ಸಿಎಂ ಕೋಟಾ ನಿವೇಶನ: ತನಿಖೆಗೆ ಸಮಿತಿ

7

ಸಿಎಂ ಕೋಟಾ ನಿವೇಶನ: ತನಿಖೆಗೆ ಸಮಿತಿ

Published:
Updated:

ಬೆಂಗಳೂರು: ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ `ಜಿ~ ಪ್ರವರ್ಗದ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಿದ ಬಿಡಿಎ ಕ್ರಮ ಕಾನೂನುಬದ್ಧವಾಗಿದೆಯೇ  ಎಂಬ ಬಗ್ಗೆ ಪರಿಶೀಲನೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳಾದ ಬಿ. ಪದ್ಮರಾಜ್, ರಂಗವಿಠಲಾಚಾರ್ ಹಾಗೂ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ. ಮಹಿಷಿ ನೇತೃತ್ವದ ಸಮಿತಿ ರಚನೆಯಾಗಿದೆ.ಬಿಡಿಎ ಮೂಲಕ 2006-07ರ ನಂತರ ಹಂಚಿಕೆ ಮಾಡಲಾದ `ಜಿ~ ಪ್ರವರ್ಗದ ನಿವೇಶನಗಳು ಸಮಿತಿ ತನಿಖೆ ವ್ಯಾಪ್ತಿಗೆ ಒಳಪಡುತ್ತವೆ. ವಕೀಲ ಎಸ್. ವಾಸುದೇವ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಹಾಗೂ ನ್ಯಾಯಮೂರ್ತಿ ಸೂರಿ ಅಪ್ಪಾರಾವ್ ನೇತೃತ್ವದ ಹೈಕೋರ್ಟ್‌ನ ವಿಭಾಗೀಯ ಪೀಠ ಆಗಸ್ಟ್ 25ರಂದು ನೀಡಿದ ಆದೇಶದ ಅನ್ವಯ ಸರ್ಕಾರ ಈ ಸಮಿತಿ ರಚಿಸಿದೆ.ಸಮಿತಿ ನೇಮಕಕ್ಕೆ ಹೈಕೋರ್ಟ್ ಆಗಸ್ಟ್‌ನಲ್ಲೇ ಆದೇಶ ನೀಡಿದ್ದರೂ, ಅಕ್ಟೋಬರ್ 10ರವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆಗ ವಾಸುದೇವ್ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರಿಗೆ ನೋಟಿಸ್ ಕಳುಹಿಸಿದರು. ಸಮಿತಿ ರಚಿಸದಿದ್ದರೆ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.`ಜಿ~ ಪ್ರವರ್ಗದ ಅಡಿ ನಿವೇಶನ ಹಂಚುವುದು ಅಕ್ರಮ ಎಂದು ಆಗಸ್ಟ್ 25ರಂದು ನೀಡಿದ ಆದೇಶದಲ್ಲಿ ಹೈಕೋರ್ಟ್ ಹೇಳಿತ್ತು. ಇದು ಸಂವಿಧಾನದ 14ನೇ ಕಲಂ ಉಲ್ಲಂಘನೆ ಎಂದೂ ಅಭಿಪ್ರಾಯಪಟ್ಟಿತ್ತು.`ಜಿ~ ಪ್ರವರ್ಗದ ಅಡಿ ನಿವೇಶನ ಕೋರಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ತನಿಖಾ ಸಮಿತಿಯ ಮುಂದಿಡಬೇಕು. ಸಮಿತಿಗೆ ಪ್ರತಿ ತಿಂಗಳು ಎರಡು ಲಕ್ಷ ರೂಪಾಯಿ ೌರವಧನ ನೀಡಬೇಕು. ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಮಿತಿ ಮೂರು ತಿಂಗಳಲ್ಲಿ ವರದಿ ನೀಡಬೇಕಿದೆ.2006ರ ಫೆಬ್ರುವರಿ 2ರಿಂದ 2007ರ ಅಕ್ಟೋಬರ್ 8ರವರೆಗೆ `ಜಿ~ ಪ್ರವರ್ಗದ ಅಡಿ ನೀವೇಶನ ಹಂಚಿಕೆ ಮಾಡಿದ ಕ್ರಮ ಕಾನೂನುಬದ್ಧವಾಗಿಲ್ಲ ಎಂದು ವಾಸುದೇವ್ ವಾದಿಸಿದ್ದರು. ಸಂಸದರು, ಶಾಸಕರು ಸೇರಿದಂತೆ ಒಟ್ಟು 250 ಮಂದಿಗೆ ಈ ಅವಧಿಯಲ್ಲಿ ನಿವೇಶನ ಹಂಚಿಕೆ ಆಗಿದೆ. ನಿವೇಶನ ಕೋರಿ ಅರ್ಜಿಯನ್ನೇ ಸಲ್ಲಿಸದಿದ್ದವರಿಗೂ ನಿವೇಶನ ನೀಡಲಾಗಿದೆ ಎಂದು ವಾಸುದೇವ್ ದೂರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry