ಶನಿವಾರ, ಜುಲೈ 24, 2021
26 °C

ಸಿಆರ್‌ಪಿಎಫ್‌ಗೆ ನಿವೃತ್ತ ಯೋಧರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನಕ್ಸಲರ ವಿರುದ್ಧ ಕಾರ್ಯಾಚರಣೆಗಾಗಿ ಸೇನೆಯಿಂದ ನಿವೃತ್ತರಾದ 2000 ಯೋಧರು ಮತ್ತು ಸಿಬ್ಬಂದಿ ವರ್ಗದವರನ್ನು ಸಿಆರ್‌ಪಿಎಫ್‌ಗೆ ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ನಿವೃತ್ತ ಯೋಧರು ಮತ್ತು ಸಿಬ್ಬಂದಿ ವರ್ಗದವರು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿಗೆ ತರಬೇತಿ ನೀಡಿ ನಕ್ಸಲರ ವಿರೋಧ ಕಾರ್ಯಾಚರಣೆಗೆ ನೆರವು ನೀಡಲಿದ್ದಾರೆ. ಸೇನೆಯಲ್ಲಿದ್ದ ಸುರಂಗ ತೋಡುವ ದಳದವರನ್ನು ವಿವಿಧ ರಾಜ್ಯಗಳಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ನಿಯೋಜಿಸಿರುವ ಸಿಆರ್‌ಪಿಎಫ್‌ನ ಪ್ರತಿಯೊಂದು ಬೆಟಾಲಿಯನ್‌ಗೂ ಶೀಘ್ರದಲ್ಲಿ ನೇಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.ನಕ್ಸಲರು ನೆಲಬಾಂಬ್ ಮತ್ತು ಅತ್ಯಾಧುನಿಕ ಸ್ಫೋಟಕ ಸಾಮಗ್ರಿಯಿಂದ (ಐಇಡಿ) ದೇಶದ ವಿವಿಧೆಡೆ ಕಳೆದ ವರ್ಷ ನಡೆಸಿದ ವಿಧ್ವಂಸಕ ಕೃತ್ಯಗಳಿಂದ ಸಿಆರ್‌ಪಿಎಫ್‌ನ ಸುಮಾರು 150 ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಐಇಡಿ ಮತ್ತು ನೆಲಬಾಂಬ್‌ಗಳನ್ನು ಪತ್ತೆ ಹಚ್ಚಲು ನಿವೃತ್ತ ಸೇನಾ ಯೋಧರು ಮತ್ತು ಸಿಬ್ಬಂದಿ ವರ್ಗದವರನ್ನು ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಮೂಲಗಳು ಹೇಳಿವೆ.

 

‘ನಕ್ಸಲರು ವಿಧ್ವಂಸಕ ಕೃತ್ಯಕ್ಕೆ ಬಳಸುವ ಐಇಡಿ ಮತ್ತು ಹೂತಿಟ್ಟ ನೆಲಬಾಂಬುಗಳು ಅನೇಕ ಸಾರಿ ಕಾರ್ಯಾಚರಣೆಯನ್ನು ವಿಫಲಗೊಳಿಸಿವೆ. ಕೆಲವೊಂದು ಪ್ರಕರಣಗಳಲ್ಲಿ ನಕ್ಸಲರು 30 ಆಡಿ ಆಳದಲ್ಲಿ ನೆಲಬಾಂಬ್‌ಗಳನ್ನು ಹೂತಿಟ್ಟ ನಿದರ್ಶನಗಳೂ ಇವೆ. ಅಷ್ಟೊಂದು ಆಳದಲ್ಲಿ ನೆಲಬಾಂಬ್‌ಗಳಿದ್ದರೆ ಅದನ್ನು ಪತ್ತೆ ಮಾಡುವ ಸಾಧನಗಳು ಇಲ್ಲವೆ ತರಬೇತಿ ಪಡೆದ ಶ್ವಾನಗಳು ಸಹ ಗುರುತು ಹಚ್ಚಲಾರವು’ ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ದೇಶದ ವಿವಿಧೆಡೆ ನಕ್ಸಲರ ದಮನಕ್ಕೆ  ಸಿಆರ್‌ಪಿಎಫ್‌ನ 62 ಬೆಟಾಲಿಯನ್‌ಗಳನ್ನು ನಿಯೋಜಿಸಲಾಗಿದ್ದು, ಪ್ರತಿಯೊಂದು ಬೆಟಾಲಿಯನ್‌ಗೂ 35 ಮಂದಿಯಂತೆ ನಿವೃತ್ತ ಯೋಧರು/ಸಿಬ್ಬಂದಿ ವರ್ಗದವರನ್ನು ನೇಮಿಸಲಾಗುವುದು ಎಂದು ಅವರು ಹೇಳಿದರು.ಸೇನೆಯಿಂದ ನಿವೃತ್ತರಾದ 434 ಕಿರಿಯ ದರ್ಜೆಯ ಕಮಿಷನ್ಡ್ ಅಧಿಕಾಕಾರಿಗಳು ಮತ್ತು 1,736 ಕಮಿಷನ್ಡ್ ದರ್ಜೆಯಲ್ಲದ ಅಧಿಕಾರಿಗಳನ್ನು ಸಿಆರ್‌ಪಿಎಫ್‌ಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.