ಸೋಮವಾರ, ಮಾರ್ಚ್ 8, 2021
29 °C

ಸಿಇಟಿ ಪರೀಕ್ಷೆ ಮುಂದಕ್ಕೆ ಹೊಸ ವೇಳಾಪಟ್ಟಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಇಟಿ ಪರೀಕ್ಷೆ ಮುಂದಕ್ಕೆ ಹೊಸ ವೇಳಾಪಟ್ಟಿ ಪ್ರಕಟ

ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಮೇ 3, 4 ಮತ್ತು 5ರಂದು ನಡೆಯಬೇಕಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಮುಂದೂಡಲಾಗಿದೆ.ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಮೇ 21, 22 ಮತ್ತು 23ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಜೂನ್ 13ರಿಂದ ಸಹಾಯವಾಣಿ ಕೇಂದ್ರಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ವಿ.ರಶ್ಮಿ ತಿಳಿಸಿದರು.ಸಾಮಾನ್ಯ ಪ್ರವೇಶ ಪರೀಕ್ಷೆಗೆ ಈ ಬಾರಿ 1.22 ಲಕ್ಷ ಅಭ್ಯರ್ಥಿಗಳು ಹಾಜರಾಗಲಿದ್ದು, ಅರ್ಹ ಅಭ್ಯರ್ಥಿಗಳು ಈಗಾಗಲೇ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅರ್ಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ.ಮೇ 11ರ ನಂತರ ಪ್ರವೇಶ ಪತ್ರಗಳನ್ನು ಸಂಬಂಧಪಟ್ಟ ಕಾಲೇಜು ಅಥವಾ ಅಭ್ಯರ್ಥಿಗಳ ಸ್ವವಿಳಾಸಕ್ಕೆ ಕಳುಹಿಸಿಕೊಡಲಾಗುತ್ತದೆ. ಅಲ್ಲದೆ ಪ್ರಾಧಿಕಾರದ ವೆಬ್‌ಸೈಟ್ ಮೂಲಕವೂ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣ ಮತ್ತು ಮೌಲ್ಯಮಾಪನ ಬಹಿಷ್ಕಾರದ ಹಿನ್ನೆಲೆಯಲ್ಲಿ ಸಿಇಟಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ತಡವಾಗಿದೆ. ಇದರಿಂದಾಗಿ ಅನಿವಾರ್ಯವಾಗಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದರು.ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತೊಡಗಿರುವ ಸಿಬ್ಬಂದಿಯೇ ಸಿಇಟಿ ಪರೀಕ್ಷಾ ಕಾರ್ಯದಲ್ಲೂ ಪಾಲ್ಗೊಳ್ಳುತ್ತಾರೆ. ಅಲ್ಲದೆ ಮೌಲ್ಯಮಾಪನ ನಡೆಯುತ್ತಿರುವ ಕೇಂದ್ರಗಳಲ್ಲೂ ಸಿಇಟಿ ಪರೀಕ್ಷೆ ನಡೆಸಬೇಕಾಗುತ್ತದೆ. ಹೀಗಾಗಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸಿಇಟಿ ನಡೆಸಲು ನಿರ್ಧರಿಸಲಾಗಿದೆ.ಮೇ ಎರಡನೇ ವಾರದಲ್ಲಿ ಸಿಇಟಿ ನಡೆಸಲು ಪ್ರಾಧಿಕಾರ ಉದ್ದೇಶಿಸಿತ್ತು. ಆದರೆ ಎರಡನೇ ವಾರದಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಸಿಇಟಿ, ಅಮೃತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಸೇರಿದಂತೆ ಹಲವು ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಒಂದಕ್ಕಿಂತ ಹೆಚ್ಚು ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಮೇ ಮೂರನೇ ವಾರದಲ್ಲಿ ಸಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.ಜುಲೈ 10ರಿಂದ ಕೌನ್ಸೆಲಿಂಗ್: ಈ ಬಾರಿ ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ನಡೆಯಲಿದ್ದು, ಜುಲೈ 10ರಂದು ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿ ಸಹಾಯವಾಣಿ ಕೇಂದ್ರಗಳಿಗೆ ಹಾಜರಾಗಬೇಕಾಗುತ್ತದೆ. ಸಿಇಟಿ ಪರೀಕ್ಷೆ ಮುಂದೂಡಿದ್ದರೂ, ಕೌನ್ಸೆಲಿಂಗ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಪೂರ್ವನಿಗದಿಯಂತೆ ಕೌನ್ಸೆಲಿಂಗ್ ಕಾರ್ಯ ನಡೆಯಲಿದೆ.ಕೌನ್ಸೆಲಿಂಗ್ ದಿನಾಂಕ, ಸೀಟು ಹಂಚಿಕೆ ಬಗ್ಗೆ ಎಸ್‌ಎಂಎಸ್ ಮೂಲಕವೂ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಆನ್‌ಲೈನ್ ಕೌನ್ಸೆಲಿಂಗ್ ಆಗಿರುವುದರಿಂದ ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ರಾಜ್ಯದ ವಿವಿಧೆಡೆ 12 ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಈ ಕೇಂದ್ರಗಳನ್ನು ಎಲ್ಲೆಲ್ಲಿ ತೆರೆಯಲಾಗುತ್ತದೆ ಎಂಬುದನ್ನು ಕೌನ್ಸೆಲಿಂಗ್‌ಗೆ ಮೊದಲು ತಿಳಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್‌ನಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗುತ್ತಿತ್ತು. ಆದರೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಸೀಟು ಹಂಚಿಕೆ ಪಟ್ಟಿ ಪ್ರಕಟವಾಗುವುದು ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳ ಕೌನ್ಸೆಲಿಂಗ್ ಮುಂದೂಡಲಾಗುತ್ತಿತ್ತು.ಇದನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಎಐಸಿಟಿಇ ವೇಳಾಪಟ್ಟಿಗೆ ಅನುಗುಣವಾಗಿ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮೊದಲ ಬಾರಿಗೆ ಆನ್‌ಲೈನ್ ಕೌನ್ಸೆಲಿಂಗ್ ಜಾರಿ ಮಾಡುತ್ತಿರುವುದರಿಂದ ಕೌನ್ಸೆಲಿಂಗ್‌ಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂದು ಅವರು ತಿಳಿಸಿದರು.ಸಿದ್ಧತಾ ಪರೀಕ್ಷೆ: ಅಭ್ಯರ್ಥಿಗಳ ಅನುಕೂಲಕ್ಕಾಗಿ ಈಗಾಗಲೇ `ಚಂದನ~ ವಾಹಿನಿ ಮೂಲಕ ತರಬೇತಿ ನೀಡಲಾಗುತ್ತಿದೆ. ಸಿಇಟಿ ಪರೀಕ್ಷೆ ಮುಂದೂಡಿರುವ ಹಿನ್ನೆಲೆಯಲ್ಲಿ ಇದೇ 30ಕ್ಕೆ ಮುಕ್ತಾಯವಾಗಬೇಕಿದ್ದ ತರಬೇತಿಯನ್ನು ಮೇ 20ರವರೆಗೂ ವಿಸ್ತರಿಸಲಾಗು ವುದು ಎಂದು ರಶ್ಮಿ ತಿಳಿಸಿದರು.ಇದೇ 16ರಂದು ಒಂದು ಸಿದ್ಧತಾ ಪರೀಕ್ಷೆ ನಡೆದಿದೆ. ಇದೇ 20, 24 ಮತ್ತು 28ರಂದು ಅದೇ ಮಾದರಿಯ ಪರೀಕ್ಷೆಗಳು ನಡೆಯಲಿವೆ. ಸಿಇಟಿಗೆ ಸಾಕಷ್ಟು ಕಾಲಾವಕಾಶ ಇರುವುದರಿಂದ ಮೇ ತಿಂಗಳಲ್ಲೂ ನಾಲ್ಕು ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.ಶೇ 90ರಷ್ಟು ಹಾಜರಾತಿ: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಬಹಿಷ್ಕಾರವನ್ನು ಉಪನ್ಯಾಸಕರು, ಪ್ರಾಂಶುಪಾಲರು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ಮೌಲ್ಯಮಾಪನ ಕಾರ್ಯ ಸುಸೂತ್ರವಾಗಿ ಆರಂಭವಾಗಿದ್ದು, ಶೇ 90ರಷ್ಟು ಹಾಜರಾತಿ ಇತ್ತು. ಬುಧವಾರ ಉಳಿದ ಉಪನ್ಯಾಸಕರು ಹಾಜರಾಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.ಪೂರಕ ಪರೀಕ್ಷೆ ವಿಳಂಬ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ನಡೆಯಬೇಕಾಗಿದ್ದ ಪಿಯುಸಿ ಪೂರಕ ಪರೀಕ್ಷೆ ಈ ವರ್ಷ ಜುಲೈನಲ್ಲಿ ನಡೆಯಲಿದೆ. ಪ್ರಶ್ನೆಪತ್ರಿಕೆ ಬಹಿರಂಗ, ಮೌಲ್ಯಮಾಪನ ಬಹಿಷ್ಕಾರ ದಿಂದಾಗಿ ಈ ವರ್ಷ ಪೂರ್ವನಿಗದಿತ ವೇಳಾಪಟ್ಟಿ ಪ್ರಕಾರ ಶೈಕ್ಷಣಿಕ ಪ್ರಕ್ರಿಯೆಗಳು ನಡೆಯುವುದು ಕಷ್ಟಸಾಧ್ಯ. ಅನಿವಾರ್ಯವಾಗಿ ಎಲ್ಲವನ್ನೂ ಮುಂದೂಡಲಾಗುತ್ತಿದೆ ಎಂದು ಅವರು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.