ಸಿಎಂ ಪುತ್ರರಿಂದ ಕಟ್ಟಡ ನಿರ್ಮಾಣದಲ್ಲಿ ಅಕ್ರಮ

ಶನಿವಾರ, ಜೂಲೈ 20, 2019
22 °C

ಸಿಎಂ ಪುತ್ರರಿಂದ ಕಟ್ಟಡ ನಿರ್ಮಾಣದಲ್ಲಿ ಅಕ್ರಮ

Published:
Updated:

ಬೆಂಗಳೂರು: `ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರರಿಗೆ ಸೇರಿದ ಆಕರ್ಷ ಪ್ರಾಪರ್ಟಿಸ್ ಕಂಪೆನಿಯು ಶಿವಮೊಗ್ಗದಲ್ಲಿ 59,348 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಿಸಲು ನಗರ ಪಾಲಿಕೆಯಿಂದ ಅನುಮತಿ ಪಡೆದು, 1,12,453 ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಅಕ್ರಮವಾಗಿ ಕಟ್ಟಿದೆ. ಈ ಕಟ್ಟಡ ನಿರ್ಮಾಣದಲ್ಲಿ 27 ಕೋಟಿ ರೂ ಕಪ್ಪು ಹಣ ಬಳಕೆಯಾಗಿದೆ~.ಜೆಡಿಎಸ್ ಮುಖಂಡ ಎಸ್. ಬಂಗಾರಪ್ಪ ಅವರು ತಮ್ಮ ನಿವಾಸದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ ಅವರ ವಿರುದ್ಧ ಮಾಡಿದ ಆರೋಪ ಇದು. `ಅಕ್ರಮವಾಗಿ ನಿರ್ಮಿಸಲಾಗಿರುವ ಈ ಕಟ್ಟಡವನ್ನು ಧ್ವಂಸಗೊಳಿಸಬೇಕು. ಈ ಕಟ್ಟಡದ ನಿರ್ಮಾಣದಲ್ಲಿ ಬಳಕೆಯಾಗಿರುವ ಕಪ್ಪುಹಣದ ಕುರಿತು ಆದಾಯ ತೆರಿಗೆ ಇಲಾಖೆಯಿಂದ ತನಿಖೆ ನಡೆಯಬೇಕು~ ಎಂದು ಅವರು ಒತ್ತಾಯಿಸಿದರು.ಕಂಪೆನಿಯು ಶಿವಮೊಗ್ಗದಲ್ಲಿ 2006ರಲ್ಲಿ ಈ ಕಟ್ಟಡಕ್ಕಾಗಿ 3.4 ಕೋಟಿ ರೂಪಾಯಿಗೆ 28,280 ಚದರ ಅಡಿಯ ಭೂಮಿ ಖರೀದಿಸುವಾಗ 1.5 ಕೋಟಿ ರೂಪಾಯಿಯಷ್ಟು ಆದಾಯ ತೆರಿಗೆ ವಂಚಿಸಿದೆ ಎಂದು ಆರೋಪಿಸಿದರು.2010ರ ಏಪ್ರಿಲ್ 18ರಂದು ಶಿವಮೊಗ್ಗ ನಗರ ಪಾಲಿಕೆಗೆ ಆಕರ್ಷ ಕಂಪೆನಿಯು ಮೂರು ಅಂತಸ್ತುಗಳ 59,348 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕಂಪೆನಿಯು ಆ ವರ್ಷ ಅಕ್ಟೋಬರ್ ವೇಳೆಗೆ ನಾಲ್ಕು ಅಂತಸ್ತುಗಳ 1,12,453 ಚದರ ಅಡಿಯ ಕಟ್ಟಡ ನಿರ್ಮಿಸಿದೆ. ಇದರಲ್ಲಿ ಹೆಚ್ಚುವರಿಯಾದ 53,105 ಚದರ ಅಡಿ ವಿಸ್ತೀರ್ಣಕ್ಕೆ ಇವತ್ತಿನವರೆಗೂ ನಗರ ಪಾಲಿಕೆಯ ಅನುಮತಿ ಇಲ್ಲ ಎಂದು ಅವರು ವಿವರಿಸಿದರು.ಈ ಕಟ್ಟಡ ನಿರ್ಮಾಣಕ್ಕೆ ಕೇವಲ 12 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಕಂಪೆನಿ ಹೇಳಿದೆ. ಆದರೆ ಅತ್ಯಾಧುನಿಕ ಸೌಲಭ್ಯ, ಇಟಾಲಿಯನ್ ಟೈಲ್ಸ್ ಹಾಕಿರುವ ಈ ಕಟ್ಟಡ ನಿರ್ಮಾಣಕ್ಕೆ ಏನಿಲ್ಲವೆಂದರೂ 39 ಕೋಟಿ ರೂಪಾಯಿ ಬೇಕು.ಇದರಲ್ಲಿ ಹೆಚ್ಚುವರಿ 27 ಕೊಟಿ ರೂಪಾಯಿ ಕಪ್ಪು ಹಣವೇ ಇರಬೇಕು ಎಂದು ಆರೋಪಿಸಿದರು. ಈ ಕಟ್ಟಡವನ್ನು ಈಗ ರಾಯಲ್ ಆರ್ಕಿಡ್ಸ್‌ನವರಿಗೆ ಹೋಟೆಲ್ ನಡೆಸಲು ಗುತ್ತಿಗೆ ನೀಡಲಾಗಿದೆ. ಇದೇ ರಾಯಲ್ ಆರ್ಕಿಡ್ಸ್ ಕಂಪೆನಿ, ಕೃಷ್ಣರಾಜಸಾಗರ ಪ್ರದೇಶದಲ್ಲಿ ನಡೆಸುತ್ತಿರುವ ಪಂಚತಾರಾ ಹೋಟೆಲ್‌ನ 1.5 ಕೋಟಿ ರೂಪಾಯಿ ಮೊತ್ತದ ವಿದ್ಯುತ್ ಬಿಲ್‌ಅನ್ನು ಮೂರು ವರ್ಷಗಳಿಂದ ಸರ್ಕಾರಕ್ಕೆ ಪಾವತಿಸಿಲ್ಲ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry