ಸಿಇಟಿ ಶುಲ್ಕ ನೀತಿ: ಸರ್ಕಾರಕ್ಕೆ ಸವಾಲು

7

ಸಿಇಟಿ ಶುಲ್ಕ ನೀತಿ: ಸರ್ಕಾರಕ್ಕೆ ಸವಾಲು

Published:
Updated:
ಸಿಇಟಿ ಶುಲ್ಕ ನೀತಿ: ಸರ್ಕಾರಕ್ಕೆ ಸವಾಲು

ಬೆಂಗಳೂರು:  ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ವಿವಾದ ಸೋಮವಾರ ಹೈಕೋರ್ಟ್ ಮೆಟ್ಟಿಲು ಹತ್ತಿದ್ದು, ಸರ್ಕಾರ ಮತ್ತು ಖಾಸಗಿ ವೃತ್ತಿಶಿಕ್ಷಣ ಸಂಸ್ಥೆಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಸುಲಭವಾಗಿ ಇತ್ಯರ್ಥವಾಗುವ ಲಕ್ಷಣಗಳು ಕಾಣುತ್ತಿಲ್ಲ.ದೊಡ್ಡಬಳ್ಳಾಪುರದಲ್ಲಿ ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ನಡೆಸುತ್ತಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರು ಶುಲ್ಕ ವಿವಾದ ಸಂಬಂಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಪದ್ಮರಾಜ ಸಮಿತಿಯ ಶಿಫಾರಸಿನಂತೆ ಶುಲ್ಕ ನಿಗದಿ ಮಾಡಬೇಕು ಎಂದು ಕೋರಿದ್ದಾರೆ. ಮಂಗಳವಾರ ರಿಟ್ ಅರ್ಜಿಯ ವಿಚಾರಣೆ ನಡೆಯಲಿದೆ.ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಸಂಬಂಧ ಸರ್ಕಾರ 3-4 ಬಾರಿ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಜಾಲಪ್ಪ ಅವರು ಈ ಸಮಸ್ಯೆಯನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.ಸರ್ಕಾರ ಈಗಾಗಲೇ 30 ಸಾವಿರ ರೂಪಾಯಿ ಶುಲ್ಕ ನಿಗದಿ ಮಾಡುವುದಾಗಿ ಹೇಳಿದೆ. ಆದರೆ ಇದನ್ನು ಒಪ್ಪದ ಖಾಸಗಿ ಶಿಕ್ಷಣ ಸಂಸ್ಥೆಗಳು ಕನಿಷ್ಠ 50 ಸಾವಿರ ರೂಪಾಯಿ ಶುಲ್ಕ ನಿಗದಿ ಮಾಡುವಂತೆ ಪಟ್ಟು ಹಿಡಿದಿವೆ. ಹೀಗಾಗಿ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ಈ ವಿವಾದ ಕಗ್ಗಂಟಾಗಿ ಪರಿಣಮಿಸಿದ್ದು, ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾದುನೋಡುವ ತಂತ್ರಕ್ಕೆ ಮೊರೆಹೋಗಿವೆ.ಈ ಮಧ್ಯೆ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಮಂಗಳವಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳೊಂದಿಗೆ ಶುಲ್ಕ ನಿಗದಿ ಸಂಬಂಧ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಒಕ್ಕೂಟದ ಪದಾಧಿಕಾರಿಗಳಿಗೆ ಆಹ್ವಾನ ನೀಡದೆ ಇರುವುದರಿಂದ ಸಭೆ ನಡೆಯುವ ಬಗ್ಗೆ ಅನುಮಾನವಿದೆ.ಸಮಿತಿ ವರದಿ ಬಹಿರಂಗವಾಗಲಿ: ‘ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಪದ್ಮರಾಜ ಸಮಿತಿಯನ್ನು ರಚಿಸಲಾಗಿದ್ದು, ಅದು ಈಗಾಗಲೇ ವರದಿ ನೀಡಿದೆ. ಆ ವರದಿಯನ್ನು ಬಹಿರಂಗಪಡಿಸಿ, ಸಮಿತಿ ಸೂಚಿಸಿರುವ ಪ್ರಕಾರವೇ ಶುಲ್ಕ ನಿಗದಿಪಡಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ’ ಎಂದು ಜಾಲಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.‘ಕಳೆದ ವರ್ಷ 19 ಕಾಲೇಜುಗಳಲ್ಲಿ ಮಾತ್ರ ಎಲ್ಲ ಸೀಟುಗಳು ಭರ್ತಿಯಾಗಿದ್ದವು. ಕಾಮೆಡ್-ಕೆ ಮತ್ತು ಆಡಳಿತ ಮಂಡಳಿ ಕೋಟಾದಲ್ಲಿ 19,860 ಸೀಟುಗಳು ಭರ್ತಿಯಾಗದೆ ಉಳಿದಿದ್ದವು. ನಮ್ಮ ಕಾಲೇಜಿನಲ್ಲಿ ಒಟ್ಟು 420 ಸೀಟುಗಳ ಪೈಕಿ 127 ಸೀಟುಗಳು ಖಾಲಿ ಉಳಿದಿದ್ದವು. ಪರಿಸ್ಥಿತಿ ಹೀಗಿರುವಾಗ ಕಾಲೇಜುಗಳನ್ನು ನಡೆಸುವುದೇ  ಕಷ್ಟ.  ಶುಲ್ಕ ಜಾಸ್ತಿ ಮಾಡದಿದ್ದರೆ ಬೋಧಕ, ಬೋಧ ಕೇತರ ಸಿಬ್ಬಂದಿಗೆ ಸಂಬಳ ನೀಡಲು ಆಗುವುದಿಲ್ಲ. ಕಾಲೇ ಜುಗಳನ್ನು ಮುಚ್ಚಬೇಕಾಗುತ್ತದೆ ಅಷ್ಟೇ’ ಎಂದು ಖಾರವಾಗಿ ಹೇಳಿದರು.‘ನಾನು 80 ಸಾವಿರ ರೂಪಾಯಿ ಶುಲ್ಕ ನಿಗದಿ ಮಾಡಬೇಕು ಎಂದು ಒತ್ತಾಯ ಮಾಡಿದ್ದೆ. ಆದರೆ ಪಾಂಡುರಂಗ ಶೆಟ್ಟಿ ಅವರು ಕನಿಷ್ಠ 50 ಸಾವಿರ ರೂಪಾಯಿ ನಿಗದಿಯಾಗಲಿ ಎಂಬುದಾಗಿ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವಿದೆ. ಆದರೆ ಸರ್ಕಾರ 30 ಸಾವಿರ ರೂಪಾಯಿ ನಿಗದಿ ಮಾಡುವುದಾಗಿ ಹೇಳುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಹೇಗಿದ್ದರೂ ಈಗ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಅಲ್ಲಿ ಏನಾಗುತ್ತದೊ ಎಂಬುದನ್ನು ಕಾದು ನೋಡುತ್ತೇವೆ’ ಎಂದರು.

‘ಮಂಗಳವಾರ ಸಭೆ ಕರೆದಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮನ್ನು ಯಾರೂ ಮಾತುಕತೆಗೆ ಕರೆದಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ ತಿಳಿಸಿದರು.ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಒಮ್ಮತವಿಲ್ಲ. ಕೆಲವು ಕಾಲೇಜುಗಳು ಪರಸ್ಪರ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುವುದು ಸೂಕ್ತ ಎನ್ನುತ್ತಿವೆ. ಆದರೆ ಕೆಲ ಕಾಲೇಜುಗಳು ಬಿಗಿಪಟ್ಟು ಹಿಡಿದಿದ್ದು, ಶುಲ್ಕ 50 ಸಾವಿರಕ್ಕಿಂತ ಕಡಿಮೆಯಾದರೆ ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಈಗ ಎಲ್ಲರ ಕಣ್ಣು ನ್ಯಾಯಾಲಯದತ್ತ ನೆಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry