ಗುರುವಾರ , ಸೆಪ್ಟೆಂಬರ್ 19, 2019
26 °C

ಸಿಎಂ ಭೇಟಿ: ಬಿಜೆಪಿ ಉತ್ಸಾಹ

Published:
Updated:

ಗುಲ್ಬರ್ಗ: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನಗರಕ್ಕೆ ಮೊದಲ ಸಲ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಸಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿಗೆ ಶುಭ ಕೋರಲು ಸಾವಿರಾರು ಬ್ಯಾನರ್‌ಗಳನ್ನು ಮುಖ್ಯರಸ್ತೆಗಳಲ್ಲಿ ಕಟ್ಟಲಾಗಿದೆ. ಸಣ್ಣಪುಟ್ಟ ನಾಯಕರೂ ತಮ್ಮ ಭಾವಚಿತ್ರವುಳ್ಳ ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟಿಸಿದ್ದಾರೆ.ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಮಿನಿ ವಿಧಾನಸೌಧವನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ. ಹೈ-ಕ ವಿಮೋಚನಾ ದಿನಾಚರಣೆಯ ರೂವಾರಿ ಸರ್ದಾರ ವಲ್ಲಭಭಾಯಿ ಪಟೇಲ್ ಪುತ್ಥಳಿಯ ಸುತ್ತಲಿನ ಪ್ರದೇಶವನ್ನು ಶುಚಿಗೊಳಿಸಲಾಗಿದ್ದು, ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಸ್ಥಳ ಪರಿಶೀಲನೆ ನಡೆಸಿದರು.ಶನಿವಾರ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಮೂಲಕ ಬೆಳಿಗ್ಗೆ 5.50ಕ್ಕೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿಗಳು, ಬೆಳಿಗ್ಗೆ 8.15ಕ್ಕೆ ಅಧಿಕಾರಿಗಳ ಜತೆ ಚರ್ಚೆ ನಡೆಸುವರು. 9ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, 9.30ಕ್ಕೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. 10.50ಕ್ಕೆ ನಗರದ ಸೇಡಂ ರಸ್ತೆಯಲ್ಲಿರುವ ಸ್ವಾಮಿ ನಾರಾಯಣ ಗುರುಕುಲದಲ್ಲಿ ನಡೆಯಲಿರುವ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ, 11.30ಕ್ಕೆ ಹಜರತ್ ಖಾಜಾ ಬಂದಾನವಾಜ್ ದರ್ಗಾ ಮತ್ತು ಮಧ್ಯಾಹ್ನ 12ಕ್ಕೆ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವರು. 12.30ಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿ.ಡಿ.ಎ. ಎಂಜಿನಿಯರಿಂಗ್ ಕಾಲೇಜಿನ ಸಮಗ್ರ ಅಭಿವೃದ್ಧಿ ಪ್ರಾಂಗಣ ಹಾಗೂ ಸುವರ್ಣ ಮಹಾದ್ವಾರವನ್ನು ಉದ್ಘಾಟಿಸುವರು. ಮಧ್ಯಾಹ್ನ 2.15ಕ್ಕೆ ಹೆಲಿಕಾಪ್ಟರ್ ಮೂಲಕ ರಾಯಚೂರು ಜಿಲ್ಲೆಯ ದೇವದುರ್ಗಕ್ಕೆ ತೆರಳುವರು.ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಜತೆ ಈ ಎಲ್ಲ ಕಾರ್ಯಕ್ರಮಗಳಲ್ಲಿ  ಪಾಲ್ಗೊಳ್ಳಲಿದ್ದಾರೆ.

Post Comments (+)