ಸಿಎಜಿ ತಪಾಸಣೆಯ ಬಿಸಿ: ಕಾಮಗಾರಿ ಜಾರಿಗೆ ಹಿಂದೇಟು

7

ಸಿಎಜಿ ತಪಾಸಣೆಯ ಬಿಸಿ: ಕಾಮಗಾರಿ ಜಾರಿಗೆ ಹಿಂದೇಟು

Published:
Updated:

ನವದೆಹಲಿ, (ಪಿಟಿಐ): ಕಾಮನ್ ವೆಲ್ತ್  ಕ್ರೀಡಾಕೂಟದ ಯೋಜನೆಗಳನ್ನು ಜಾರಿ ಮಾಡುವಾಗ ನಡೆದ ಭ್ರಷ್ಟಾಚಾರ ಮತ್ತು ಹಗರಣಗಳಿಂದ ಹೈರಾಣವಾಗಿರುವ ದೆಹಲಿ ಸರ್ಕಾರ, ಯೋಜನಾ ವೆಚ್ಚದ ಬಾಬ್ತಿನಲ್ಲಿ ದೊರಕಿರುವ 13,600 ಕೋಟಿ ರೂಪಾಯಿಯನ್ನು ವ್ಯಯ ಮಾಡಿ ಯೋಜನೆಗಳನ್ನು ಜಾರಿ ಮಾಡಲು ಮೀನಮೇಷ ಎಣಿಸುತ್ತಿದೆ.ಪ್ರಸಕ್ತ ಆರ್ಥಿಕ ವರ್ಷದ ಮೊದಲ ಅರ್ಧ ಭಾಗದಲ್ಲಿ ಕೇವಲ 1,800 ಕೋಟಿ ರೂಪಾಯಿಯನ್ನು ವ್ಯಯ ಮಾಡಲಾಗಿದ್ದು, ಒಟ್ಟು ಯೋಜನಾ ವೆಚ್ಚದ ಶೇಕಡಾ 13ರಷ್ಟನ್ನು ಮಾತ್ರ ಬಳಸಲಾಗಿದೆ. ಉಳಿದ ಆರು ತಿಂಗಳಲ್ಲಿ 11,800 ಕೋಟಿ ರೂಪಾಯಿಯನ್ನು ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಬಳಸಬೇಕಾಗಿದೆ.ಕಾಲಕಾಲಕ್ಕೆ ಸೂಚನೆಗಳನ್ನು ನೀಡಲಾಗಿದ್ದರೂ ಕೆಲವು ಇಲಾಖೆಗಳು ಹಣ ಬಳಸಿಕೊಂಡು ಯೋಜನೆಗಳನ್ನು ಜಾರಿ ಮಾಡಲು ಮುಂದಾಗುತ್ತಿಲ್ಲ. ಇದಕ್ಕೆ ಸಿಎಜಿ ತಪಾಸಣೆಯ ಬಿಸಿಯೇ ಕಾರಣ ಎಂದು ಹೇಳಲಾಗುತ್ತಿದೆ.ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣಗಳ ತನಿಖೆ ನಡೆಯುತ್ತಿರುವುದರಿಂದ ಯೋಜನಾ ವೆಚ್ಚಗಳಡಿ ದೊರಕಿರುವ ಹಣವನ್ನು ಬಳಸಿಕೊಂಡು ಕಾಮಗಾರಿಗಳನ್ನು ಆರಂಭಿಸುವ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.ಅಧಿಕಾರಿಗಳ ವಿಳಂಬ ಧೋರಣೆಯಿಂದ ಬೇಸತ್ತಿರುವ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ತಮ್ಮ ಸಚಿವ ಸಹೋದ್ಯೋಗಿಗಳಿಗೆ ಕಳೆದ ವಾರ ಪತ್ರ ಬರೆದು ಶೀಘ್ರದಲ್ಲಿ ಯೋಜನೆಗಳನ್ನು ಜಾರಿ ಮಾಡುವಂತೆ ಸೂಚಿಸಿದ್ದಾರೆ.ಮುಖ್ಯ ಕಾರ್ಯದರ್ಶಿ ಪಿ.ಕೆ.ತ್ರಿಪಾಠಿ ಅವರು ಸಹ ಕಳೆದ ತಿಂಗಳು ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸುವಂತೆ ಆದೇಶಿಸಿದ್ದಾರೆ.`ಕಾಮನ್‌ವೆಲ್ತ್ ಕ್ರೀಡಾಕೂಟದ ಯೋಜನೆಗಳನ್ನು ಜಾರಿ ಮಾಡುವಾಗ ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಂಡ ನಿರ್ಧಾರಗಳಿಗಾಗಿ ಈಗ ತನಿಖೆ ಎದುರಿಸಬೇಕಾಗಿದೆ. ಇದರಿಂದ ಎಂಜಿನಿಯರುಗಳ ವಿಶ್ವಾಸ ಕುಂದಿದೆ ಮತ್ತು ಯಾವುದೇ ವ್ಯವಹಾರದಲ್ಲೂ ಸಚಿವರನ್ನು ಹೊಣೆಗಾರರನ್ನಾಗಿ ಮಾಡದಿರುವುದು ಅಧಿಕಾರಿಗಳಲ್ಲಿ ಅಸಮಾಧಾನ ಮೂಡಿಸಿದೆ~ ಎಂದು ಕಾಮಗಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry