ಸಿ.ಎಂ ಅಧಿಕಾರದಲ್ಲಿ ಮುಂದುವರಿಯಬಾರದು

7

ಸಿ.ಎಂ ಅಧಿಕಾರದಲ್ಲಿ ಮುಂದುವರಿಯಬಾರದು

Published:
Updated:

ಬೆಂಗಳೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಭಾನುವಾರ ಇಲ್ಲಿ ಟೀಕಿಸಿದರು.ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಸಚಿವರು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಮಾಜಿ ಸಚಿವರು ಸಾಲು ಸಾಲಾಗಿ ಜೈಲು ಸೇರುತ್ತಿದ್ದಾರೆ. ಆದ್ದರಿಂದ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇಲ್ಲ ಎಂದರು.ಯಡಿಯೂರಪ್ಪ ಬಂಧನ ರಾಜಕಾರಣಿಗಳಿಗೆ ಪಾಠ ಇದ್ದಂತೆ. ಅವರ ಬಂಧನಕ್ಕೆ ಕಾಂಗ್ರೆಸ್ ಸಂಭ್ರಮಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜೈಲಿಗೆ ಹೋಗುವವರೆಗೂ ಯಡಿಯೂರಪ್ಪ ಆರೋಗ್ಯವಾಗಿದ್ದರು. ಜೈಲಿಗೆ ಹೋಗುತ್ತಿದ್ದಂತೆಯೇ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆ ಸೇರಿದ್ದಾರೆ. ಇದು ಜೈಲು ವಾಸದಿಂದ ತಪ್ಪಿಸಿಕೊಳ್ಳುವ ತಂತ್ರ ಎಂದು ದೂರಿದರು.ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಯಾವ ಮುಖ ಹೊತ್ತು ರಾಜ್ಯದಲ್ಲಿ ಜನಚೇತನ ಯಾತ್ರೆ ಹಮ್ಮಿಕೊಳ್ಳುತ್ತಾರೆ ಎಂದು ಅವರು ಪ್ರಶ್ನಿಸಿದರು. ಲೋಕಾಯುಕ್ತ ವರದಿ, ವಿದ್ಯುತ್ ಸಮಸ್ಯೆ, ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಚರ್ಚಿಸಲು ವಿಧಾನ ಮಂಡಲ ಅಧಿವೇಶನವನ್ನು ಕೂಡಲೇ ಕರೆಯಬೇಕು ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry