ಸಿಎಂಸಿ ಆದೇಶ ಖಂಡಿಸಿ ಇಂದು ಮಂಡ್ಯ ಬಂದ್

7

ಸಿಎಂಸಿ ಆದೇಶ ಖಂಡಿಸಿ ಇಂದು ಮಂಡ್ಯ ಬಂದ್

Published:
Updated:
ಸಿಎಂಸಿ ಆದೇಶ ಖಂಡಿಸಿ ಇಂದು ಮಂಡ್ಯ ಬಂದ್

ನವದೆಹಲಿ: ತಮಿಳುನಾಡಿಗೆ ಮತ್ತೆ 12 ಟಿಎಂಸಿ ಅಡಿಗಳಷ್ಟು ನೀರು ಬಿಡಲು  ಕಾವೇರಿ ಉಸ್ತುವಾರಿ ಸಮಿತಿಯು (ಸಿಎಂಸಿ) ಶುಕ್ರವಾರ ಕರ್ನಾಟಕಕ್ಕೆ ಆದೇಶಿಸಿದ್ದಕ್ಕೆ ಪ್ರತಿಕ್ರಿಯೆ ಎನ್ನುವಂತೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಶನಿವಾರ ಮಂಡ್ಯ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ. ಮಂಡ್ಯ ಜಿಲ್ಲಾಧಿಕಾರಿಗಳು ಶನಿವಾರ ಶಾಲೆ ಕಾಲೇಜಿಗೆ ರಜೆ ಪ್ರಕಟಿಸಿದ್ದಾರೆ.ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ದೆಹಲಿಯಲ್ಲಿ ತಿಳಿಸಿದ್ದಾರೆ.ಕಾವೇರಿ ನದಿಯಲ್ಲಿ ಲಭ್ಯವಿರುವ ನೀರನ್ನು `ಅತ್ಯಂತ ಸಮರ್ಪಕ'ವಾಗಿ ಬಳಸುವಂತೆಯೂ `ಸಿಎಂಸಿ'ಯು ಕರ್ನಾಟಕ ಮತ್ತು ತಮಿಳುನಾಡಿಗೆ ಸೂಚನೆ ನೀಡಿದೆ.  ಡಿಸೆಂಬರ್ ತಿಂಗಳಲ್ಲಿ ಉಭಯ ರಾಜ್ಯಗಳ ನೀರಿನ ಅಗತ್ಯ ನಿರ್ಧರಿಸಲು ಎರಡು ದಿನಗಳೊಳಗಾಗಿ ಸಭೆ ನಡೆಸುವಂತೆ ಸುಪ್ರೀಂಕೋರ್ಟ್ ಬುಧವಾರ `ಸಿಎಂಸಿ'ಗೆ ಆದೇಶ ನೀಡಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ `ಸಿಎಂಸಿ' ಸಭೆ ನಡೆಯಿತು.ಮಂಡ್ಯ ವರದಿ: ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆ ಮಾಡಲಾಯಿತು. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟಿನ ಆದೇಶದಂತೆ ನಿತ್ಯ ಹತ್ತು ಸಾವಿರ ಕ್ಯೂಸೆಕ್ ನೀರನ್ನು ಗುರುವಾರ ರಾತ್ರಿಯಿಂದ ತಮಿಳುನಾಡಿಗೆ ಬಿಡುತ್ತಿದೆ. ಸರ್ಕಾರದ ಈ ನಿರ್ಧಾರ ರೈತರಲ್ಲಿ ಆಕ್ರೋಶ ಹುಟ್ಟಿಸಿರುವಾಗಲೇ ಕಾವೇರಿ ಉಸ್ತುವಾರಿ ಸಮಿತಿ ಈ ತಿಂಗಳ ಅಂತ್ಯದ ವೇಳೆಗೆ 12 ಟಿ.ಎಂ.ಸಿ ಅಡಿ ನೀರನ್ನು ಬಿಡುವಂತೆ ಆದೇಶಿರುವುದು `ಗಾಯದ ಮೇಲೆ ಬರೆ ಎಳೆದಂತೆ ಆಗಿದೆ' ಎಂದು ರೈತರು ಕುಪಿತರಾಗಿದ್ದಾರೆ.ಗುರುವಾರ ರಾತ್ರಿಯಿಂದ ನೀರು ಬಿಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿವಿಧ ಸಂಘಟನೆಗಳವರು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಪ್ರತಿಭಟನೆ ಆರಂಭಿಸಿದರು. ಮಧ್ಯಾಹ್ನ 1 ಗಂಟೆಯ ವೇಳೆಗೆ ಬಂದ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಧರಣಿ ನಿರತರಿಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಕೆಆರ್‌ಎಸ್‌ನಿಂದ ನೀರು ಹರಿಸುವುದನ್ನು ನಿಲ್ಲಿಸಿದರೆ ಮಾತ್ರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಹೇಳಿದರು.ಸ್ವಲ್ಪ ಸಮಯದ ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯೊಳಕ್ಕೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರು,  ಮಾದೇಗೌಡ ಅವರೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡು, ಪೊಲೀಸ್ ಪರೇಡ್ ಮೈದಾನಕ್ಕೆ ಕರೆದುಕೊಂಡು ಹೋದರು.ರೈತ ಸಂಘದ ವರಿಷ್ಠ ಕೆ.ಎಸ್. ಪುಟ್ಟಣ್ಣಯ್ಯ ಅವರು ಸಂಘದ ಸದಸ್ಯರೊಂದಿಗೆ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಪ್ರವೇಶದ್ವಾರದ ಬಳಿಯೇ ಅವರನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.ಮಂಡ್ಯ ತಾಲ್ಲೂಕಿನ ಇಂಡವಾಳು ಹಾಗೂ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೈತ ಸಂಘ ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು ಸೇರಿದಂತೆ ವಿವಿಧೆಡೆ ಪ್ರತಿಭಟನೆ ಮಾಡಲಾಗಿದೆ.ಅವಿಶ್ವಾಸಕ್ಕೆ ಮನವಿ: `ಜನರಿಗೆ ಮೋಸ ಮಾಡಿ ನೀರು ಬಿಟ್ಟಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡಲೇ ರಾಜೀನಾಮೆ ನೀಡಬೇಕು' ಎಂದು ಮಾದೇಗೌಡ ಆಗ್ರಹಿಸಿದ್ದಾರೆ.`ಇಂತಹ ಸರ್ಕಾರ ಆಡಳಿತದಲ್ಲಿ ಇರುವ ಅಗತ್ಯ ಇಲ್ಲ. ಆದ್ದರಿಂದ, ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಬೇಕು' ಎಂದು ಪ್ರತಿಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಈ ಅವಿಶ್ವಾಸ ಬೆಂಬಲಿಸಬೇಕು ಎಂದು ಕೆಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರನ್ನೂ ಕೋರಿದ್ದಾರೆ.ಅಲ್ಲಿ ನಡೆಯುವ ಮತದಾನದ ಮೂಲಕ ಯಾರು ರಾಜ್ಯದ ಪರವಾಗಿದ್ದಾರೆ ಎಂಬುದು ರಾಜ್ಯದ ಜನತೆಗೂ ಗೊತ್ತಾಗಲಿ. ಮುಂಬರುವ ದಿನಗಳಲ್ಲಿ ರಾಜ್ಯದ ವಿರೋಧಿ ನಿಲುವು ತಳೆಯುವವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.`ನೀರು ನಿಲ್ಲಿಸುವವರೆಗೂ ಹೋರಾಟ': ಕೆಆರ್‌ಎಸ್ ಜಲಾಶಯದಿಂದ ಒಂದು ಟಿಎಂಸಿ ನೀರನ್ನೂ ಬಿಡಬಾರದು. ನೀರು ನಿಲ್ಲಿಸುವವರೆಗೂ ಹೋರಾಟ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಹೋರಾಟ ಬೇರೆ ಸ್ವರೂಪ ಪಡೆದುಕೊಂಡರೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಮಾದೇಗೌಡ ಎಚ್ಚರಿಸಿದರು.ಕಾವೇರಿ ನಿರ್ವಹಣಾ ಸಮಿತಿ 12 ಟಿಎಂಸಿ ಅಡಿ ನೀರು ಬಿಡಬೇಕು ಎಂಬ ಹಿನ್ನೆಲೆಯಲ್ಲಿ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಅವರು, ಯಾವ ಆಧಾರದ ಮೇಲೆ ನೀರು ಬಿಡಲು ಸೂಚಿಸಿದ್ದಾರೋ ಗೊತ್ತಿಲ್ಲ. ಕೂಡಲೇ ಮುಖ್ಯಮಂತ್ರಿಗಳು ನೀರು ನಿಲ್ಲಿಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.ಬೆಳೆಗೆ ಹಾಗೂ ಕುಡಿಯಲು ನೀರಿಲ್ಲದಂತೆ ಆಗುತ್ತದೆ. ಜನರು ದಂಗೆ ಏಳುತ್ತಾರೆ. ಕಂದಾಯ ನಿರಾಕರಣೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾವೇರಿ ನದಿ ನೀರಿನ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಕರೆ ನೀಡಲಾಗುವುದು. ನೀರು ಹರಿಸುವುದನ್ನು ನಿಲ್ಲಿಸದಿದ್ದರೆ, ಸರ್ಕಾರ ಉರುಳಿಸುವ ಎಲ್ಲ ಯತ್ನಗಳನ್ನು ಮಾಡಲಾಗುವುದು ಎಂದರು. ಬೆಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಕೇಳಿದ್ದೇನೆ. ಯಾವುದೇ ಕಾರಣಕ್ಕೂ ಪೊಲೀಸರು ಲಾಠಿ ಕೈಗೆತ್ತಿಕೊಳ್ಳಬಾರದು. ರೈತರೂ ಲಾಠಿ ಕೈಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.ತಿಂಗಳಾಂತ್ಯಕ್ಕೆ ಅಂತಿಮ ಆದೇಶ 

ನವದೆಹಲಿ :
ಹಲವು ವರ್ಷಗಳಿಂದ ಕರ್ನಾಟಕ ಮತ್ತು ತಮಿಳುನಾಡು ಜನರ ನೆಮ್ಮದಿಗೆ ತೀವ್ರ ಭಂಗ ತಂದಿರುವ ಕಾವೇರಿ ನದಿ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ, ಕಾವೇರಿ ನ್ಯಾಯಮಂಡಳಿ ನೀಡಿದ ಐತೀರ್ಪಿನ ಕುರಿತು ಈ ತಿಂಗಳ ಕೊನೆಯ ವೇಳೆಗೆ ಅಂತಿಮ ಅಧಿಸೂಚನೆ ಹೊರಡಿಸುವುದಾಗಿ ಶುಕ್ರವಾರ ಕಾವೇರಿ ಜಲಾನಯದ ಪ್ರದೇಶದ ರಾಜ್ಯಗಳಿಗೆ ತಿಳಿಸಲಾಯಿತು. ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ: ಸಿಎಂ ಶೆಟ್ಟರ್

ನವದೆಹಲಿ:
ತಮಿಳುನಾಡಿಗೆ ರಾಜ್ಯದಿಂದ 12 ಟಿಎಂಸಿ ನೀರು ಬಿಡಲು ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಹಾಗೂ ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದಲ್ಲಿ (ಸಿಆರ್‌ಎ) ಪ್ರಶ್ನಿಸುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.`ಈ ಆದೇಶ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದ್ದು ವಾಸ್ತವ ಸ್ಥಿತಿ ಅರಿಯುವಲ್ಲಿ `ಸಿಎಂಸಿ' ವಿಫಲವಾಗಿದೆ. ರಾಜ್ಯ ಈಗಾಗಲೇ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು ಇದನ್ನು ಸೋಮವಾರ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು. ರಾಜ್ಯದ ಹಿತಾಸಕ್ತಿಗೆ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಜನತೆ ಶಾಂತಿ ಕಾಪಾಡಲು ಮನವಿ ಮಾಡಿದರು.ಶೆಟ್ಟರ್ ಭೇಟಿಗೆ ಅವಕಾಶ ನೀಡದ ಪ್ರಧಾನಿ:

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರಿತು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಶುಕ್ರವಾರ ಪ್ರಧಾನಿ ಅವರನ್ನು ಭೇಟಿ ಮಾಡಲು ಯತ್ನಿಸಿದರಾದರೂ ಇದಕ್ಕೆ ಪ್ರಧಾನಿ ಕಚೇರಿ ಅನುಮತಿ ಸಿಗಲಿಲ್ಲ. ಶೆಟ್ಟರ್ ಜತೆ ಸಮಾಲೋಚನೆ ನಡೆಸಲು ಪ್ರಧಾನಿ ಅವಕಾಶ ನಿರಾಕರಿಸಿದರು ಎನ್ನಲಾಗಿದೆ.ಇದಕ್ಕೆ ಕಾರಣವನ್ನೇನೂ ಪ್ರಧಾನಿ ಕಚೇರಿ ನೀಡಿಲ್ಲ. ಆದರೆ ಕಾವೇರಿ ವಿವಾದ ಕೋರ್ಟ್‌ನಲ್ಲಿರುವುದರಿಂದ ಈ ಸಂಬಂಧ ನದಿ ನೀರಿನ ವ್ಯಾಪ್ತಿಯ ಯಾವುದೇ ರಾಜ್ಯದ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಪ್ರಧಾನಿ ಬಂದಿದ್ದಾರೆ ಎನ್ನಲಾಗಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry