ಶನಿವಾರ, ಮೇ 21, 2022
25 °C

ಸಿಇಟಿ: 223 ವೈದ್ಯ ಸೀಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಆದ್ಯತೆಗಳನ್ನು ಗುರುತಿಸುವ ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, ವೈದ್ಯಕೀಯ ವಿಭಾಗದಲ್ಲಿ 223 ಸೀಟುಗಳು ಹೊಸದಾಗಿ ಸೇರ್ಪಡೆಯಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ `ಪ್ರಜಾವಾಣಿ'ಗೆ ತಿಳಿಸಿದರು.ಗುಲ್ಬರ್ಗ ಮತ್ತು ಬೆಂಗಳೂರಿನ ಇಎಸ್‌ಐ ವೈದ್ಯಕೀಯ ಕಾಲೇಜಿನಲ್ಲಿ ತಲಾ 40 ಸೀಟುಗಳು, ಶಿವಮೊಗ್ಗದ ತಡಿಕೆಲ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ 82 ಸೀಟುಗಳು ಸಿಇಟಿ ಕೋಟಾದಡಿ ಲಭ್ಯವಾಗಿವೆ. ಇದಲ್ಲದೆ ವೈದೇಹಿ ಕಾಲೇಜಿನಲ್ಲಿ 25, ಎಂ.ವಿ.ಜೆ, ಆಲ್ ಅಮಿನ್ ಹಾಗೂ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ತಲಾ 12 ಸೀಟುಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. ಈ ಎಲ್ಲ ಸೀಟುಗಳು ಸಿಇಟಿ ಕೋಟಾ ಮೂಲಕ ಹಂಚಿಕೆಯಾಗಲಿವೆ.2 ಇಎಸ್‌ಐ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಮೂಲಕ ತಲಾ 85 ಸೀಟುಗಳು ಲಭ್ಯವಾಗಬೇಕಿತ್ತು. ಆದರೆ, ಈ ವರ್ಷ ತಲಾ 40 ಸೀಟುಗಳನ್ನು ಮಾತ್ರ ನೀಡಲಾಗಿದೆ. ತಲಾ 15 ಸೀಟುಗಳು ಅಖಿಲ ಭಾರತ ಕೋಟಾ ಮೂಲಕ ಹಂಚಿಕೆಯಾಗಲಿವೆ. ಇನ್ನುಳಿದ ತಲಾ 45 ಸೀಟುಗಳನ್ನು ಇಎಸ್‌ಐ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಮಕ್ಕಳಿಗೆ ಅರ್ಹತೆ ಆಧಾರದ ಮೇಲೆ ನೀಡಲಾಗುತ್ತದೆ.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ಎನ್‌ಇಇಟಿ) ಗಳಿಸಿರುವ ರ‌್ಯಾಂಕ್ ಆಧರಿಸಿ ಸಿಬ್ಬಂದಿ ಮಕ್ಕಳಿಗೆ ಸೀಟು ನೀಡುವ ತೀರ್ಮಾನವನ್ನು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.ಎರಡನೇ ಸುತ್ತಿನಲ್ಲಿ ಆದ್ಯತೆಗಳನ್ನು ಗುರುತಿಸುವ ಪ್ರಕ್ರಿಯೆ ಇದೇ 22ರಂದು ಮುಕ್ತಾಯವಾಗಲಿದೆ. ಅದಕ್ಕೂ ಮುಂಚೆ ಇನ್ನೂ 63 ಸೀಟುಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ. ಬಳ್ಳಾರಿ ವೈದ್ಯಕೀಯ ಕಾಲೇಜಿನಲ್ಲಿ 43 ಸೀಟುಗಳು ಹಾಗೂ ಆದಿಚುಂಚಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 20 ಸೀಟುಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಎಂಸಿಐ ಮಂಗಳವಾರ ಇದಕ್ಕೆ ಒಪ್ಪಿಗೆ ನೀಡಿದರೆ, ಹೆಚ್ಚುವರಿ ಸೀಟುಗಳನ್ನು, ಸೀಟು ಹಂಚಿಕೆ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದರು.ಮೊದಲ ಸುತ್ತಿನಲ್ಲಿ 2,214 ಸೀಟುಗಳು ಲಭ್ಯವಾಗಿದ್ದವು. ಈಗ 223 ಸೀಟುಗಳು ಸೇರ್ಪಡೆಯಾಗಿರುವುದರಿಂದ ಒಟ್ಟು ಸೀಟುಗಳ ಸಂಖ್ಯೆ 2,437ಕ್ಕೆ ಏರಿದೆ. ಇನ್ನೂ 63 ಸೀಟುಗಳು ದೊರೆತರೆ ಸರ್ಕಾರಿ ಕೋಟಾದಲ್ಲಿ 2,500 ಸೀಟುಗಳು ಲಭ್ಯವಾಗಲಿವೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.