ಶನಿವಾರ, ಏಪ್ರಿಲ್ 1, 2023
23 °C

ಸಿಇಟಿ ತರಬೇತಿ: ಹಗರಣದ ವಾಸನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಇಟಿ ತರಬೇತಿ: ಹಗರಣದ ವಾಸನೆ



ಬೆಂಗಳೂರು:
ಉಚಿತ ಸಿಇಟಿ ತರಬೇತಿ ಹೆಸರಿನಲ್ಲಿ ಕಳೆದ ವರ್ಷ ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ವರ್ಷ ಮತ್ತೆ ತರಬೇತಿಗಾಗಿ ಟೆಂಡರ್ ಕರೆದಿರುವುದು ಚರ್ಚೆಗೆ ಗ್ರಾಸವಾಗಿದೆ.2010ನೇ ಸಾಲಿನಲ್ಲಿ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದ ವಿದ್ಯಾರ್ಥಿಗಳಿಗೆ 108 ಕೇಂದ್ರಗಳಲ್ಲಿ ಉಪಗ್ರಹ ಆಧಾರಿತ ತರಬೇತಿ ನೀಡಲು ಸುಮಾರು 12 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಇದರಲ್ಲಿ ದುರುಪಯೋಗವಾಗಿದ್ದು, ತರಬೇತಿಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.



ಆದರೂ ಪ್ರಾಧಿಕಾರ ಈ ವರ್ಷವೂ ಉಪಗ್ರಹ ಆಧಾರಿತ ತರಬೇತಿ ನೀಡಲು ಟೆಂಡರ್ ಕರೆದಿದ್ದು, ಜನವರಿ ಒಂದರಂದು ಟೆಂಡರ್ ಅಂತಿಮಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಈ ಮಧ್ಯೆ ತರಬೇತಿಯ ಅಗತ್ಯವಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.ಪ್ರಾಧಿಕಾರ ಈ ತಿಂಗಳ ಎರಡನೇ ವಾರ ಕರೆದ ಟೆಂಡರ್‌ಗೆ ಕೇವಲ ಆರು ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಿದ್ದರಿಂದ, ಮರು ಟೆಂಡರ್ ಕರೆಯಲಾಗಿದೆ. ತರಬೇತಿ ಕಾರ್ಯದಲ್ಲಿ ಮೂರು ವರ್ಷಗಳ ಅನುಭವ ಇರಬೇಕು ಎಂಬ ನಿರ್ಬಂಧ ಸಡಿಲಿಸಿ ಒಂದು ವರ್ಷಕ್ಕೆ ಇಳಿಸಲಾಗಿದೆ. ಕೆಲವು ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.



ಕಳೆದ ವರ್ಷ ತರಬೇತಿ ನೀಡುವ ಜವಾಬ್ದಾರಿಯನ್ನು ಸರ್ಕಾರಿ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆಗೆ ವಹಿಸಲಾಗಿತ್ತು. ಆದರೆ ಕಿಯೋನಿಕ್ಸ್ ತಾನೇ ಈ ಜವಾಬ್ದಾರಿ ನಿರ್ವಹಿಸದೆ, ತರಬೇತಿ ಕೆಲಸವನ್ನು ಖಾಸಗಿ ಸಂಸ್ಥೆ ಗುಂಬಿ ಸಾಫ್ಟ್‌ವೇರ್ ಪ್ರೈವೆಟ್ ಲಿಮಿಟೆಡ್‌ಗೆ ವಹಿಸಿ ಕೈತೊಳೆದುಕೊಂಡಿತು.‘ಟೆಂಡರ್ ಕರೆಯದೆ ಈ ಸಂಸ್ಥೆಗೆ ತರಬೇತಿಯ ಜವಾಬ್ದಾರಿ ನೀಡಿರುವುದರ ಹಿಂದೆ ದೊಡ್ಡ ಲಾಬಿ ಇದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ ವರ್ಷ ಪ್ರಮುಖ ಸ್ಥಾನಗಳಲ್ಲಿ ಇದ್ದಂತಹವರು ಟೆಂಡರ್ ಕರೆಯಲು ಅವಕಾಶ ನೀಡದೆ ಗುಂಬಿ ಸಾಫ್ಟ್‌ವೇರ್ ಸಂಸ್ಥೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂಬ ದೂರುಗಳಿವೆ.

ಕಾಟಾಚಾರದ ತರಬೇತಿ: ‘ಉಪಗ್ರಹ ಆಧಾರಿತ ತರಬೇತಿಯಿಂದ ಯಾವುದೇ ಉಪಯೋಗವಾಗಿಲ್ಲ. ಎಲ್ಲ ಕೇಂದ್ರಗಳಿಗೆ ಒಂದೊಂದು ಸಿ.ಡಿ. ನೀಡಿ ಆ ಮೂಲಕ ಬೋಧನೆ ಮಾಡಲಾಗಿದೆ. ಇದು ಏಕಮುಖ ಸಂವಹನವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನುಮಾನ ಬಂದರೆ ಪ್ರಶ್ನೆ ಕೇಳಲು ಅವಕಾಶ ಇರುವುದಿಲ್ಲ. ಯಾವುದು ಸರಿ, ತಪ್ಪು ಎಂದು ಪ್ರಶ್ನೆ ಮಾಡಲು ಆಗದಿದ್ದರೆ ಅದು ಹೇಗೆ ತರಬೇತಿ ಅನಿಸಿಕೊಳ್ಳುತ್ತದೆ’ ಎಂಬುದು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಜಗದೀಶ್ ಅವರ ಪ್ರಶ್ನೆ.

‘ಸಿಇಟಿ ಪರೀಕ್ಷೆ ತೆಗೆದುಕೊಳ್ಳುವ ಶೇ 99ರಷ್ಟು ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ಕೂಡಲೇ ಸಿಇಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮನೆ ಪಾಠಕ್ಕೆ ಹೋಗುತ್ತಾರೆ. ಅಕ್ಟೋಬರ್- ನವೆಂಬರ್ ವೇಳೆಗೆ ಮನೆ ಪಾಠ ಮುಗಿದಿರುತ್ತದೆ. ಪ್ರಾಧಿಕಾರ ಡಿಸೆಂಬರ್‌ನಲ್ಲಿ ತರಬೇತಿ ಆರಂಭಿಸಿದರೆ ಏನು ಉಪಯೋಗ? ವಾರದಲ್ಲಿ ಎರಡು ದಿನ ನೀಡುವ ತರಬೇತಿಯನ್ನು ನಂಬಿ ಮನೆ ಪಾಠಕ್ಕೆ ಹೋಗದೆ ಯಾರೂ ಇರುವುದಿಲ್ಲ.



‘ಎಷ್ಟೇ ಕಷ್ಟವಾದರೂ ವಿಜ್ಞಾನ ವಿದ್ಯಾರ್ಥಿಗಳು ಮನೆ ಪಾಠಕ್ಕೆ ಹೋಗುತ್ತಾರೆ. ಆದರೆ ಪ್ರಾಧಿಕಾರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಹೆಸರಿನಲ್ಲಿ ಹಣ ದುರ್ಬಳಕೆ ಮಾಡುತ್ತಿದೆ. ಕಳೆದ ವರ್ಷ ನೀಡಿದ ತರಬೇತಿಯಿಂದ ಏನಾದರೂ ಉಪಯೋಗ ಆಗಿದೆಯೇ ಎಂಬ ಸಮೀಕ್ಷೆ ನಡೆಸುವ ಗೋಜಿಗೂ ಹೋಗಿಲ್ಲ’ ಎಂದು ಮತ್ತೊಬ್ಬ ಉಪನ್ಯಾಸಕ ಎಂ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.



‘ಹಿಂದಿನ ವರ್ಷ ತರಬೇತಿಗೆ ಹಾಜರಾಗಿದ್ದ ಸುಮಾರು 13,350 ವಿದ್ಯಾರ್ಥಿಗಳ ಪೈಕಿ 6,400 ವಿದ್ಯಾರ್ಥಿಗಳು ಸಿಇಟಿ ರ್ಯಾಂಕಿಂಗ್‌ನಲ್ಲಿ ಅರ್ಹತೆ ಪಡೆದುಕೊಂಡಿದ್ದು, ತರಬೇತಿ ನೀಡದ ಹಿಂದಿನ ವರ್ಷಗಳಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದೇ ಪ್ರಮಾಣದಲ್ಲಿ ಆಯ್ಕೆಯಾಗುತ್ತಿದ್ದರು’ ಎಂಬುದು ಅವರ ಅಭಿಪ್ರಾಯ.‘108 ಕೇಂದ್ರಗಳಲ್ಲಿ ಸಿ.ಡಿ ಮೂಲಕ ತರಬೇತಿ ನೀಡಲು 12 ಕೋಟಿ ರೂಪಾಯಿ ಬೇಕಾಗಿಲ್ಲ. ಇದರಲ್ಲಿ ಅರ್ಧದಷ್ಟು ಹಣ ಸಹ ತರಬೇತಿಗೆ ಖರ್ಚಾಗುವುದಿಲ್ಲ.



ಉದ್ದೇಶಪೂರ್ವಕವಾಗಿಯೇ ಟೆಂಡರ್ ಕರೆಯದೆ ಖಾಸಗಿ ಸಂಸ್ಥೆಗೆ ನೀಡುವ ಮೂಲಕ ಹಣ ದುರ್ಬಳಕೆ ಮಾಡಲಾಗಿದೆ’ ಎಂಬುದು ಇಲಾಖೆಯ ಮೂಲಗಳಿಂದಲೇ ತಿಳಿದು ಬಂದಿದೆ.‘ತರಬೇತಿ ನೀಡುವ ಉಸಾಬರಿ ಪ್ರಾಧಿಕಾರಕ್ಕೆ ಏಕೆ? ಸಿಇಟಿ ಪರೀಕ್ಷೆ ನಡೆಸುವುದಷ್ಟೇ ಪ್ರಾಧಿಕಾರದ ಕೆಲಸ. ಒಂದು ವೇಳೆ ತರಬೇತಿ ನೀಡುವ ಅಗತ್ಯವಿದೆ ಅನಿಸಿದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯೇ ಆ ಕೆಲಸವನ್ನು ಮಾಡಬಹುದು. ಅದು ಬಿಟ್ಟು ವಿದ್ಯಾರ್ಥಿಗಳು ಕಷ್ಟುಪಟ್ಟು ಶುಲ್ಕ ರೂಪದಲ್ಲಿ ಪಾವತಿಸಿದ ಹಣವನ್ನು ತರಬೇತಿ ಹೆಸರಿನಲ್ಲಿ ದುರುಪಯೋಗ ಮಾಡುವುದು ಸರಿಯಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.



ವರ್ಷದ ಕೊನೆಯಲ್ಲಿ ಟೆಂಡರ್: ಹಿಂದಿನ ವರ್ಷ ಟೆಂಡರ್ ಕರೆಯದೆ ಇದ್ದ ಪ್ರಾಧಿಕಾರ ಈ ವರ್ಷ ಏಕಾಏಕಿ ಪರೀಕ್ಷೆಗಳು ಸಮೀಪಿಸುತ್ತಿರುವಾಗ ತರಬೇತಿ ನೀಡಲು ಟೆಂಡರ್ ಕರೆದಿದೆ. ಮಾರ್ಚ್ 17ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಈಗಾಗಲೇ ವಿದ್ಯಾರ್ಥಿಗಳು ಮನೆ ಪಾಠವನ್ನು ಪೂರ್ಣಗೊಳಿಸಿ, ಪರೀಕ್ಷೆಯ ಸಿದ್ಧತೆಯಲ್ಲಿದ್ದಾರೆ.



ಇನ್ನು ಕೇವಲ ಜನವರಿ, ಫೆಬ್ರುವರಿ ತಿಂಗಳು ಮಾತ್ರ ಬಾಕಿ ಇದ್ದು, ಈಗ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವುದೇ ಕಷ್ಟ. ಅಲ್ಲದೆ ಬಹುತೇಕ ಕಾಲೇಜುಗಳಲ್ಲಿ ಪಠ್ಯಕ್ರಮ ಮುಗಿಯುವ ಹಂತಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರಾಧಿಕಾರ 150 ಕೇಂದ್ರಗಳಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರೆ ಉಪಯೋಗವಾಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.



ಸರ್ಕಾರಕ್ಕೆ ಬಿಟ್ಟ ವಿಚಾರ: ಈ ರೀತಿಯ ತರಬೇತಿಯಿಂದ ಯಾರಿಗೆ ಉಪಯೋಗ ಆಗುತ್ತದೆ. ಇಷ್ಟೊಂದು ತಡವಾಗಿ ಯಾಕೆ ಟೆಂಡರ್ ಕರೆಯಲಾಗಿದೆ. ಕಳೆದ ವರ್ಷ ಯಾಕೆ ಟೆಂಡರ್ ಕರೆಯಲಿಲ್ಲ ಎಂದು ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಇದೆಲ್ಲ ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರದ ಸೂಚನೆಯಂತೆ ಟೆಂಡರ್ ಕರೆಯಲಾಗಿದೆ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.