ಶುಕ್ರವಾರ, ನವೆಂಬರ್ 15, 2019
22 °C
ಮೋದಿ ಸರ್ಕಾರದ ಲೋಕಾಯುಕ್ತ ಮಸೂದೆ

ಸಿ.ಎಂಗೆ ಪರಮಾಧಿಕಾರ

Published:
Updated:

ಗಾಂಧಿನಗರ (ಪಿಟಿಐ):  ಲೋಕಾಯುಕ್ತರ ನೇಮಕದ ವಿಚಾರದಲ್ಲಿ  ರಾಜ್ಯಪಾಲರೊಂದಿಗೆ ಸಂಘರ್ಷಕ್ಕೆ  ಇಳಿದು ದೇಶದ ಜನತೆಯ ಗಮನ ಸೆಳೆದಿದ್ದ ಗುಜರಾತ್‌ನ ನರೇಂದ್ರ ಮೋದಿ ಸರ್ಕಾರ, ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ.ಲೋಕಾಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಪಾಲರ `ಪರಮಾಧಿಕಾರ' ಮೊಟಕುಗೊಳಿಸುವ ತಿದ್ದುಪಡಿ ಮಸೂದೆಯನ್ನು  ಮೋದಿ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದೆ.ಲೋಕಾಯುಕ್ತ ಆಯೋಗ ತಿದ್ದುಪಡಿ ಮಸೂದೆ-2013ರ ಅನ್ವಯ ಲೋಕಾಯುಕ್ತರನ್ನು ನೇಮಿಸುವ ಎಲ್ಲಾ ಅಧಿಕಾರ ಮುಖ್ಯಮಂತ್ರಿ ನೇತೃತ್ವದ ಆಯ್ಕೆ ಸಮಿತಿ ಇರುತ್ತದೆ ಹಾಗೂ ಆ ಸಮಿತಿಯ ಶಿಫಾರಸಿನ ಅನ್ವಯ ರಾಜ್ಯಪಾಲರು ಲೋಕಾಯುಕ್ತರನ್ನು ನೇಮಿಸಬೇಕಾಗುತ್ತದೆ.ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು  ಲೋಕಾಯುಕ್ತರ ವ್ಯಾಪ್ತಿಯಿಂದ ಹೊರಗಿಡುವ ನಿರ್ಣಾಯಕ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಒದಗಿಸುವ ವಿಶೇಷ ನಿಬಂಧನೆಯನ್ನೂ ಸಹ ಹೊಸ ಮಸೂದೆ ಒಳಗೊಂಡಿದೆ.ಹಿನ್ನೆಲೆ: ಗುಜರಾತ್ ರಾಜ್ಯಪಾಲರಾದ ಕಮಲಾ ಬೇನಿವಾಲ ಕಳೆದ ವರ್ಷ ನ್ಯಾಯಮೂರ್ತಿ ಆರ್. ಎ. ಮೆಹ್ತಾ ಅವರನ್ನು  ಗುಜರಾತ್ ಲೋಕಾಯುಕ್ತರಾಗಿ ನೇಮಿಸಿದ್ದರು. ಸರ್ಕಾರದ ಸಲಹೆ ಪಡೆಯದೇ ರಾಜ್ಯಪಾಲರು ಲೋಕಾಯುಕ್ತರನ್ನು ನೇಮಿಸಿದ ಕ್ರಮವನ್ನು ಪ್ರಶ್ನಿಸಿ, ಗುಜರಾತ್ ಸರ್ಕಾರ ಕಾನೂನು ಹೋರಾಟ ನಡೆಸಿತ್ತು. ಆದರೆ, ರಾಜ್ಯಪಾಲರ ಈ ಕ್ರಮವನ್ನು ಗುಜರಾತ್ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಎರಡೂ ಎತ್ತಿಹಿಡಿದಿದ್ದು, ಮೋದಿ ಅವರಿಗೆ ಹಿನ್ನಡೆಯಾಗಿತ್ತು.  ಸುಪ್ರೀಂನಲ್ಲೂ ಅರ್ಜಿ:  ಒಂದೆಡೆ ಸುಪ್ರೀಂ ತೀರ್ಪು ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುವ ಗುಜರಾತ್ ಸರ್ಕಾರ, ಮತ್ತೊಂದೆಡೆ ವಿಧಾನಸಭೆಯಲ್ಲಿ  ಹೊಸ ಮಸೂದೆ ಮಂಡಿಸಿ ಲೋಕಾಯುಕ್ತರ ನೇಮಕಗೊಳಿಸುವ ಅಧಿಕಾರವನ್ನು ಮುಖ್ಯಮಂತ್ರಿ ಕೈಯಲ್ಲೇ ಇಟ್ಟುಕೊಳ್ಳಲು ಹೊರಟಿದೆ.

ಪ್ರತಿಕ್ರಿಯಿಸಿ (+)