ಸಿಎಂ ಸ್ಥಾನಕ್ಕೆ ಮಗನ ಬಿಟ್ಟು ಹಿರಿಯರ ಹೆಸರು ಘೋಷಿಸಿ

7

ಸಿಎಂ ಸ್ಥಾನಕ್ಕೆ ಮಗನ ಬಿಟ್ಟು ಹಿರಿಯರ ಹೆಸರು ಘೋಷಿಸಿ

Published:
Updated:

ದಾವಣಗೆರೆ: ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಅವರಿಗಿಂತ ಸಾಕಷ್ಟು ಹಿರಿಯ ನಾಯಕರು ಇದ್ದು, ಅವರಲ್ಲಿ ಒಬ್ಬರನ್ನು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಎಂದು ಘೋಷಿಸಿ, ಚುನಾವಣೆ ಎದುರಿಸಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಎಸೆದರು.   ಜಗಳೂರು ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಜನತಾದಳವನ್ನು ಮತ್ತೆ ಅಧಿಕಾರಕ್ಕೆ ತರುವುದೇ ತಮ್ಮ ಗುರಿ ಎಂದು ದೇವೇಗೌಡ ಅವರು ಹೋದ ಕಡೆಯಲ್ಲೆಲ್ಲ ಕಣ್ಣೀರು ಸುರಿಸುತ್ತಾರೆ. ಆದರೆ, ವಾಸ್ತವವಾಗಿ ಅವರಿಗೆ ಬೇಕಿರುವುದು ತಮ್ಮ ಪುತ್ರನನ್ನು ಮುಖ್ಯಮಂತ್ರಿ ಮಾಡುವುದು. ರಾಜ್ಯದ ಅಧಿಕಾರ ತಮ್ಮ ಕುಟುಂಬದ ಅಧೀನದಲ್ಲಿ ಇರುವಂತೆ ನೋಡಿಕೊಳ್ಳುವುದು ಎಂದು ಛೇಡಿಸಿದರು.ಜೆಡಿಎಸ್‌ನಲ್ಲಿ ಪಿ.ಜಿ.ಆರ್. ಸಿಂಧ್ಯಾ, ಬಸವರಾಜ ಹೊರಟ್ಟಿ, ಎಂ.ಸಿ. ನಾಣಯ್ಯ ಮತ್ತಿತರ ಹಿರಿಯ ಮುಖಂಡರು ಇದ್ದಾರೆ. ಅವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಆದರೆ, ಹಾಗೆ ಎಂದಿಗೂ ಅವರು ಹೇಳುವುದಿಲ್ಲ. 30 ವರ್ಷ ಅವರೊಂದಿಗೆ ದುಡಿದಿದ್ದೇನೆ. ಪಕ್ಷ ಕಟ್ಟಿದ್ದೇನೆ. ನನ್ನಂಥವನಿಗೆ ಟೋಪಿ ಹಾಕಿದರು. ಶಾಮನೂರು ಹಾಗೂ ಅವರ ಪುತ್ರ ಮಲ್ಲಿಕಾರ್ಜುನ್‌ಗೆ ಈಗ ಟೋಪಿ ಹಾಕಲು ಹೊರಟಿದ್ದಾರೆ.ಅವರ ಆಮಿಷಕ್ಕೆ ಬಲಿಯಾಗಬೇಡಿ ಎಂದು ಎಚ್ಚರಿಸಿದರು. ಕುಮಾರಸ್ವಾಮಿ ಅವರು ಒಳ್ಳೆಯ ಮುಖ್ಯಮಂತ್ರಿ ಆಗಿದ್ದರೆ ಅವರ ಹೆಸರು ಲೋಕಾಯುಕ್ತದಲ್ಲಿ ಹೇಗೆ ಸೇರುತ್ತಿತ್ತು? ಅವರ ಪತ್ನಿ ಏಕೆ ಜಾಮೀನು ಪಡೆದರು? ಜಂತಕಲ್ ಮೈನಿಂಗ್ಸ್‌ನಲ್ಲಿ ಏನು ಮಾಡಿದ್ದಾರೆ ಎಲ್ಲ ಶೀಘ್ರ ಬಯಲಿಗೆ ಬರಲಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry