ಬುಧವಾರ, ಮೇ 12, 2021
20 °C
ಪ್ರಭಾವಿ ಜನಪ್ರತಿನಿಧಿಗಳ ಮಕ್ಕಳದೇ ಕೈವಾಡ ಶಂಕೆ

ಸಿ.ಎಂ ತವರು ಜಿಲ್ಲೆಯಲ್ಲೂ ಮರಳು ದಂಧೆ

ಪ್ರಜಾವಾಣಿ ವಾರ್ತೆ/ಎಂ. ರವಿ Updated:

ಅಕ್ಷರ ಗಾತ್ರ : | |

ಮೈಸೂರು: ಮುಖ್ಯಮಂತ್ರಿ ತವರು ಜಿಲ್ಲೆಯಾದ ಮೈಸೂರಿನಲ್ಲಿಯೂ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಮರಳು ಗಣಿಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿ ಮಾಡಲಾದ `ಹೊಸ ಮರಳು ನೀತಿ' ಮಕಾಡೆ ಮಲಗಿದೆ. ರಾತೋರಾತ್ರಿ ಮರಳನ್ನು ಕದ್ದು ಸಾಗಿಸುತ್ತಿದ್ದವರು ಈಗ ಹಾಡಹಗಲೇ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ.ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನಲ್ಲಿ ಕಾವೇರಿ-ಕಪಿಲಾ, ನಂಜನಗೂಡಿನಲ್ಲಿ ಕಪಿಲಾ, ಹುಣಸೂರು ತಾಲ್ಲೂಕಿನಲ್ಲಿ ಲಕ್ಷ್ಮಣತೀರ್ಥ, ಎಚ್.ಡಿ.ಕೋಟೆಯಲ್ಲಿ ಕಬಿನಿ ನದಿ ಹಾದು ಹೋಗಿವೆ. ನದಿಪಾತ್ರದ ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಹೊತ್ತಿದ್ದ ಮಾಜಿ ಸಚಿವ ಎಸ್.ಎ. ರಾಮದಾಸ್ ಹಲವಾರು ಅಡ್ಡಿ ಆತಂಕ ಎದುರಿಸಿ ಕೊನೆಗೂ ಹೊಸ ಮರಳು ನೀತಿಯನ್ನು ಕಳೆದ ವರ್ಷ ಜಾರಿ ಮಾಡಿದ್ದರು.ಲೋಕೋಪಯೋಗಿ ಇಲಾಖೆ ಹೆಸರಿನಲ್ಲಿ ಗ್ರಾಹಕರು ಡಿ.ಡಿಗಳನ್ನು ಪಡೆದು ಒಂದು ಲೋಡ್ (5.5 ಕ್ಯುಬಿಕ್ ಮೀಟರ್)ಗೆ ರೂ 7ಸಾವಿರಕ್ಕೆ ಮರಳು ಪಡೆಯುತ್ತಿದ್ದರು. ಜಿಲ್ಲಾಡಳಿತವೇ ಮರಳು ವಿತರಣಾ ಕೇಂದ್ರ (ಯಾರ್ಡ್)ಗಳನ್ನು ಗುರುತಿಸಿ ಮರಳು ಸರಬರಾಜು ಮಾಡುತ್ತಿತ್ತು. ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಲಾಗಿತ್ತು. ಪರ್ಮಿಟ್ ಇಲ್ಲದ ಲಾರಿಗಳಿಗೆ ಮರಳು ನೀಡುವುದನ್ನು ನಿರಾಕರಿಸಲಾಗಿತ್ತು. ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ಕೇಸು ದಾಖಲಿಸಲಾಗಿತ್ತು. ಹಾಗಾಗಿ, ಮರಳು ಅಕ್ರಮ ಸಾಗಣೆಗೆ ಬ್ರೇಕ್ ಬಿದ್ದಿತ್ತು.ಜನಪ್ರತಿನಿಧಿಗಳ ಮಕ್ಕಳ ಕೈವಾಡ!: ಜಿಲ್ಲಾಡಳಿತದಿಂದ ಯಾರ್ಡ್‌ಗಳನ್ನು ಗುರುತಿಸಿ ಮರಳನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ, ಜಿಲ್ಲಾಡಳಿತದ ಕಣ್ತಪ್ಪಿಸಿ ನದಿ ಒಡಲಿನಿಂದ ಮರಳನ್ನು ಅಕ್ರಮವಾಗಿ ತೆಗೆದು ಸಾಗಣೆ ಮಾಡಲಾಗುತ್ತಿದೆ. ಅಕ್ರಮ ಮರಳು ದಂಧೆಯಲ್ಲಿ ಪ್ರಭಾವಿ ಜನಪ್ರತಿನಿಧಿಗಳ ಮಕ್ಕಳ ಕೈವಾಡ ಇದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಹಿಂದಿನಿಂದಲೂ ಇದೆ. ಅಧಿಕಾರಿಗಳ ಸಹಾಯ ಇಲ್ಲದೆ ಅಕ್ರಮವಾಗಿ ಮರಳು ಸಾಗಣೆ ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.ತಿ. ನರಸೀಪುರ: ತಾಲ್ಲೂಕಿನ ತಲಕಾಡು ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಕ್ದ್ದದು ಮುಚ್ಚಿ ನಡೆಯುತ್ತಿದೆ. ಕಾವೇರಿ ಮತ್ತು ಕಪಿಲಾ ಪಾತ್ರದ ಮೇದನಿ. ಮಾವಿನಹಳ್ಳಿ, ಮಡವಾಡಿ, ಹೆಮ್ಮಿಗೆ ಆಸುಪಾಸಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ  ಮರಳು ಸಾಗಣೆ ಮಾಡಲಾಗುತ್ತಿದೆ. ಡಿ.ಡಿ ನೀಡಿ ಪಡೆಯುವ ಮರಳಿಗಿಂತ ಅಕ್ರಮವಾಗಿ ತೆಗೆದ ಮರಳು ಗುಣಮಟ್ಟದ್ದು ಎಂಬ ಮಾತು ಕೇಳಿ ಬರುತ್ತಿದೆ.ನಂಜನಗೂಡು ತಾಲ್ಲೂಕಿನ ಕಪಿಲಾ ನದಿಪಾತ್ರದಲ್ಲಿ ಹಲವೆಡೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು `ಜಾಣ ಕುರುಡು' ಮೆರೆದಿದ್ದಾರೆ. ದೇಬೂರು ಬಳಿಯ ಕಪಿಲಾ ನದಿ ತೀರದಲ್ಲಿ ಕೊಪ್ಪರಿಕೆಗಳಿಂದ ನಿರಂತರವಾಗಿ ಮರಳನ್ನು ತೆಗೆಯಲಾಗುತ್ತಿದೆ. ಕೂಲಿ ಕಾರ್ಮಿಕರು ನೀರಲ್ಲಿ ಮುಳಗಿ ಮರಳು ಹೊರ ತೆಗೆದು ಕೊಪ್ಪರಿಕೆಗಳನ್ನು ಭರ್ತಿ ಮಾಡುತ್ತ್ದ್ದಿದಾರೆ. ನದಿಯಲ್ಲಿ ಮುಳುಗಿ ಮರಳು ತೆಗೆಯುವುದರಿಂದ ನೀರಿನ ಹರಿವಿನ ದಿಕ್ಕು ಬದಲಾಗುತ್ತದೆ. ಗುಂಡಿಗಳು ಬಿದ್ದು ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದು ಪರಿಸರ ನಾಶಕ್ಕೆ ದಾರಿ ಎಂಬುದು ಸ್ಥಳೀಯರ ಆರೋಪ.ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸೇತುವೆ, ರೈಲ್ವೆ ಸೇತುವೆ ಸಮೀಪದ ಕತ್ವಾಡಿಪುರ ಗ್ರಾಮ, ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಬಳಿಯ ನದಿತೀರದ ಹೆಜ್ಜಿಗೆ, ತೊರೆಮಾವು, ಧಾರ್ಮಿಕ ಕ್ಷೇತ್ರ ಸುತ್ತೂರು, ಹದಿನಾರು, ಬೊಕ್ಕಹಳ್ಳಿ, ಹುಳಿಮಾವು ಸೇರಿದಂತೆ ಹಲವು ಕಡೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ.ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಗುರುತಿಸಲಾಗಿರುವ ಯಾರ್ಡ್‌ಗಳಲ್ಲಿ ಮರಳನ್ನು ದಾಸ್ತಾನು ಮಾಡಿಯೇ ಇಲ್ಲ. ಡಿ.ಡಿಗಳಿಗೆ ಮರಳನ್ನು ನೀಡುತ್ತಿಲ್ಲ. ಬದಲಿಗೆ ಅಕ್ರಮವಾಗಿ ಮರಳನ್ನು ಸಾಗಣೆ ಮಾಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಮತ್ತು ಪೊಲೀಸರ ಕುಮ್ಮಕ್ಕು ಇದೆ ಎನ್ನಲಾಗಿದೆ. ತಾಲ್ಲೂಕಿನ ಚಿಕ್ಕನಂದಿ ಮತ್ತು ಹತ್ವಾಳು ಗ್ರಾಮದ ಸಮೀಪದಲ್ಲಿರುವ ಕಬಿನಿ ನದಿಯಿಂದ ಮರಳನ್ನು ನೇರವಾಗಿ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ. ಟೆಂಡರ್ ಆಗದ ಕಂಚಮಳ್ಳಿ ನದಿ ತೀರದ ಭಾಗದಲ್ಲಿ ಸಾವಿರಾರು ಲೋಡ್‌ಗಳಷ್ಟು ಮರಳನ್ನು ರಾಜಾರೋಷವಾಗಿ ಸಾಗಿಸಲಾಗುತ್ತಿದೆ.ಕೆ.ಆರ್.ನಗರ ತಾಲ್ಲೂಕಿನ ಕಾವೇರಿ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ತಾಲ್ಲೂಕಿನ ತಿಪ್ಪೂರು ದೆಗ್ಗನಹಳ್ಳಿಯಲ್ಲಿ ಕಾವೇರಿ ನದಿ ದಂಡೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಮರಳು, ಟ್ರ್ಯಾಕ್ಟರ್ ಮತ್ತು ಲಾರಿಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಲಾಗಿತ್ತು. ಇದರಿಂದ ಹೆದರಿದ ಅಕ್ರಮ ಮರಳು ಸಾಗಣೆದಾರರು ಕೆಲ ದಿನಗಳ ಕಾಲ ಮರೆಯಾಗಿದ್ದರು. ಇದೀಗ ಮತ್ತೆ ಮರಳು ದಂಧೆಗೆ ಇಳಿದಿದ್ದಾರೆ.ಹುಣಸೂರು ತಾಲ್ಲೂಕಿನಲ್ಲಿ ಹಾದು ಹೋಗುವ ಲಕ್ಷ್ಮಣತೀರ್ಥ ನದಿಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಹನಗೋಡು ಹೋಬಳಿ ಕೇಂದ್ರದಲ್ಲಿ ನಿರ್ಮಿಸಿರುವ ಅಣೆಕಟ್ಟೆ ಅಂಚಿನಲ್ಲೇ ಮರಳನ್ನು ನಿರಂತರವಾಗಿ ತೆಗೆಯಲಾಗುತ್ತಿದೆ. ಕಟ್ಟೆಮಳಲವಾಡಿ ಗ್ರಾಮದ ಅಣೆಕಟ್ಟೆಯ ಆಸುಪಾಸಿನಲ್ಲಿ ನಿರಂತರವಾಗಿ ಕೊಪ್ಪರಿಕೆಗಳಿಂದ ಮರಳು ತೆಗೆಯಲಾಗುತ್ತಿದೆ. ಈಚೆಗೆ ಮರಳು ಗುಂಡಿಗೆ ವಿದ್ಯಾರ್ಥಿ ಮುಳುಗಿ ಪ್ರಾಣ ಕಳೆದುಕೊಂಡ ಘಟನೆಯೂ ನಡೆದಿದೆ. ಇಷ್ಟಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ವಿ. ಶ್ರೀನಿವಾಸ ಪ್ರಸಾದ್, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಜಿಲ್ಲೆಯನ್ನು ಪ್ರತಿನಿಧಿಸುತ್ತಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಜನಪ್ರತಿನಿಧಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.ಅಕ್ರಮ ಸಾಗಣೆಗೆ ಕಡಿವಾಣ

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲಾಗಿದೆ. ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಲಾಗಿದೆ. ಅಕ್ರಮ ಮರಳು ದಂಧೆಯಲ್ಲಿ ಸಿಕ್ಕಿಬಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲ್ಲ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಮರಳು ನೀತಿ ಜಾರಿಯಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಸಿ. ಶಿಖಾ, ಜಿಲ್ಲಾಧಿಕಾರಿಅಧಿಕಾರಿಗಳ ಜಾಣ ಕುರುಡು


`ನಂಜನಗೂಡು ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು `ಜಾಣ ಕುರುಡು' ತೋರುತ್ತಿದ್ದಾರೆ. ಬೊಕ್ಕಹಳ್ಳಿ- ಹುಳಿಮಾವು ಮಧ್ಯೆ ಕಪಿಲಾ ನದಿತೀರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿ ಮೂರು ತಿಂಗಳಾಗಿದ್ದರೂ ಈವರೆಗೆ ಕ್ರಮ ಜರುಗಿಸಿಲ್ಲ'

-ಬೊಕ್ಕಹಳ್ಳಿ ನಂಜುಂಡಸ್ವಾಮಿ, ರೈತ ಮುಖಂಡಅಕ್ರಮ ಮರಳು ಕೇರಳಕ್ಕೆ


`ಪರವಾನಗಿ ಪಡೆದ ದೋಣಿಗಳನ್ನು ಮಾತ್ರ ಬಳಸಿ ಮರಳು ಸಂಗ್ರಹ ಮಾಡಬೇಕು ಎಂಬ ಕಾನೂನು ಇದೆ. ಆದರೂ, ಕಾನೂನನ್ನು ಗಾಳಿಗೆ ತೂರಿ ದೋಣಿಗಳನ್ನು ಬಳಸಿ ಮರಳನ್ನು ನದಿಯಿಂದ ಎತ್ತಲಾಗುತ್ತಿದೆ. ಅಕ್ರಮವಾಗಿ ತೆಗೆದ ಮರಳನ್ನು ಕೇರಳ ಮತ್ತು ಇತರೆಡೆ ಸಾಗಿಸಲಾಗುತ್ತಿದೆ. ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ'

-ದೊಳ್ಳೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಕಂಚಮಳ್ಳಿ,                      

ಎಚ್.ಡಿ.ಕೋಟೆ ತಾಲ್ಲೂಕು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.