ಮಂಗಳವಾರ, ಏಪ್ರಿಲ್ 20, 2021
30 °C

ಸಿಎಂ ಅವರಿಂದ ಸೇಡಿನ ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ನನ್ನ ಹಾಗೂ ಕುಟುಂಬದ ಆಸ್ತಿ ವಿವರ ಕುರಿತ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಆದೇಶ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಗಂಭೀರ ಆರೋಪ ಮಾಡಿದರು.‘ಯಾವ ಕಾರಣಕ್ಕಾಗಿ ಯಡಿಯೂರಪ್ಪ ಅವರು ಪರೋಕ್ಷವಾಗಿ ಅಧಿಕಾರಿಗಳಿಗೆ ಈ ರೀತಿಯ ಆದೇಶ ನೀಡಿದ್ದಾರೆ ಎಂಬುದು ಗೊತ್ತಿಲ್ಲ, ಆದರೆ ಇದರಿಂದ ನನಗೆ ಯಾವುದೇ ರೀತಿಯ ಭಯವಿಲ್ಲ. ಅಧಿಕಾರದಲ್ಲಿ ಇದ್ದಾಗ ಯಡಿಯೂರಪ್ಪ, ಕುಮಾರಸ್ವಾಮಿ ಹಾಗೆ ನಾನು ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

 

‘ನನ್ನ ಆಸ್ತಿಪಾಸ್ತಿ ಬಗ್ಗೆ ಯಾವುದೇ ರೀತಿಯ ತನಿಖೆ ಮಾಡಿಕೊಳ್ಳಲಿ, ಅದಕ್ಕೆ ನನ್ನ ಅಭ್ಯಂತರವಿಲ್ಲ. ನಮ್ಮದು ಅವಿಭಕ್ತ ಕುಟುಂಬದ ಪರಂಪರೆ. ನಾನು ಈಗಾಗಲೇ ಆಸ್ತಿಯ ವಿವರಗಳನ್ನು ಲೋಕಾಯುಕ್ತರಿಗೆ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇನೆ. ಬೇಕಾದರೆ ನೇರವಾಗಿ ಮಾಹಿತಿ ಸಂಗ್ರಹ ಮಾಡಲಿ, ಪರೋಕ್ಷವಾಗಿ ಅಧಿಕಾರಿಗಳನ್ನು ಹೆದರಿಸಿ-ಬೆದರಿಸಿ ಮಾಡುವ ಅಗತ್ಯವಿಲ್ಲ’ ಎಂದರು.‘ನಾನು ಮತ್ತು ಯಡಿಯೂರಪ್ಪ ಒಟ್ಟಿಗೆ ಸಾರ್ವಜನಿಕರ ಜೀವನ ಪ್ರವೇಶಿಸಿದ್ದೇವೆ. ಇದಾದ ನಂತರ ಅವರ ಆಸ್ತಿ ಎಷ್ಟಿದೆ, ನನ್ನ ಆಸ್ತಿ ಎಷ್ಟಿದೆ ಎಂಬ ಬಗ್ಗೆ ತನಿಖೆಯಾಗಲಿ ಎಂದು ನಾನೇ ವಿಧಾನ ಸಭೆಯಲ್ಲಿ ಆಗ್ರಹಿಸಿದ್ದೇನೆ. ತನಿಖೆಗೆ ಅಂಜುವುದಿಲ್ಲ’ ಎಂದರು.ಭ್ರಷ್ಟಾಚಾರ ಪ್ರಕರಣಗಳು ಬಯಲಾಗುತ್ತವೆ ಎಂಬ ಭೀತಿ ಅವರನ್ನು ಕಾಡುತ್ತಿದೆ. ಹೀಗಾಗಿ ನನ್ನನ್ನು ಸಿಕ್ಕಿಸಲು ನನ್ನ ಮತ್ತು ಕುಟುಂಬದ ಆಸ್ತಿಪಾಸ್ತಿ ಹುಡುಕಾಟ ಹಾಗೂ ಮಾಹಿತಿ ಸಂಗ್ರಹಕ್ಕೆ ಆದೇಶಿಸಿದ್ದಾರೆ ಎಂದು ಆರೋಪಿಸಿದರು.

 

‘ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಆರಂಭಿಸಿರುವ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಯಡಿಯೂರಪ್ಪ ಹೇಳಿರುವುದು ‘ವರ್ಷದ ಜೋಕ್’ ಎಂಬುದಾಗಿ ವ್ಯಂಗ್ಯವಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ’ ಎಂದರು. ಈ ಮಧ್ಯೆ ಹಾವೇರಿಯಲ್ಲಿ ಮಾತನಾಡಿರುವ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳ ಆಸ್ತಿ ತನಿಖೆಗೆ ಆದೇಶಿಸಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.