ಸೋಮವಾರ, ಸೆಪ್ಟೆಂಬರ್ 16, 2019
29 °C

ಸಿಎಂ ಕಚೇರಿಯಿಂದಲೇ ಭ್ರಷ್ಟಾಚಾರ ನಿರ್ಮೂಲನೆ

Published:
Updated:

ಚಿಕ್ಕಮಗಳೂರು: `ಭ್ರಷ್ಟಾಚಾರ ನಿರ್ಮೂಲನೆ ರಾಜ್ಯದಲ್ಲಿ ಮೊದಲು ಮುಖ್ಯಮಂತ್ರಿ ಕಚೇರಿಯಿಂದಲೇ ಆರಂಭವಾಗ ಬೇಕೆನ್ನುವ ಆಶಯ ಹೊಂದಿದ್ದೇನೆ~ ಎಂದು ಮುಖ್ಯಮಂತ್ರಿ  ಸದಾನಂದಗೌಡ ಹೇಳಿದರು.ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ನಗರಸಭೆ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.ಕೂಲಿ ಕಾರ್ಮಿಕರು, ರೈತರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು 15 ದಿನದೊಳಗೆ ಕಡತ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿಗದಿತ ಸಮಯದೊಳಗೆ ಕಡತ ವಿಲೇವಾರಿ ಆಗದಿದ್ದರೆ ಅಧಿಕಾರಿಗಳನ್ನು ಹೊಣೆ ಮಾಡುವ ಕಾನೂನು ವಿದೇಶಗಳಲ್ಲಿದೆ.ಆ ಕಾನೂನು ಇಲ್ಲಿ ಜಾರಿಯಾಗಬೇಕೆನ್ನುವ ಉದ್ದೇಶ ನನ್ನದು. ಭ್ರಷ್ಟಾಚಾರದಿಂದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹೊರಬರಬೇಕು, ಇಲ್ಲದಿದ್ದರೆ ಸಮಾಜ ಅವರನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.ಕೊಪ್ಪಳ ವಿಧಾನಸಭೆ ಉಪಚುನಾವಣೆ ಮುಗಿದ ತಕ್ಷಣ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಜಿಲ್ಲೆಗೆ ವಿಶೇಷ ಅನುದಾನ ನೀಡುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ನೀಡುವ ಅನುದಾನಕ್ಕಿಂತಲೂ ಹೆಚ್ಚಿನ ಅನುದಾನ ನೀಡಲು ಆಸಕ್ತನಾಗಿದ್ದೇನೆ. ಜಿಲ್ಲೆಯ ಜನರ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ರಾಜ್ಯದ ಆಡಳಿತ ನಡೆಸುತ್ತೇನೆ. ಆ ಮೂಲಕ ನನ್ನನ್ನು ಆಯ್ಕೆ ಮಾಡಿದ ಜನರ ಕೀರ್ತಿಗೆ ಪಾತ್ರವಾಗುತ್ತೇನೆ ಎಂದರು.ರಾಜ್ಯದ ರಾಜಕೀಯದ ಏರುಪೇರು, ಗೊಂದಲದ ನಡುವೆಯೂ ಪ್ರತಿಪಕ್ಷದ ನಾಯಕರ ಟೀಕೆಗಳನ್ನು ಸಲಹೆಗಳೆಂದು ಸ್ವೀಕರಿಸುತ್ತೇನೆ. ಅಭಿವೃದ್ಧಿ ಕೆಲಸಗಳ ಮೂಲಕ ಪ್ರತಿಪಕ್ಷದ ಮುಖಂಡರಿಗೆ ಉತ್ತರ ನೀಡುತ್ತೇನೆ. ದೇವರು ಮುಖ್ಯಮಂತ್ರಿ ಸ್ಥಾನ ಕರುಣಿಸಿದ್ದು, ಇದು ಬಯಸದೆ ಬಂದ ಭಾಗ್ಯ. ರಾಜ್ಯದ ಜನರ ಸೇವಕನಾಗಿ, ಕೂಲಿಯಾಳು ಆಗಿ ಸೇವೆ ಮಾಡುತ್ತೇನೆ ಎಂದರು.ಜಿಲ್ಲೆಯ ಸಮಸ್ಯೆಗಳು ಪರಿಹಾರ ಕಾಣುವ ಕಾಲ ಸನ್ನಿಹಿತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಹೇಳಿದರು.ಈ ಜಿಲ್ಲೆಗೆ ರಾಜಕೀಯ ನ್ಯಾಯ ಸಿಕ್ಕಿಲ್ಲ, ಅಭಿವೃದ್ಧಿ ನ್ಯಾಯ ಹೆಚ್ಚು ಸಿಗಬೇಕೆನ್ನುವ ಆಶಯ ಹೊಂದಿರುವುದಾಗಿ ಶಾಸಕ ಸಿ.ಟಿ.ರವಿ ಹೇಳಿದರು.ದತ್ತಪೀಠಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು, ರಿಂಗ್ ರಸ್ತೆ ನಿರ್ಮಾಣ, ಸಿಮೆಂಟ್ ರಸ್ತೆ, ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಬೇಕು, ಜವಳಿ ಉದ್ಯಮ ನಿರ್ಮಾಣ ಆಗಬೇಕು, ಐಡಿಎಸ್‌ಜಿ ಕಾಲೇಜಿಗೆ ಪ್ರತ್ಯೇಕ ಸ್ನಾತಕೋತ್ತರ ವಿಭಾಗ ಆರಂಭಕ್ಕೆ ಮುಖ್ಯಮಂತ್ರಿಗಳು ಅನುದಾನ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು.ಶಾಸಕ ಸಿ.ಟಿ.ರವಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಶಾಸಕರ ಬೆಂಬಲಿಗರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ ಘಟನೆಯೂ ನಡೆಯಿತು.

Post Comments (+)