ಸಿಎಂ ಯಡಿಯೂರಪ್ಪ ಆಸ್ತಿ ವಿವರ ಬಹಿರಂಗ

7

ಸಿಎಂ ಯಡಿಯೂರಪ್ಪ ಆಸ್ತಿ ವಿವರ ಬಹಿರಂಗ

Published:
Updated:

ಬೆಂಗಳೂರು: ಶಿಕಾರಿಪುರ ತಾಲ್ಲೂಕಿನಲ್ಲಿ 18.23 ಎಕರೆ ಕೃಷಿ ಭೂಮಿ, ಶಿರಾಳಕೊಪ್ಪದಲ್ಲಿ 9.12 ಎಕರೆ ಕೈಗಾರಿಕಾ ಭೂಮಿ, ಶಿಕಾರಿಪುರದಲ್ಲಿ ಮೂರು ನಿವೇಶನ, ಒಂದು ಮನೆ, ಬೆಂಗಳೂರಿನಲ್ಲಿ ಒಂದು ಮನೆ, ಬ್ಯಾಂಕ್ ಖಾತೆಗಳಲ್ಲಿ 33.43 ಲಕ್ಷ ರೂಪಾಯಿ...

-ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಘೋಷಿಸಿಕೊಂಡಿರುವ ಆಸ್ತಿ ವಿವರ. ತಮ್ಮ ಆಸ್ತಿ ವಿವರ ಕುರಿತು ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಜನವರಿ 31ರಂದು ಬರೆದಿರುವ ಪತ್ರವನ್ನು ಮುಖ್ಯಮಂತ್ರಿಯವರ ಸಚಿವಾಲಯ ಭಾನುವಾರ ಸಂಜೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಆಸ್ತಿ 1.82 ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದರು. ಆದರೆ ಈಗ ಅವರು ಆಸ್ತಿಯ ನಿಖರ ಮೌಲ್ಯವನ್ನು ಹೇಳಿಲ್ಲ. ಬದಲಿಗೆ, ಆಸ್ತಿಗಳ ವಿವರಗಳನ್ನು ಮಾತ್ರವೇ ನಮೂದಿಸಿದ್ದಾರೆ. 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಾಗ, 2010ರ ಮಾರ್ಚ್ 31ಕ್ಕೆ ಕೊನೆಗೊಂಡಂತೆ ಲೋಕಾಯುಕ್ತ ಮತ್ತು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದ ಆಸ್ತಿ ವಿವರಗಳನ್ನೂ ಪತ್ರದಲ್ಲಿ ನೀಡಿದ್ದಾರೆ.

ಬಿಜೆಪಿಯ ಎಲ್ಲ ಮುಖ್ಯಮಂತ್ರಿಗಳು ಮತ್ತು ವಿರೋಧಪಕ್ಷದ ನಾಯಕರು ತಕ್ಷಣವೇ ತಮ್ಮ ಆಸ್ತಿ ವಿವರ ಘೋಷಿಸಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಇತ್ತೀಚೆಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ  ತಮ್ಮ ಆಸ್ತಿ ವಿವರ ಕುರಿತು ಜ. 27ರಂದು ಗಡ್ಕರಿಗೆ ಪತ್ರ ಬರೆದಿದ್ದರು.

ಮಕ್ಕಳ ಆಸ್ತಿ ಬಹಿರಂಗವಿಲ್ಲ: ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಅವರ ಪುತ್ರರು ಮತ್ತು ಪುತ್ರಿಯರು ಸಂಪಾದಿಸಿರುವ ಆಸ್ತಿ ಕುರಿತು ಪ್ರತಿಪಕ್ಷಗಳು ನಿರಂತರವಾಗಿ ಪ್ರಶ್ನೆ ಎತ್ತುತ್ತಿವೆ. ಆದರೆ ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ಮುಖ್ಯಮಂತ್ರಿಯವರು ತಮ್ಮ ಮಕ್ಕಳ ಆಸ್ತಿ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಪುತ್ರಿಯರಾದ ಬಿ.ವೈ.ಪದ್ಮಾವತಿ, ಬಿ.ವೈ.ಅರುಣಾದೇವಿ ಮತ್ತು ಬಿ.ವೈ.ಉಮಾದೇವಿ ತಮ್ಮ ಜೊತೆಗಿಲ್ಲ.

ಎಲ್ಲರೂ ಸ್ವತಂತ್ರವಾಗಿ ವಾಸಿಸುತ್ತಿದ್ದಾರೆ. ಪುತ್ರರಾದ ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜಯೇಂದ್ರ ಕೂಡ ಸ್ವತಂತ್ರವಾಗಿದ್ದಾರೆ. ಅವರಿಬ್ಬರೂ 2004ರಿಂದಲೇ ಪ್ರತ್ಯೇಕವಾಗಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿಎಂ ಆದ ಬಳಿಕ ಖರೀದಿಸಿಲ್ಲ: ಶಿಕಾರಿಪುರ ತಾಲ್ಲೂಕಿನ ಚನ್ನಹಳ್ಳಿಯಲ್ಲಿ ಭೂ ನ್ಯಾಯಮಂಡಳಿ ಮೂಲಕ ಮಂಜೂರಾಗಿರುವ 8.17 ಎಕರೆ ಕೃಷಿ ಭೂಮಿಯನ್ನು ಯಡಿಯೂರಪ್ಪ ಹೊಂದಿದ್ದಾರೆ. ಅದೇ ಗ್ರಾಮದಲ್ಲಿ ಅವರ ಪತ್ನಿ ಮೈತ್ರಾದೇವಿ ಅವರಿಗೆ ಸೇರಿದ 5.04 ಎಕರೆ ಭೂಮಿಯೂ 2005ರ ಡಿಸೆಂಬರ್ 12ರಂದು ಯಡಿಯೂರಪ್ಪ ಅವರಿಗೆ ಬಂದಿದೆ.

ಶಿಕಾರಿಪುರ ತಾಲ್ಲೂಕಿನ ತಿಮ್ಮಲಾಪುರದಲ್ಲಿ 2007ರಲ್ಲಿ 5.02 ಎಕರೆ ಕೃಷಿ ಭೂಮಿ ಖರೀದಿಸಿದ್ದಾರೆ. ಈ ಪತ್ರದ ಪ್ರಕಾರ ಮುಖ್ಯಮಂತ್ರಿಯಾದ ಬಳಿಕ ಅವರು ಯಾವುದೇ ಸ್ಥಿರಾಸ್ತಿ ಖರೀದಿಸಿಲ್ಲ.

ಎರಡು ಮನೆ; ಮೂರು ನಿವೇಶನ: ಮುಖ್ಯಮಂತ್ರಿ ಬೆಂಗಳೂರಿನ ಆರ್.ಎಂ.ವಿ. ಬಡಾವಣೆಯಲ್ಲಿ 50/80 ಅಡಿ ವಿಸ್ತೀರ್ಣದ ಮನೆ ಹೊಂದಿದ್ದಾರೆ. 1997ರಲ್ಲಿ ಬಿಡಿಎ ಈ ನಿವೇಶನ ಮಂಜೂರು ಮಾಡಿತ್ತು. ಶಿಕಾರಿಪುರದಲ್ಲಿ 28/50 ಅಡಿ ವಿಸ್ತೀರ್ಣದ ಮನೆ ಇದೆ. ಅಲ್ಲಿಯೇ 22/35, 40/35 ಮತ್ತು 2/22 ಅಡಿ ವಿಸ್ತೀರ್ಣದ ಮೂರು ನಿವೇಶನಗಳಿವೆ. ಈ ನಿವೇಶನಗಳು ಅವರ ಪತ್ನಿಯಿಂದ ಬಂದ ಆಸ್ತಿ.

ಶಿರಾಳಕೊಪ್ಪದಲ್ಲಿ 2007ರಲ್ಲಿ 9.12 ಎಕರೆ ಕೃಷಿ ಭೂಮಿ ಖರೀದಿಸಿದ್ದರು. 2008ರ ಡಿಸೆಂಬರ್‌ನಲ್ಲಿ ಈ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಪರಿವರ್ತನೆ ಮಾಡಿಸಿಕೊಂಡಿರುವುದಾಗಿ ವಿವರಿಸಿದ್ದಾರೆ.

ಬ್ಯಾಂಕ್‌ನಲ್ಲಿ ರೂ 33.43 ಲಕ್ಷ: ಯಡಿಯೂರಪ್ಪ ಅರು ವಿವಿಧ ಬ್ಯಾಂಕ್‌ಗಳಲ್ಲಿ ಏಳು ಉಳಿತಾಯ ಖಾತೆಗಳನ್ನು ಹೊಂದಿದ್ದಾರೆ. ವಿಜಯಾ ಬ್ಯಾಂಕ್‌ನ ಪೀಣ್ಯ ಶಾಖೆಯಲ್ಲಿ ಹೊಂದಿದ್ದ ಖಾತೆಯನ್ನು ಚುನಾವಣೆ ಬಳಿಕ ಅದನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲಿ ಒಟ್ಟು 33,43,805 ರೂಪಾಯಿ ಹೊಂದಿದ್ದಾರೆ. ಅವರು 2008ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸಮಯದಲ್ಲಿ ಇದೇ ಖಾತೆಗಳಲ್ಲಿ ಒಟ್ಟು ರೂ 8,25,239 ಇತ್ತು.

ಅಪೆಕ್ಸ್ ಬ್ಯಾಂಕ್‌ನ ವಿಧಾನಸೌಧ ಶಾಖೆಯಲ್ಲಿರುವ ಖಾತೆಗೆ ಮುಖ್ಯಮಂತ್ರಿ ಹುದ್ದೆಯ ವೇತನ ಮತ್ತು ಭತ್ಯೆ ಪಾವತಿ ಆಗುತ್ತಿದೆ. ಈ ಖಾತೆಯಲ್ಲಿ ಸದ್ಯ 17.92 ಲಕ್ಷ  ಇದೆ. ಕೃಷಿ ಮತ್ತು ಕಟ್ಟಡ ಬಾಡಿಗೆ ಆದಾಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಕೆನರಾ ಬ್ಯಾಂಕ್‌ನ ಶಿಕಾರಿಪುರ ಶಾಖೆಯಲ್ಲಿನ ಖಾತೆಯಲ್ಲಿರುವ ರೂ 2.19 ಲಕ್ಷ  ಅದೇ ಮೂಲದಿಂದ ಬಂದಿದೆ ಎಂದಿದ್ದಾರೆ.

ಮುಖ್ಯಮಂತ್ರಿಯವರ ಮನೆಯಲ್ಲಿ ರೂ 10.45 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳಿವೆ. 2010ರ ಮಾರ್ಚ್ 31ರ ವೇಳೆಗೆ ರೂ 7.60 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳಿದ್ದವು. ಬಳಿಕ ರೂ 2.85 ಲಕ್ಷ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾರೆ.

2010ರ ಮಾರ್ಚ್ 31ರವರೆಗೂ ತಮ್ಮ ಬಳಿ ಒಂದು ಕಂಟೆಸ್ಸಾ ಕಾರು ಮತ್ತು ಒಂದು ಸ್ಕಾರ್ಪಿಯೋ ವಾಹನ ಇತ್ತು. ಬಳಿಕ ಅದನ್ನು ಮಾರಾಟ ಮಾಡಿರುವುದಾಗಿ ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಷೇರು; ಹೂಡಿಕೆ: ಶಿಕಾರಿಪುರದ ಶಿವ ಸಹಕಾರಿ ಬ್ಯಾಂಕ್‌ನಲ್ಲಿ ರೂ 20 ಸಾವಿರ ಠೇವಣಿ ಇಟ್ಟಿದ್ದಾರೆ. ಶಿಕಾರಿಪುರದ ಅರ್ಬನ್ ಬ್ಯಾಂಕ್ ಮತ್ತು ಸಾಫ್ಟ್‌ವೇರ್ ಟೆಕ್ ಗ್ರೂಪ್‌ನಲ್ಲಿ ತಲಾ 100 ಹಾಗೂ ಝೆನಿತ್ ಇನ್ಫೋಟೆಕ್ ಲಿಮಿಟೆಡ್‌ನಲ್ಲಿ 50 ಷೇರುಗಳನ್ನು ಹೊಂದಿದ್ದಾರೆ.

ಯಡಿಯೂರಪ್ಪ ಅವರು 1987ರಿಂದ 1.70 ಲಕ್ಷ ರೂಪಾಯಿ ಅಂತಿಮ ಪಾವತಿ ಮೌಲ್ಯದ ಜೀವ ವಿಮಾ ಪಾಲಿಸಿ ಹೊಂದಿದ್ದಾರೆ. 2008ರ ಆಗಸ್ಟ್‌ನಲ್ಲಿ ಬಿಎಸ್‌ಎಲ್‌ಐ ಕಂಪೆನಿಯ ಪಿಂಚಣಿ ವಿಮೆ ಪಾಲಿಸಿ ಖರೀದಿಸಿದ್ದಾರೆ.

ಬ್ಯಾಂಕ್ ಖಾತೆಗಳ ವಿವರ: ಅಪೆಕ್ಸ್ ಬ್ಯಾಂಕ್‌ನ ವಿಧಾನಸೌಧ ಶಾಖೆ- ರೂ 17,92,731; ಕಾರ್ಪೊರೇಷನ್ ಬ್ಯಾಂಕ್ ಸದಾಶಿವನಗರ ಶಾಖೆ- ರೂ 5.24 ಲಕ್ಷ; ಕರ್ನಾಟಕ ಬ್ಯಾಂಕ್ ಶಿಕಾರಿಪುರ ಶಾಖೆ- ರೂ 731; ಶಿಕಾರಿಪುರದ ಶಿವ ಸಹಕಾರಿ ಬ್ಯಾಂಕ್- ರೂ 1,782; ಶಿಕಾರಪುರದ ಅರ್ಬನ್ ಬ್ಯಾಂಕ್- ರೂ 46,000; ಎಸ್‌ಬಿಎಂ ಶಿವಮೊಗ್ಗ ಶಾಖೆ- ರೂ 7,58,925; ಕೆನರಾ ಬ್ಯಾಂಕ್ ಶಿಕಾರಿಪುರ ಶಾಖೆ- ರೂ 2,19,636

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry