ಸಿಎಂ ಸಂಪರ್ಕದಲ್ಲಿಲ್ಲ: ಕುಮಾರಸ್ವಾಮಿ

7

ಸಿಎಂ ಸಂಪರ್ಕದಲ್ಲಿಲ್ಲ: ಕುಮಾರಸ್ವಾಮಿ

Published:
Updated:

ತಿಪಟೂರು: ಮುಖ್ಯಮಂತ್ರಿ ಸದಾನಂದಗೌಡ ಜೆಡಿಎಸ್ ಅಣತಿಯಂತೆ ವರ್ತಿಸುತ್ತಿದ್ದಾರೆ ಎಂಬುದು ಹಸಿಸುಳ್ಳು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.ತಾಲ್ಲೂಕಿನ ರಂಗಾಪುರ ಜಿಲ್ಲಾ ಪಂಚಾಯಿತಿ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲು ಬುಧವಾರ ಆಗಮಿಸಿದ್ದ ಅವರು ಪತ್ರಕರ್ತರ ಜತೆ ಮಾತನಾಡಿ, ಜೆಡಿಎಸ್‌ನ ಯಾವೊಬ್ಬ ಶಾಸಕರು ಮುಖ್ಯಮಂತ್ರಿ ಜತೆ ಸಂಪರ್ಕದಲ್ಲಿಲ್ಲ. ಅವರ ಬಳಿ ಯಾವ ಕೆಲಸವನ್ನು ಮಾಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.ರಾಜ್ಯದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿದ ಸಲಹೆಗಳನ್ನು ಅವರು ಪರಿಗಣಿಸಿಲ್ಲ. ಜನರ ಹಿತದೃಷ್ಟಿಯಿಂದ ನಾನು ಬಹಿರಂಗ ಸಮಾರಂಭಗಳಲ್ಲಿ ಕೆಲ ಸಲಹೆ ನೀಡಿದ್ದೇನೆ ಹೊರತು; ಸದಾನಂದಗೌಡರ ಬಳಿ ಜೆಡಿಎಸ್‌ನ ಯಾರೊಬ್ಬರೂ ವೈಯಕ್ತಿಕ ಸಂಪರ್ಕ ಇಟ್ಟುಕೊಂಡಿಲ್ಲ ಎಂದರು.ಬಿಜೆಪಿ ಬಣಗಳ ಕಿತ್ತಾಟದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೆ ಮಾತ್ರ ರಾಜ್ಯ ಸರ್ಕಾರ ಅನಿಶ್ಚಿತತೆಯಿಂದ ಪಾರಾಗಬಹುದು. ಒಳಜಗಳದಿಂದ ಬಿಜೆಪಿ ಇಬ್ಬಾಗವಾದರೂ ಜೆಡಿಎಸ್ ಬೆಂಬಲ ನೀಡುವುದಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಚುನಾವಣೆ ಎದುರಿಸುವುದೇ ಕ್ಷೇಮ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನತೆ ಯೋಗಕ್ಷೇಮ ಮರೆತು ಲೂಟಿ ಹೊಡೆಯುವುದನ್ನೇ ಕಾಯಕ ಮಾಡಿಕೊಂಡಿದೆ. ಬರದಿಂದ ಜನರು ನಲುಗಿದ್ದಾರೆ. ಬರಪೀಡಿತ ತಾಲ್ಲೂಕಗಳ ಪರಿಸ್ಥಿತಿ ಗಂಭೀರವಾಗಿದೆ. ಗ್ರಾಮೀಣ ಬದುಕು ದುಸ್ತರವಾಗಿದೆ. ಕುಡಿಯುವ ನೀರು, ಮೇವಿಗೆ ಹಾಹಾಕಾರವಿದೆ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಅಧಿಕಾರ ಬಿಟ್ಟು ಕೆಳಗಿಳಿಯಲಿ ಎಂದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆನಂದರವಿ, ಶಾಸಕರಾದ ಸುರೇಶ್ ಬಾಬು, ಎಂ.ಟಿ.ಕೃಷ್ಣಪ್ಪ, ಡಾ.ಹುಲಿನಾಯ್ಕರ್, ಮಾಜಿ ಶಾಸಕರಾದ ಎಚ್.ನಿಂಗಪ್ಪ, ಮುದ್ದುಹನುಮೇಗೌಡ, ಮುಖಂಡ ಜಕ್ಕನಹಳ್ಳಿ ಲಿಂಗರಾಜು, ಪಕ್ಷದ ಅಭ್ಯರ್ಥಿ ಗುರುಮೂರ್ತಿ ಮತ್ತಿತರರು ಇದ್ದರು.ಬಿರುಸಿನ ಪ್ರಚಾರ: ತಾಲ್ಲೂಕಿನ ಸುಕ್ಷೇತ್ರ ರಂಗಾಪುರ ಮಠಕ್ಕೆ ಮೊದಲು ಭೇಟಿ ನೀಡಿದ ಕುಮಾರಸ್ವಾಮಿ ಗುರುಪರದೇಶಿಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ನಂತರ ಪ್ರಚಾರ ಆರಂಭಿಸಿ ಕಲ್ಲಯ್ಯನಪಾಳ್ಯದ ರಸ್ತೆಗಳಲ್ಲಿ ಸಂಚರಿಸಿ ಮತ ಯಾಚಿಸಿದರು.ಚಿಕ್ಕರಂಗಾಪುರ, ಆಲದಹಳ್ಳಿ, ಕುರುಬರಹಳ್ಳಿ, ಸೂಗೂರು, ಮತಿಘಟ್ಟ ಗ್ರಾಮಗಳಿಗೆ ಭೇಟಿ ನೀಡಿ ದೇಗುಲಗಳ ಬಳಿ ಪ್ರಚಾರ ಕೈಗೊಂಡರು. ಹುಣಸೇಘಟ್ಟದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು. ನಂತರ ಗಂಗನಘಟ್ಟ, ದಸರೀಘಟ್ಟ ಮತ್ತಿತರರ ಕಡೆ ಸಂಚರಿಸಿದರು.ಜೆಡಿಎಸ್ ಸೇರ್ಪಡೆ

ಎಚ್.ಡಿ.ಕುಮಾರಸ್ವಾಮಿ ರಂಗಾಪುರಕ್ಕೆ ಆಗಮಿಸುವ ಮಾರ್ಗದಲ್ಲಿ ಕಿಬ್ಬನಹಳ್ಳಿಯಲ್ಲಿ ಅವರನ್ನು ಕಾರ್ಯಕರ್ತರು, ಸ್ಥಳೀಯ ಮುಖಂಡರು ಸ್ವಾಗತ ಕೋರಿದರು. ನಂತರ ಕಿಬ್ಬನಹಳ್ಳಿ ಐಬಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್.ದಿನೇಶ್‌ಕುಮಾರ್, ಟಿ.ಜಿ.ಲಿಂಗರಾಜು ಜೆಡಿಎಸ್‌ಗೆ ಸೇರ್ಪಡೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry