್ತು ಭಾವದಲೆಗಳ ಮೆಲುದನಿಯನ್ನು ಸೀಡಿಯಲ್ಲಿ ಮೆಲೋಡಿಯಾಗಿ ಕೇಳಿಸಿದ್ದು”

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.