ಸಿಎಂ ಕುರ್ಚಿಗೇರಿದ ಹಿಂದಿನ ಬೆಂಚಿನ ಹುಡುಗ!

ಬುಧವಾರ, ಜೂಲೈ 17, 2019
30 °C

ಸಿಎಂ ಕುರ್ಚಿಗೇರಿದ ಹಿಂದಿನ ಬೆಂಚಿನ ಹುಡುಗ!

Published:
Updated:

ಹುಬ್ಬಳ್ಳಿ:  `ಅತ್ಯಂತ ಸೌಮ್ಯ ಸ್ವಭಾವದ ಜಗದೀಶ ಶೆಟ್ಟರ್ ಯಾವಾಗಲೂ ತೆರೆ-ಮರೆಯಲ್ಲೇ ಇರುತ್ತಿದ್ದ ಹುಡುಗ. ರಾಜಕೀಯ ಕ್ಷೇತ್ರಕ್ಕೆ ಒಗ್ಗುವಂತಹ ವ್ಯಕ್ತಿತ್ವವನ್ನು ನಾವೆಂದಿಗೂ ಅವರಲ್ಲಿ ಕಂಡಿಲ್ಲ. ಈಗ ಮುಖ್ಯಮಂತ್ರಿ ಹುದ್ದೆಗೆ ಏರಿದ ವರ್ತಮಾನ ಕೇಳಿ ಆನಂದದಷ್ಟೇ ಸೋಜಿಗವೂ ಆಗಿದೆ~`ಹಾಟ್ ಸೀಟ್~ ಎಂದೇ ಪ್ರತಿಬಿಂಬಿತವಾದ ಮುಖ್ಯಮಂತ್ರಿ ಹುದ್ದೆಗೆ ಭಾನುವಾರ ನಿಯೋಜನೆಗೊಂಡ ಶೆಟ್ಟರ್ ಕುರಿತು ಅವರ ಅತ್ಯಂತ ನೆಚ್ಚಿನ ಗುರುಗಳಾದ ನಿರಂಜನ ವಾಲಿಶೆಟ್ಟರ್ ಹಾಗೂ ಪ್ರೊ.ಎಂ.ಎಸ್. ಬಂಡಾರಗಲ್ ಹೇಳುವ ಮಾತುಗಳಿವು.ಸಾರ್ವಜನಿಕ ರಂಗದಲ್ಲಿ `ಸಜ್ಜನ ರಾಜಕಾರಣಿ~ ಎಂದೇ ಹೆಸರಾಗಿದ್ದಾರೆ ಶೆಟ್ಟರ್. ಅಮ್ಮನ ಮಾತನ್ನು ಕೇಳದೆ ಕತ್ತಲಾದರೂ ಬೀದಿಯಲ್ಲಿ ಚಿಣಿ-ಫಣಿ, ಗೋಲಿ ಆಡುತ್ತಿದ್ದ ತುಂಟ ಮಗ, ಕಾಲೇಜಿಗೆ ಚಕ್ಕರ್ ಹೊಡೆದು ಸಿನಿಮಾ ನೋಡುತ್ತಿದ್ದ ವಿದ್ಯಾರ್ಥಿ, ತಮ್ಮ ಕಕ್ಷಿದಾರರ ಪರ ಸಮರ್ಥವಾಗಿ ವಾದ ಮಂಡಿಸುತ್ತಿದ್ದ ವಕೀಲ, ಸೋದರಮಾವ ತೋರಿಸಿದ ಹುಡುಗಿಗೆ ಮೊದಲ ನೋಟದಲ್ಲೇ ಸೋತ ಪ್ರೇಮಿ, ರಾಜಕೀಯವನ್ನು ಚಳವಳಿಗೆ ಆಡುಂಬೊಲ ಮಾಡಿಕೊಂಡ ಹೋರಾಟಗಾರ, ಬಣ್ಣಹಚ್ಚಿದ ನಟ, ಮೊಳೆ ಜೋಡಿಸಿದ ಪತ್ರಕರ್ತ ಮೊದಲಾದ ವ್ಯಕ್ತಿತ್ವಗಳು ಅವರ ರಾಜಕಾರಣಿ ಚಿತ್ರದ ಚೌಕಟ್ಟಿನೊಳಗೆ ಅಡಗಿ ಕುಳಿತಿವೆ.ಚಿಣಿ-ಫಣಿ ಆಟದ ಗುಂಗು: ಕೇಶ್ವಾಪುರದ ಮಧುರಾ ಎಸ್ಟೇಟ್‌ಗೆ ಸ್ಥಳಾಂತರವಾಗುವ ಮುನ್ನ ಶೆಟ್ಟರ್ ಅವರ ಮನೆ ಇದ್ದದ್ದು ಹುಬ್ಬಳ್ಳಿಯ ತಾಡಪತ್ರಿ ಗಲ್ಲಿಯಲ್ಲಿ. ಅಲ್ಲಿಯ ಬೀದಿಯಲ್ಲಿ ಗೆಳೆಯ ಸದಾನಂದ ಹಾಸಲಗೇರಿ ಅವರೊಂದಿಗೆ ನಿತ್ಯ ಬೆಳಗಾದರೆ ಆಟ ಆಡುವುದೇ ಅವರ ಕಾಯಕವಾಗಿತ್ತು. ತಾಯಿ ಬಸವಣ್ಣೆಮ್ಮ ಇಲ್ಲವೆ ಅಕ್ಕ ವಿಜಯಾ ಅವರ ಗದರಿಕೆ ಈ ಹುಡುಗನ ಕಿವಿ ಮೇಲೆ ಬೀಳುತ್ತಲೇ ಇರಲಿಲ್ಲ. ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರಬಿದ್ದವರು ಸಂಜೆವರೆಗೆ ಬಾರಿಹಣ್ಣಿಗಾಗಿ ಊರ ಹೊರವಲಯದಲ್ಲಿ ಅಲೆಯುತ್ತಿದ್ದ ಘಟನೆಯನ್ನು ಹಾಸಲಗೇರಿ ನೆನಪಿಸಿಕೊಳ್ಳುತ್ತಾರೆ.`ಸಣ್ಣವರಿದ್ದಾಗ ಮನೆ ಮುಂದೆ ಬೇಕಾದಷ್ಟು ಆಟ ಆಡುತ್ತಿದ್ದೆವು. ಮುಂದೆ ಆರ್‌ಎಸ್‌ಎಸ್ ಸೇರಿದೆವು. ಅಲ್ಲಿಯೂ ಗಣವೇಷ ಧರಿಸಿ ಶಾಖೆಗೆ ತೆರಳುತ್ತಿದ್ದೆವು. ಅವರ ಗೆಳೆತನ ನನಗೆ ಸಾಕಷ್ಟು ಖುಷಿ ಕೊಟ್ಟಿದೆ~ ಎಂದು ಅವರು ಹೇಳುತ್ತಾರೆ.`ಅಭ್ಯಾಸದಲ್ಲಿ ಅವರೆಂದೂ ಪ್ರಖರ ಎನಿಸುವಂತಹ ಪ್ರತಿಭೆ ತೋರಲಿಲ್ಲ. ವಿದ್ಯೆಗಿಂತ ವಿನಯವೇ ಅವರ ದೊಡ್ಡ ಆಸ್ತಿಯಾಗಿತ್ತು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು, ತರಗತಿಯಲ್ಲಿ ಅತ್ಯಂತ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು~ ಎಂದು ತಮ್ಮ ಶಿಷ್ಯೋತ್ತಮನ ವ್ಯಕ್ತಿತ್ವವನ್ನು ತೆರೆದಿಡುತ್ತಾರೆ ವಾಲಿಶೆಟ್ಟರ್ ಮತ್ತು ಬಂಡಾರಗಲ್.`ವಾದ-ವಿವಾದದಿಂದ ದೂರ ಇರುವುದು, ಹಿರಿಯರನ್ನು ಗೌರವಿಸುವುದು ಅವರ ಹುಟ್ಟುಗುಣ. ಅದೇ ಈ ಹುಡುಗನನ್ನು ಅಷ್ಟೊಂದು ಎತ್ತರಕ್ಕೆ ಬೆಳೆಸಿದೆ~ ಎಂದು ಹೇಳುತ್ತಾರೆ.ಹುಬ್ಬಳ್ಳಿಯ ಬಾಸೆಲ್ ಮಿಷನ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದ ಅವರು, ಪ್ರತಿಷ್ಠಿತ ಜೆ.ಜಿ. ಕಾಮರ್ಸ್ ಕಾಲೇಜಿನಿಂದ ವಾಣಿಜ್ಯ ಪದವಿಯನ್ನೂ ಪೂರೈಸಿದ್ದರು. ಧಾರವಾಡದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಅಧ್ಯಯನ ಮಾಡಿದರು. ಶೆಟ್ಟರ್‌ಗೆ ರಮೇಶ ಶೆಟ್ಟಿ ಹೈಸ್ಕೂಲ್ ದಿನಗಳಿಂದಲೂ ಪರಮಾಪ್ತ ಮಿತ್ರ. ಕಾಲೇಜಿಗೆ ಚಕ್ಕರ್ ಹೊಡೆದು ಈ ಗೆಳೆಯರು ಸಿಕ್ಕಾಪಟ್ಟೆ ಸಿನಿಮಾ ನೋಡ್ದ್ದಿದರಂತೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಈ ಜೋಡಿ ಸದಾ ಮುಂದಿರುತ್ತಿತ್ತಂತೆ.ವ್ಯಕ್ತಿತ್ವ ರೂಪಿಸಿದ ಮೇಷ್ಟ್ರು: `ಪ್ರೀತಿಯ ಮೇಷ್ಟ್ರು ವಾಲಿಶೆಟ್ಟರ್ ಹಾಗೂ ಚಿಕ್ಕಪ್ಪ ಸದಾಶಿವ ಶೆಟ್ಟರ್ ಅವರಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗಿದ್ದೇನೆ. ನನ್ನ ವ್ಯಕ್ತಿತ್ವ ರೂಪಿಸಿದ್ದು ಅವರೇ. ಅವರಿಲ್ಲದ ನನ್ನ ಜೀವನವನ್ನು ನೆನಪಿಸಿಕೊಳ್ಳಲು ಸಾಧ್ಯವೇ ಇಲ್ಲ~ ಎನ್ನುತ್ತಾರೆ ಶೆಟ್ಟರ್. `ರಾಜಕಾರಣಿಯಾಗಿ ಎಷ್ಟೇ ಎತ್ತರಕ್ಕೆ ಬೆಳೆದಿರಬಹುದು. ಆದರೆ, ನಾನು ಎಂದಿಗೂ ವಕೀಲನೇ. ನನ್ನ ಪ್ರಿಯವಾದ ವೃತ್ತಿಯೇ ಅದು.ರಾಜಕೀಯದಿಂದ ನಿವೃತ್ತಿಯಾದ ದಿನ ಮತ್ತೆ ವಕೀಲನಾಗಿ ಕೆಲಸ ಮಾಡುತ್ತೇನೆ~ ಎನ್ನುತ್ತಾರೆ ಅವರು.

 ಮಥುರಾ ಪ್ಲಾಜಾದಲ್ಲಿ ಅವರ ಕಚೇರಿ ಇನ್ನೂ ಹಾಗೇ ಇದೆ. ಇಬ್ಬರು ಕಿರಿಯ ವಕೀಲರು ಅಲ್ಲಿಯ ಜವಾಬ್ದಾರಿ ನಿರ್ವಹಿಸುತ್ತಾರೆ.ವಿಜಯಾ `ಶಿಲ್ಪಾ~ ಆದಾಗ: ಮದುವೆ ವಿಷಯವಾಗಿ ಕೇಳಿದರೆ ಸಾಕು, ಶೆಟ್ಟರ್ ಮುಖ ಕೆಂಪೇರುತ್ತದೆ. `ಬಾದಾಮಿ ತಾಲ್ಲೂಕಿನ ಐಹೊಳೆ ಗ್ರಾಮದ ಮಹಾಂತಪ್ಪ ನಾಸಿ ನನ್ನ ಮಾವ. ಆಗ ಆಕೆ ಹೆಸರು ವಿಜಯಾ ಎಂದಿತ್ತು. ಎಸ್‌ಎಸ್‌ಎಲ್‌ಸಿಯನ್ನು ಆಗಷ್ಟೇ ಮುಗಿಸಿದ ರೂಪವತಿ ವಿಜಯಾಳನ್ನು ತೋರಿಸಿದಾಗ, `ಒಲ್ಲೆ~ ಎನ್ನಲು ಮನಸ್ಸೇ ಬರಲಿಲ್ಲ. ಆಕೆಗೆ ನಾನು ಶಿಲ್ಪಾ ಎಂಬ ಹೆಸರಿಟ್ಟೆ~ ಎಂಬುದಾಗಿ ಮೆಲುಕು ಹಾಕುತ್ತಲೇ ದೊಡ್ಡದಾಗಿ ನಗುತ್ತಾರೆ ಶೆಟ್ಟರ್.ಶೆಟ್ಟರ್ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ದೊಡ್ಡವ ಪ್ರಶಾಂತ. ಎಂಎಸ್ ಮುಗಿಸಿ ಹುಬ್ಬಳ್ಳಿಯಲ್ಲೇ ಸಾಫ್ಟ್‌ವೇರ್ ಕಂಪೆನಿ ಶುರುಮಾಡಿದ್ದರೆ, ಸಣ್ಣವ ಸಂಕಲ್ಪ ಎಂಎಸ್ ಮಾಡಲು ಅಮೆರಿಕಕ್ಕೆ ಹೊರಟಿದ್ದಾನೆ.

`ಮಗ ಮುಖ್ಯಮಂತ್ರಿ ಆಗಬೇಕು~ ಎಂಬ ಹಂಬಲದಲ್ಲಿದ್ದ ಶಿವಪ್ಪ ಕನಸು ಕೈಗೂಡುವ ಮುನ್ನವೇ ಅಗಲಿದ್ದಾರೆ. ತಾಯಿ ಬಸವಣ್ಣೆಮ್ಮ ಮಾತ್ರ ಪ್ರೀತಿಯ ಮಗನ ಆತ್ಮೀಯ ಕ್ಷಣಕ್ಕೆ ಸಾಕ್ಷಿಯಾಗಲು ಬೆಂಗಳೂರಿನ ಹಾದಿ ಹಿಡಿದಿದ್ದಾರೆ.ಶೆಟ್ಟರ್ ಅವರ ಮೂಲ ಊರು ಹುಬ್ಬಳ್ಳಿ ಪಕ್ಕದ ಮಿಶ್ರಿಕೋಟಿ. ಈಗಲೂ ಅವರ ಮನೆತನದ ಕೊಂಡಿಗಳು ಅಲ್ಲಿವೆ. ಒಂದಿಷ್ಟು ಜಮೀನೂ ಇದೆ.ಶೆಟ್ಟರ್ ಅವರ ತಂದೆ ಶಿವಪ್ಪ ಎಲ್‌ಎಲ್‌ಬಿ ಓದಿದ ನಂತರ ಹುಬ್ಬಳ್ಳಿಯಲ್ಲೇ ನೆಲೆಸಿದರು. ತಮ್ಮ ಬಳಿಗೆ ಬಂದ ಬಹುತೇಕ ಪ್ರಕರಣಗಳನ್ನು ಅವರು ರಾಜಿ  ಸಂಧಾನದ ಮೂಲಕವೇ ಬಗೆಹರಿಸುತ್ತಿದ್ದರು. ಹೀಗಾಗಿ `ರಾಜಿ ವಕೀಲರು~ ಎಂಬುದಾಗಿಯೇ ಶಿವಪ್ಪ ಪ್ರಖ್ಯಾತರಾಗಿದ್ದರು.ಹಾಗೆ ನೋಡಿದರೆ ಶೆಟ್ಟರ್ ಅವರದ್ದು ರಾಜಕೀಯ ಹಿನ್ನೆಲೆ ಹೊಂದಿದ ಕುಟುಂಬ. ಅವರ ಚಿಕ್ಕಪ್ಪ ಸದಾಶಿವ ಶೆಟ್ಟರ್ 1967ರಲ್ಲಿ ಜನಸಂಘದ ಶಾಸಕರಾಗಿ ಆಯ್ಕೆಯಾಗಿದ್ದರು. ದಕ್ಷಿಣ ಭಾರತದ ಮೊದಲ ಕಂತಿನ ಜನಸಂಘದ ಶಾಸಕರಲ್ಲಿ ಅವರೂ ಒಬ್ಬರಾಗಿದ್ದರು. ಶೆಟ್ಟರ್ ತಂದೆ ಶಿವಪ್ಪ, ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಸತತ ಐದು ಸಲ ಸದಸ್ಯರಾಗಿ ಆಯ್ಕೆಯಾಗಿದ್ದರು.ಜನಸಂಘದ ದಕ್ಷಿಣ ಭಾರತದ ಮೊದಲ ಮೇಯರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ರಾಜಕೀಯದಲ್ಲಿ ಅಪ್ಪ-ಚಿಕ್ಕಪ್ಪನ ಹಾದಿಯನ್ನೇ `ಹುಡುಗ~ ಜಗದೀಶ ಕೂಡ ಹಿಡಿದರು.ಕಂಬಾರ ನಾಟಕ, ಬೇಂದ್ರೆ ಗೀತೆ...

ಶೆಟ್ಟರ್‌ಗೆ ನಾಟಕವೆಂದರೆ ಪಂಚಪ್ರಾಣವಂತೆ. ವಕೀಲರ ಸಂಘದಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರೇ ಬಣ್ಣ ಹಚ್ಚಿಕೊಂಡು ನಾಟಕದಲ್ಲೂ ಅಭಿನಯಿಸಿದ್ದಾರೆ. ಡಾ.ಚಂದ್ರಶೇಖರ ಕಂಬಾರರ `ಜೈಸಿದನಾಯ್ಕ~ ಅವರು ಇತ್ತೀಚೆಗೆ ನೋಡಿದ ನಾಟಕವಾಗಿದೆ. ಕಂಬಾರರ ನಾಟಕಗಳು, ಬೇಂದ್ರೆ ಅವರ ಗೀತೆಗಳು, ಅನಕೃ ಅವರ ಕಾದಂಬರಿಗಳು ನನ್ನ ಮನಸ್ಸನ್ನು ಗಾಢವಾಗಿ ತಟ್ಟಿವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಅವರ ಮನೆಯ ಲೈಬ್ರರಿಯಲ್ಲಿ ನೂರಾರು ಕೃತಿಗಳ ಸಂಗ್ರಹವಿದೆ. ಅಂದಹಾಗೆ, ಕೆಲಕಾಲ ಪತ್ರಕರ್ತರಾಗಿಯೂ ಅವರು ಕೆಲಸ ಮಾಡಿದ್ದರು. ಪಾಪು ಅವರ `ಪ್ರಪಂಚ~ದ ಗರಡಿಯಲ್ಲಿ ಪಳಗಿದ್ದರು.ಪತ್ನಿ ಶಿಲ್ಪಾ ಅವರ ಜೊತೆ ವಾಕಿಂಗ್ ಹೋಗುವುದೆಂದರೆ ಅವರಿಗೆ ದಿನಚರಿಯ ಪ್ರಿಯವಾದ ಕೆಲಸ. ಎಂತಹದ್ದೇ ಸನ್ನಿವೇಶ ಎದುರಾದರೂ -ಕೌಟುಂಬಿಕವೇ ಆಗಿರಲಿ, ರಾಜಕೀಯಕ್ಕೇ ಸಂಬಂಧಿಸಿರಲಿ- ನನ್ನ ಪತಿ ಎಂದಿಗೂ ಸಿಟ್ಟಾಗಿಲ್ಲ ಎನ್ನುವುದು ಶೆಟ್ಟರ್‌ಗೆ ಶಿಲ್ಪಾ ಕೊಡುವ ಕಾಂಪ್ಲಿಮೆಂಟ್.ಆಗಿನ ಕಾಲದ ಜನಪ್ರಿಯ ವಾಹನವಾದ ಸ್ಕೂಟರ್ ಖರೀದಿಸಿದ್ದ ಶೆಟ್ಟರ್, ಪತ್ನಿ ಹಾಗೂ ಇಬ್ಬರೂ ಮಕ್ಕಳನ್ನು ಕೂಡಿಸಿಕೊಂಡು ಸಿನಿಮಾ ನೋಡಲು ಹೋಗುತ್ತಿದ್ದರು. ಪಕ್ಷ ಕಟ್ಟುವ ಸಲುವಾಗಿ ಓಡಾಡಿದ ವಾಹನವೂ ಅದಾಗಿದೆ. ಆದ್ದರಿಂದಲೇ ಮನೆಯಲ್ಲಿ ಅದನ್ನು ಇನ್ನೂ ಜತನದಿಂದ ಕಾಯ್ದಿಟ್ಟುಕೊಂಡಿದ್ದಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry