ಸೋಮವಾರ, ಜನವರಿ 20, 2020
18 °C

ಸಿಇಟಿ ಕಾಯಿದೆ ವಿರೋಧಿಸಿ ಎಬಿವಿಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ನೂತನ ಸಿಇಟಿ ಕಾಯಿದೆ ಜಾರಿಗೊಳಿಸುವ ಸರ್ಕಾರದ ಕ್ರಮ­ವನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಬುಧವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಸಂಚಾಲಕ ಅರವಿಂದ ಉಪ್ಪಿನ್ ಮಾತನಾಡಿ, ಸರ್ಕಾರದ ಹೊಸ ಸಿಇಟಿ ನೀತಿಯಿಂದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾ­ಯ­­­­ವಾಗಲಿದೆ. ಬಡವರು ವೃತ್ತಿಪರ ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ 10 ಸರ್ಕಾರಿ ಹಾಗೂ 32 ಖಾಸಗಿ ವೈದ್ಯಕೀಯ ಕಾಲೇಜು­ಗಳಿವೆ. 9 ಸ್ವಾಯತ್ತ ವಿಶ್ವವಿದ್ಯಾಲಯ­ಗಳಿವೆ. ಖಾಸಗಿ ಕಾಲೇಜುಗಳಲ್ಲಿನ ಶೇ 50ರಷ್ಟು ಸೀಟುಗಳು ಸೇರಿ ಕಳೆದ ವರ್ಷ ಸಿಇಟಿ ಮೂಲಕ ಹಂಚಿಕೆಗೆ 2,591 ಸೀಟುಗಳು ಲಭ್ಯವಾಗಿದ್ದವು.ಹೊಸ ಕಾಯಿದೆ ಜಾರಿಯಿಂದ ಸೀಟುಗಳ ಸಂಖ್ಯೆ 1,150ಕ್ಕೆ ಸೀಮಿತ­ವಾಗಲಿದೆ. ಸ್ವಾಯತ್ತ ವಿಶ್ವವಿದ್ಯಾಲಯ­ಗಳ ವಿಚಾರ ಏನಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 198 ಎಂಜಿನಿ­ಯ­­ರಿಂಗ್ ಕಾಲೇಜುಗಳಿವೆ. ಕಳೆದ ವರ್ಷ 49,580 ಸೀಟುಗಳು ಲಭ್ಯವಿದ್ದವು, 12 ಸರ್ಕಾರಿ ಮತ್ತು 9 ಅನುದಾನಿತ ಕಾಲೇಜುಗಳಲ್ಲಿ ಈ ಬಾರಿ ಕೇವಲ 6,150 ಸೀಟುಗಳಿಗೆ ಮಾತ್ರ ಲಭ್ಯವಾಗಲಿವೆ. 2 ಸರ್ಕಾರಿ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ 20 ಸೀಟುಗಳು ಪ್ರವೇಶಕ್ಕೆ ಸಿಗಲಿವೆ ಎಂದು ವಿವರಿಸಿದರು.ಕಾಮೆಡ್‌–ಕೆ, ಪೋಷಕರಿಂದ ಹಣ ಬಾಚಿಕೊಳ್ಳುವ ಒಕ್ಕೂಟವಾಗಿದೆ, ಇಲ್ಲಿ ಯಾವುದೇ ಕಾನೂನು, ನೀತಿ ನಿಯಮ­ಗಳು ಪಾರದರ್ಶಕವಾಗಿಲ್ಲ, ವೈದ್ಯ­ಕೀಯ, ದಂತ ವೈದ್ಯಕೀಯ, ಎಂಜಿನಿಯ­ರಿಂಗ್ ಸೀಟುಗಳನ್ನು ಬ್ಲಾಕ್ ಮಾಡುವ ಒಕ್ಕೂಟವಾಗಿದೆ. ಕಾಮೆಡ್‌­–­ಕೆ ಮೇಲೆ ಶುಲ್ಕ ಮೇಲುಸ್ತುವಾರಿ ಸಮಿತಿ ನೀಡಿದ ದೂರುಗಳನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಒಂದೇ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕು, ಶೇ 50ರಷ್ಟು ಸೀಟುಗಳಿಗೆ ಈಗಿರುವಂತೆ ಸರ್ಕಾರದ ಶುಲ್ಕವನ್ನು ಮುಂದುವರಿಸಬೇಕು, ಉಳಿದ ಶೇ 50 ಸೀಟುಗಳಿಗೆ ಆಡಳಿತ ಮಂಡಳಿ­ಗಳೊಂದಿಗೆ ಕುಳಿತು ಶುಲ್ಕ ನಿರ್ಧರಿಸ­ಬೇಕು, 2006ರ ಕಾಯ್ದೆಯನ್ನು ಜಾರಿಗೊಳಿಸಬಾರದು, ಈ ಹಿಂದೆ ಸುಪ್ರೀಂಕೋರ್ಟ್‌ ನೀಡಿದ ವೃತ್ತಿ­ಶಿಕ್ಷಣದ ತೀರ್ಪನ್ನು ಜಾರಿಗೊಳಿಸ­ಬಾರದು. ಅದು ವಿದ್ಯಾರ್ಥಿಗಳ ವಿರುದ್ಧ­ವಾಗಿದೆ ಎಂದು ಮನವಿ ಮಾಡಿದರು.ನಗರ ಘಟಕದ ಕಾರ್ಯದರ್ಶಿ ರಾಕೇಶ ಕ್ಷೀರಸಾಗರ, ವೀರಭದ್ರಪ್ಪ ಕಿರದಳ್ಳಿ, ದೇವಿಂದ್ರ, ಉಸ್ಮಾನ್, ವೆಂಕಟೇಶ, ವಿಶ್ವಾರಾಧ್ಯ ಇದ್ದರು.

ಪ್ರತಿಕ್ರಿಯಿಸಿ (+)