ಭಾನುವಾರ, ನವೆಂಬರ್ 17, 2019
21 °C

ಸಿಂಧ್ಯ-ಡಿಕೆಶಿ ಸಮರ

Published:
Updated:

ರಾಮನಗರ: ಡಾ. ಡಿ.ಎಂ.ನಂಜುಂಡಪ್ಪ ಅವರ ಪ್ರಾದೇಶಿಕ ಅಸಮತೋಲನ ವರದಿ ಪ್ರಕಾರ ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಮಾಜಿ ಸಚಿವರೂ, ಪ್ರಭಾವಿ ನಾಯಕರು ಚುನಾವಣಾ ಕಣಕ್ಕೆ ಇಳಿದಿರುವುದರಿಂದ ಇಡೀ ರಾಜ್ಯದ ಗಮನ ಸೆಳೆದಿದೆ.ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಹಾಗೂ ಹಾಲಿ ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಕಾರ್ಯಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ನಡುವೆ ಇಲ್ಲಿ ನೇರಾ ಹಣಾಹಣಿ ಎದುರಾಗಿದೆ. ಆದ್ದರಿಂದ ಈ ಕ್ಷೇತ್ರ ರಾಜ್ಯಮಟ್ಟದಲ್ಲಿ ಕುತೂಹಲ ಕೆರಳಿಸಿದ್ದು, ತೀವ್ರ        ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.ಸಿಂಧ್ಯ ಅವರು ಏಳನೇ ಬಾರಿ ಮತ್ತು       ಶಿವಕುಮಾರ್ ಆರನೇ ಬಾರಿ ವಿಧಾನಸಭೆ    ಪ್ರವೇಶಿಸಲು ಚುನಾವಣಾ ಅಖಾಡಕ್ಕೆ         ಇಳಿದಿದ್ದಾರೆ. ಜನತಾ ಪರಿವಾರದ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಸಿಂಧ್ಯ ಹಣಕಾಸು, ಗೃಹ, ಸಾರಿಗೆ, ಕೈಗಾರಿಕೆ ಮೊದಲಾದ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಬಂದೀಖಾನೆ, ನಗಾರಭಿವೃದ್ಧಿ, ಸಹಕಾರ ಇಲಾಖೆ ಸಚಿವರಾಗಿ ಕೆಲಸ ಮಾಡಿದ್ದರು. ರಾಜ್ಯದ ಇಬ್ಬರು ಪ್ರಭಾವಿ ನಾಯಕರು ಈ ಭಾಗದಿಂದ ಆಯ್ಕೆಯಾಗಿದ್ದರೂ ಕ್ಷೇತ್ರ ಮಾತ್ರ ಅಭಿವೃದ್ಧಿ ದೃಷ್ಟಿಯಲ್ಲಿ  ಹಿಂದಿದೆ ಎಂಬುದು ಈ ಭಾಗದ ಮತದಾರರ ಅಳಲು.ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮಗಳ ರಸ್ತೆಗಳು ಡಾಂಬರು ಕಂಡಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನ ರೋಸಿ ಹೋಗಿದ್ದಾರೆ. ಅನಕ್ಷರತೆ, ಬಡತನ ತಾಂಡವಾಡುತ್ತಿದೆ.     ಬೆಂಗಳೂರಿಗೆ ಅನತಿ ದೂರದಲ್ಲೇ ಇದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಅಷ್ಟೇನೂ ಸಾಧನೆ ಆಗಿಲ್ಲ ಎಂಬ ಕೊರಗು ಇಲ್ಲಿನ ಜನರದ್ದಾಗಿದೆ. ಇದರ ಜತೆಗೆ ಕನಕಪುರ ತಾಲ್ಲೂಕಿನಾದ್ಯಂತ ಅಕ್ರಮ ಗ್ರಾನೈಟ್ ಮತ್ತು ಕಲ್ಲು, ಮರಳು ಗಣಿಗಾರಿಕೆ ನಿರಾತಂಕವಾಗಿ ಸಾಗಿದೆ. ಪ್ರಾಕೃತಿಕ ಸಂಪತ್ತಿನ ಲೂಟಿ ಆಗುತ್ತಿದ್ದರೂ ಸಂಬಂಧಿಸಿದವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬುದು ಜನರ ದೂರು.ಕ್ಷೇತ್ರದ ವೈಶಿಷ್ಟ್ಯ: ಬೆಂಗಳೂರಿನಿಂದ ಕೂಗಳತೆ ದೂರದಲ್ಲಿ ಇರುವ ಕನಕಪುರ ವಿಧಾನಸಭಾ ಕ್ಷೇತ್ರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಒಳಗೊಂಡಿರುವ ತಾಲ್ಲೂಕು ಇದು. ಕರ್ನಾಟಕ ಮತ್ತು  ತಮಿಳುನಾಡು ರಾಜ್ಯದ ಗಡಿ ಭಾಗವು ಈ ಜಿಲ್ಲೆಗೆ ಅಂಟಿಕೊಂಡೇ ಇದೆ. ಇಲ್ಲಿನ       ಸಂಗಮದ ಮೂಲಕವೇ ಹರಿಯುವ ಕಾವೇರಿ ನದಿ ತಮಿಳುನಾಡು ಸೇರುತ್ತದೆ. ಸೋಲಿಗರೂ ಸೇರಿದಂತೆ ವಿವಿಧ ಬಗೆಯ ಬುಡಕಟ್ಟು ಜನರು ತಾಲ್ಲೂಕಿನಲ್ಲಿ ನೆಲೆಸಿದ್ದಾರೆ.ಕಸಬಾ, ಸಾತನೂರು, ಉಯ್ಯಂಬಳ್ಳಿ, ಕೋಡಿಹಳ್ಳಿ, ಮರಳವಾಡಿ, ಹಾರೋಹಳ್ಳಿ ಹೋಬಳಿ ಕನಕಪುರ ತಾಲ್ಲೂಕು ವ್ಯಾಪ್ತಿಗೆ ಬರುತ್ತದೆಯಾದರೂ, ಮರಳವಾಡಿ ಮತ್ತು ಹಾರೋಹಳ್ಳಿ ಹೋಬಳಿಗಳು 2008ರ ಕ್ಷೇತ್ರ ಮರು ವಿಂಗಡಣೆ ನಂತರ ಪಕ್ಕದ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ.ಸ್ವಾತಂತ್ರ್ಯಾ ನಂತರ ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿ ಮತ್ತು ಕನಕಪುರದ ಸಾತನೂರು ಹೋಬಳಿ ಸೇರಿ ವಿರೂಪಾಕ್ಷಿಪುರ ವಿಧಾನಸಭಾ ಕ್ಷೇತ್ರ ಅಸ್ತಿತ್ವದಲ್ಲಿತ್ತು. ತದನಂತರ 1967ರಲ್ಲಿ ವಿರೂಪಾಕ್ಷಿಪುರ ಕ್ಷೇತ್ರವು ಸಾತನೂರು ವಿಧಾನಸಭಾ ಕ್ಷೇತ್ರವಾಗಿ ನಾಮಕರಣವಾಯಿತು. 2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಸಾತನೂರು ಕ್ಷೇತ್ರವು ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಲೀನವಾಯಿತು. ವಿರೂಪಾಕ್ಷಿಪುರ ಹೋಬಳಿಯು ಚನ್ನಪಟ್ಟಣದಲ್ಲಿ ಸೇರ್ಪಡೆಯಾಯಿತು.ಸಜ್ಜನರ ರಾಜಕಾರಣ:  ಸ್ವಾತಂತ್ರ್ಯ ನಂತರ ತಾಲ್ಲೂಕಿನ ಕನಕಪುರ, ಸಾತನೂರು ಕ್ಷೇತ್ರಗಳಿಂದ ಸಜ್ಜನ ರಾಜಕಾರಣಿಗಳು ಆಯ್ಕೆಯಾಗಿದ್ದರು. ಕನಕಪುರ ತಾಲ್ಲೂಕಿನ ಇಡೀ ಜನ ನೆನಸಿಕೊಳ್ಳುವ ಶಿಕ್ಷಣ ಕ್ಷೇತ್ರದ ಸಾಧಕ, ಗಾಂಧಿವಾದಿ ದಿವಂಗತ ಎಸ್. ಕರಿಯಪ್ಪ ಅವರು ವಿರೂಪಾಕ್ಷಿಪುರ, ಕನಕಪುರ ಕ್ಷೇತ್ರಗಳಿಂದ ಆಯ್ಕೆಯಾಗಿದ್ದರು. ಅವರು ಕನಕಪುರದಲ್ಲಿ ಸ್ಥಾಪಿಸಿರುವ ರೂರಲ್ ಕಾಲೇಜು ಇಂದಿಗೂ ಸಹಸ್ರಾರು ಜನರಿಗೆ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿದೆ. ಕರಿಯಪ್ಪ ಅವರನ್ನು ಕನಕಪುರದ ಗಾಂಧಿ ಎಂದೂ ಕರೆಯುವುದುಂಟು.ವಿರೂಪಾಕ್ಷಿಪುರ/ ಸಾತನೂರು ಕ್ಷೇತ್ರದಿಂದ ಕಾಡಳ್ಳಿ ಶಿವಲಿಂಗೇಗೌಡ ಮೂರು ಬಾರಿ ಆಯ್ಕೆಯಾಗಿದ್ದರು. 1983ರ ಚುನಾವಣೆಯಲ್ಲಿ ಹೊಳೆನರಸಿಪುರ ಮತ್ತು ಸಾತನೂರು ಎರಡೂ ಕಡೆ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡ ಅವರು ಎರಡೂ ಕಡೆ ಗೆಲುವು ಪಡೆದಿದ್ದರು. ಎರಡು ತಿಂಗಳಲ್ಲಿ ಸಾತನೂರು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. 1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಡಿ.ಕೆ.ಶಿವಕುಮಾರ್‌ಗೆ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್    ಕೈತಪ್ಪಿತ್ತು. ಇದರಿಂದ ಅವರು ಪಕ್ಷೇತರರಾಗಿ ನಿಂತು ಗೆಲುವು ದಾಖಲಿಸಿದ್ದರು.ಆ ನಂತರ ಪುನಃ ಕಾಂಗ್ರೆಸ್ ಸೇರಿದ್ದ ಅವರು, 2004ರವರೆಗೆ ಸಾತನೂರು ಕ್ಷೇತ್ರದಿಂದ, 2008ರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 1985ರಿಂದ      ದೇವೇಗೌಡರ ಎದುರು ಸೋತಿದ್ದ ಶಿವಕುಮಾರ್, 1999ರಲ್ಲಿ ಎಚ್.ಡಿ.ಕುಮಾರಸ್ವಾಮಿ  ಅವರನ್ನು ಸಾತನೂರು ಕ್ಷೇತ್ರದಲ್ಲಿ ಸೋಲಿಸಿ   ವಿಧಾನಸಭೆ ಪ್ರವೇಶಿಸಿದ್ದರು.ಪಿ.ಜಿ.ಆರ್.ಸಿಂಧ್ಯ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 1983ರಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1983ರ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದ ಸಿಂಧ್ಯ ಅವರು ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆಗ ಕನಕಪುರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಹೆಗಡೆ ಆರಿಸಿ ಬಂದಿದ್ದರು. ಆ ನಂತರ 1985ರಿಂದ 2004ರವರೆಗೆ ಸತತವಾಗಿ ಸಿಂಧ್ಯ ಶಾಸಕರಾಗಿ ಆಯ್ಕೆಯಾದರು.ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಸಿಂಧ್ಯ ಜನತಾ ಪರಿವಾರ ತೊರೆದು ಬಿಎಸ್‌ಪಿ ಸೇರಿ2008ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಆ ಚುನಾವಣೆಯಲ್ಲಿ ಸಾತನೂರು ಕ್ಷೇತ್ರವು ಕನಕಪುರದಲ್ಲಿ ಲೀನವಾಗಿದ್ದರಿಂದ ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ, ಜಯ ಸಾಧಿಸಿದರು.

ಪ್ರತಿಕ್ರಿಯಿಸಿ (+)