ಭಾನುವಾರ, ಮೇ 16, 2021
22 °C

ಸಿಇಸಿಗೆ ಮತ್ತಷ್ಟು ದಾಖಲೆ: ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ಮತ್ತು ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ನಡುವಿನ ಭೂ ವ್ಯವಹಾರ ಕುರಿತು ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ಭಾನುವಾರ ಮತ್ತಷ್ಟು ಪ್ರಮುಖ ದಾಖಲೆಗಳನ್ನು ಕಳುಹಿಸಿರುವುದಾಗಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಸಲಹೆಗಾರ ಎಸ್.ಆರ್. ಹಿರೇಮಠ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಚೇನಹಳ್ಳಿಯ 1.02 ಎಕರೆ ಭೂಮಿಯ ಖರೀದಿ ಮತ್ತು ಮಾರಾಟದಲ್ಲಿನ ಸಂಶಯಾಸ್ಪದ ನಡವಳಿಕೆ ಕುರಿತು ಹಿಂದಿನ ವಿಚಾರಣೆಯಲ್ಲಿ ನಾವು ಕೆಲ ದಾಖಲೆಗಳನ್ನು ಸಲ್ಲಿಸಿದ್ದೆವು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವಂತೆ ಸರ್ಕಾರಕ್ಕೆ ಸಿಇಸಿ ನಿರ್ದೇಶನ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳು ನಮಗೆ ಲಭ್ಯವಾಗಿದ್ದವು. ಅವುಗಳನ್ನು ಇ-ಮೇಲ್ ಮೂಲಕ ಸಿಇಸಿಗೆ ಕಳುಹಿಸಿದ್ದೇವೆ~ ಎಂದರು.ರಾಚೇನಹಳ್ಳಿಯ ಭೂಮಿಯನ್ನು ಯಡಿಯೂರಪ್ಪ ಅವರ ಪುತ್ರರು ಮತ್ತು ಅಳಿಯ ಖರೀದಿಸಿದ್ದಾಗ ಅದರ ಒಡೆತನ ಸರ್ಕಾರದ ಹೆಸರಿನಲ್ಲಿತ್ತು. ತಮ್ಮದಲ್ಲದ ಸ್ವತ್ತನ್ನು ಕೆಲ ವ್ಯಕ್ತಿಗಳು ಮಾಜಿ ಮುಖ್ಯಮಂತ್ರಿಯವರ ಕುಟುಂಬಕ್ಕೆ ಮಾರಾಟ ಮಾಡಿದ್ದರು. ಅಕ್ರಮವಾಗಿ ಬಂದ ಆಸ್ತಿಯನ್ನು ಸಕ್ರಮಗೊಳಿಸಲು ಯಡಿಯೂರಪ್ಪ ಅವರು ಈ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದರು. ಈ ಎಲ್ಲ ಆರೋಪಗಳನ್ನೂ ಸಾಬೀತುಪಡಿಸಬಲ್ಲ ದಾಖಲೆಗಳು ತಮಗೆ ದೊರಕಿದ್ದು, ತನಿಖಾ ಸಮಿತಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.ಏಪ್ರಿಲ್ 20ರಂದು ಸಿಇಸಿ ಮಹತ್ವದ ವರದಿ ಸಲ್ಲಿಸುವ ಸಾಧ್ಯತೆ ಇದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಅದಾನಿ ಎಂಟರ್‌ಪ್ರೈಸಸ್ ಮತ್ತು ಇತರೆ ಕಂಪೆನಿಗಳು, ಯಡಿಯೂರಪ್ಪ ಮತ್ತು ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ನಡುವಿನ ಸಂಬಂಧ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಸಮಗ್ರ ವರದಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎಂದರು.ಐತಿಹಾಸಿಕ ಆದೇಶ: ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಹಾನಿಗೊಳಗಾಗಿರುವ ಪ್ರದೇಶದ ಪುನರುಜ್ಜೀವನ ಮತ್ತು ಪುನರ್ವಸತಿ ಕುರಿತು ಇದೇ 13ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಐತಿಹಾಸಿಕವಾದುದು. ಪುನರುಜ್ಜೀವನ ಮತ್ತು ಪುನರ್ವಸತಿ ಕ್ರಮ ಕೈಗೊಳ್ಳದ ಹೊರತು ಗಣಿಗಾರಿಕೆಗೆ ಅವಕಾಶ ನೀಡಲಾಗದು ಎಂಬ ನಿಲುವನ್ನು ಸುಪ್ರೀಂಕೋರ್ಟ್ ತಳೆದಿದೆ. ಹೇಗಾದರೂ ಮಾಡಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಬೇಕೆಂಬ ಇರಾದೆ ಹೊಂದಿರುವವರಿಗೆ ಇದರಿಂದ ಹಿನ್ನಡೆಯಾಗಿದೆ ಎಂದು ಹೇಳಿದರು.ಎಲ್ಲ ಗಡಿಗಳ ಗುರುತು ಖಚಿತವಾಗಿ ನಿಗದಿಪಡಿಸಿದರೆ ಇಂತಹ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.