ಸಿಎಂಗೆ ಗೋವಿಂದರಾಜ್ ಪತ್ರ:ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿಡಿ

7

ಸಿಎಂಗೆ ಗೋವಿಂದರಾಜ್ ಪತ್ರ:ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿಡಿ

Published:
Updated:

ಬೆಂಗಳೂರು: ಮೂಲ ಸೌಕರ್ಯ ಹೆಚ್ಚಿಸುವುದು ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿರಿಸುವಂತೆ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಕೆ.ಗೋವಿಂದರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.ಈ ಸಂಬಂಧ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಒಲಿಂಪಿಕ್ ಕ್ರೀಡಾಕೂಟ ಆಯೋಜನೆಗೆ 2 ಕೋಟಿ ರೂ. ನೀಡುವಂತೆ ಅವರು ಕೋರಿದ್ದಾರೆ.`2007-08ರಲ್ಲಿ ಮಂಡ್ಯ ಹಾಗೂ ಮೈಸೂರಿನಲ್ಲಿ ರಾಜ್ಯ ಒಲಿಂಪಿಕ್ ಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಇದಕ್ಕೆ ಸರ್ಕಾರ 1.67 ಕೋಟಿ ರೂ. ನೀಡಿತ್ತು. ಮುಂದಿನ ಕೂಟವನ್ನು ಬಳ್ಳಾರಿ ಹಾಗೂ ರಾಯಚೂರಿನಲ್ಲಿ ನಡೆಸಬೇಕಿತ್ತು. ಪ್ರಕೃತಿ ವಿಕೋಪ ಕಾರಣ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ 2012-13ರ ಕೂಟವನ್ನು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ಆಯೋಜಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ 2 ಕೋಟಿ ರೂ. ನೀಡಿ~ ಎಂದು ಗೋವಿಂದರಾಜ್ ಮನವಿ ಮಾಡಿದ್ದಾರೆ.`ಮುಂದಿನ ಕ್ರೀಡಾ ಚಟುವಟಿಕೆಗಳಿಗೆ ಹಣ ಮೀಸಲಿರಿಸಿ. ಒಲಿಂಪಿಕ್ಸ್ ಹಾಗೂ ಏಷ್ಯನ್ ಕ್ರೀಡಾಕೂಟಕ್ಕೆ ಸಿದ್ಧಗೊಳಿಸಲು ವಿಶೇಷ ತರಬೇತಿಗಾಗಿ ಪ್ರತಿಭಾವಂತ ಕ್ರೀಡಾಪಟುಗಳನ್ನು ವಿದೇಶಕ್ಕೆ ಕಳುಹಿಸಲು 10 ಕೋಟಿ ರೂ. ಅಗತ್ಯವಿದೆ. ಹಾಗೇ, ಕ್ರೀಡಾ ಸೆಸ್ ಜಾರಿಗೆ ತನ್ನಿ. ಇದರಿಂದ ಹಣಕಾಸು ಸಮಸ್ಯೆಯನ್ನು ನೀಗಿಸಬಹುದು~ ಎಂದೂ ಅವರು ಮನವಿ ಮಾಡಿದ್ದಾರೆ.`ಹೊಸಕೋಟೆ ಅಥವಾ ಮೈಸೂರಿನಲ್ಲಿ ವೆಲೋಡ್ರೋಮ್ ನಿರ್ಮಾಣ, ಕೆನ್ಸಿಂಗ್ಟನ್ ಈಜುಕೊಳವನ್ನು ಅಂತರರಾಷ್ಟ್ರೀಯ ದರ್ಜೆಗೇರಿಸಲು ಸಹಾಯ ಹಾಗೂ 2011ರಲ್ಲಿ ರಾಂಚಿಯಲ್ಲಿ ನಡೆದ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದವರಿಗೆ ಬಹುಮಾನ ಹಣ ನೀಡಲು ಸರ್ಕಾರ ಮುಂದಾಗಬೇಕು~ ಎಂದು ಗೋವಿಂದರಾಜ್ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry