ಮಂಗಳವಾರ, ಜನವರಿ 28, 2020
19 °C
ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸೈಯದ್‌ ವಲಿಖಾದ್ರಿ

ಸಿಎಂ ಕೊಡುಗೆ: ಅಲ್ಪಸಂಖ್ಯಾತರು ಕಾಂಗ್ರೆಸ್‌ ನೆಡೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೇ ಮತ ಹಾಕುತ್ತಿರುವ ಅಲ್ಪಸಂಖ್ಯಾತರು ಮುಂದಿನ ಲೋಕಸಭಾ ಚುನಾವಣೆಯೊಳಗೆ ಜಾಗೃತಗೊಂಡು ಹೈಕಮಾಂಡ್ ಕಣಕ್ಕಿಳಿಸುವ ಅಭ್ಯರ್ಥಿಯನ್ನೇ ಬೆಂಬಲಿಸುವಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಡಿ.ಎಸ್. ಸೈಯದ್‌ವಲಿಖಾದ್ರಿ ಮನವಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಅಲ್ಪಸಂಖ್ಯಾತರ ವಿಭಾಗದ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಅವರು,  ಎಐಸಿಸಿ ಕಾರ್ಯದರ್ಶಿ ಸೆಲ್ವಕುಮಾರ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದಾಗ ಅಲ್ಪಸಂಖ್ಯಾತರ ಸಂಘಟನೆ ಕುರಿತು ಚರ್ಚಿಸಲಾಯಿತು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಬಹಳಷ್ಟು ಅನ್ಯಾಯವಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಅದ್ಭುತವಾದ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರು ಜಾಗೃತರಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಪಕ್ಷ  ಬಲಪಡಿಸಬೇಕು ಎಂದರು.ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗಾಗಿ ಮಾಹಿತಿ ಕೇಂದ್ರ ತೆರೆಯಲಾಗುವುದು. ಇದರಿಂದ ಸರ್ಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಸಹಾಯವಾಗುತ್ತದೆ. ಪ್ರತಿ ತಾಲ್ಲೂಕಿನಲ್ಲಿ ೮ ರಿಂದ ೧೦ ಮಹಿಳೆಯರನ್ನು ಅಲ್ಪಸಂಖ್ಯಾತರ ವಿಭಾಗಕ್ಕೆ ಸೇರಿಸಿಕೊಂಡು ರಾಜಕೀಯದಲ್ಲಿ ಸರ್ಕಾರ ನೀಡಿರುವ ಶೇ ೩೩ರಷ್ಟು ಮೀಸಲಾತಿ ಬಳಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಬ್ಬೀರ್ ಅಹಮ್ಮದ್ ಮಾತನಾಡಿ, ‘ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮತಗಳು ಚದುರದಂತೆ ಸಂಘಟನೆ  ಬಲಪಡಿಸಬೇಕಿದೆ. ಅಲ್ಪಸಂಖ್ಯಾತ ವರ್ಗ ದವರೆಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಚುನಾವಣೆ ಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.‘ಬಿದಾಯಿ ಯೋಜನೆಯ ಮಹತ್ವವನ್ನು ಅರಿಯದ ವಿರೋಧ ಪಕ್ಷದವರು ಸುಮ್ಮನೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರದ ಜನಪರ ಯೋಜನೆಗಳನ್ನು ಹಳ್ಳಿ ಹಳ್ಳಿಗೂ ತಲುಪಿಸುವ ಕೆಲಸವನ್ನು ಅಲ್ಪಸಂಖ್ಯಾತ ಮುಖಂಡರು ಮಾಡಬೇಕಾಗಿದೆ’ ಎಂದು ಸಲಹೆ ನೀಡಿದರು.ನಗರಸಭೆ ಮಾಜಿ ಉಪಾಧ್ಯಕ್ಷ ಅಲ್ಲಾಭಕ್ಷಿ ಮಾತನಾಡಿ, ‘ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯ ಸಂಪೂರ್ಣವಾಗಿ  ಕಾಂಗ್ರೆಸ್‌  ಬೆಂಬಲಿಸಿದೆ. ಹಾಗಾಗಿ ಸ್ಥಳೀಯರಿಗೆ ಟಿಕೆಟ್  ನೀಡಬೇಕು, ಜೊತೆಗೆ ಟಿಕೆಟ್ ಆಸೆಗೆ  ಪಕ್ಷಕ್ಕೆ ಬರುವ ಹೊಸಬರಿಗೆ ಮನ್ನಣೆ ನೀಡಬಾರದು’ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್‌ಮತಾಜ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರೆಲ್ಲಾ ಒಂದಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾಗಿದೆ ಎಂದು ತಿಳಿಸಿದರು.ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಎ.ಸಾಧಿಕ್‌ವುಲ್ಲಾ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ತಾಲ್ಲೂಕು ಅಧ್ಯಕ್ಷ ಮಹಮ್ಮದ್ ಇನಾಯತ್‌ವುಲ್ಲಾ, ಅಪ್ರೋಜ್, ಶಬ್ಬೀರ್, ಹಾಜಿ ಅನ್ವರ್‌ಸಾಬ್, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ನಿಸಾರ್, ಚೋಟು, ಟಿ. ಶಫೀವುಲ್ಲಾ, ಸುಭಾನ್ ಸೇರಿದಂತೆ ಅಲ್ಪಸಂಖ್ಯಾತರ ವಿಭಾಗದ ಪದಾಧಿಕಾರಿಗಳು  ಸಭೆಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)