ಸಿ.ಎಂ ವಾಯುಯಾನಕ್ಕೆ 9 ಕೋಟಿ

7

ಸಿ.ಎಂ ವಾಯುಯಾನಕ್ಕೆ 9 ಕೋಟಿ

Published:
Updated:

ಬೆಂಗಳೂರು: ಸರ್ಕಾರಿ ಪ್ರವಾಸದ ವೇಳೆ ಹೆಲಿಕಾಪ್ಟರ್ ಬಳಕೆಯನ್ನು ಮಿತಿಗೊಳಿಸುವುದಾಗಿ ಹೇಳಿದ್ದರೂ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಕಳೆದ ಎಂಟು ತಿಂಗಳ ಅವಧಿಯಲ್ಲಿ `ವಾಯುಯಾನ~ಕ್ಕೆ ಒಂಬತ್ತು ಕೋಟಿ ರೂ. ವಿನಿಯೋಗಿಸಿದ್ದಾರೆ.ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ `ಪ್ರಜಾವಾಣಿ~ ಪಡೆದುಕೊಂಡಿರುವ ಮಾಹಿತಿ ಪ್ರಕಾರ, ಸದಾನಂದ ಗೌಡರು ಕಳೆದ ಆಗಸ್ಟ್‌ನಿಂದ ಇದೇ ಮಾರ್ಚ್‌ವರೆಗಿನ ಅವಧಿಯಲ್ಲಿ 62 ಬಾರಿ ಹೆಲಿಕಾಪ್ಟರ್ ಸೇವೆ ಬಳಸಿಕೊಂಡಿದ್ದಾರೆ. ರಾಜ್ಯದ ವಿವಿಧ ಪ್ರದೇಶಗಳು ಹಾಗೂ ಹೊರರಾಜ್ಯಗಳ ಪ್ರವಾಸಕ್ಕೆ ಅವರು ಈ ಸೇವೆಯನ್ನು ಬಳಸಿಕೊಂಡಿದ್ದಾರೆ. ಇದಕ್ಕೆ 7.84 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.ಇದೇ ಅವಧಿಯಲ್ಲಿ ಬಾಡಿಗೆ ವಿಮಾನಗಳ ಸೇವೆಯನ್ನು 17 ಬಾರಿ ಬಳಸಿದ್ದಾರೆ. ಇದಕ್ಕೆ 1.22 ಕೋಟಿ ರೂ. ಖರ್ಚು ಮಾಡಲಾಗಿದೆ.ಒಟ್ಟಿನಲ್ಲಿ, ಮುಖ್ಯಮಂತ್ರಿಗಳು ಎಂಟು ತಿಂಗಳ ಅವಧಿಯಲ್ಲಿ ಹೆಲಿಕಾಪ್ಟರ್ ಹಾಗೂ ಬಾಡಿಗೆ ವಿಮಾನ ಸೇವೆಗಾಗಿ ಪ್ರತಿ ತಿಂಗಳು ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಬಾಡಿಗೆ ವಿಮಾನ ಹಾಗೂ ಹೆಲಿಕಾಪ್ಟರ್ ಸೇವೆಗೆ ಪ್ರತಿ ತಿಂಗಳು ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ವಿನಿಯೋಗಿಸಿದ್ದರು.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸರ್ಕಾರದ ಪೂರ್ಣಾವಧಿ ಬಳಕೆಗಾಗಿ ಹೆಲಿಕಾಪ್ಟರ್ ಖರೀದಿಸುವ ಚಿಂತನೆ ನಡೆಸಿತ್ತು. ಆದರೆ ಅವುಗಳ ನಿರ್ವಹಣಾ ವೆಚ್ಚ ತೀರಾ ದುಬಾರಿ ಎಂಬ ಕಾರಣಕ್ಕೆ ಯೋಜನೆಯನ್ನು ಕೈಬಿಡಲಾಯಿತು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry