ಸಿಎಜಿ ವರದಿ ಟೀಕಿಸಿದ ಸಿಬಲ್‌ಗೆ ತರಾಟೆ

7

ಸಿಎಜಿ ವರದಿ ಟೀಕಿಸಿದ ಸಿಬಲ್‌ಗೆ ತರಾಟೆ

Published:
Updated:

ನವದೆಹಲಿ (ಪಿಟಿಐ): 2 ಜಿ ಹಗರಣದ ನಷ್ಟ ಸಂಬಂಧ ಸಿಎಜಿ ನೀಡಿರುವ ವರದಿ ಬಗ್ಗೆ ಲಘು ಹೇಳಿಕೆಗಳನ್ನು ನೀಡುತ್ತಿರುವ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರನ್ನು ಸುಪ್ರೀಂಕೋರ್ಟ್ ಶುಕ್ರವಾರ ತರಾಟೆಗೆ  ತೆಗೆದುಕೊಂಡಿತು.ಇದೇ ವೇಳೆ, ಈ ಹಗರಣ ಕುರಿತು ಮಾಧ್ಯಮಗಳ ವರದಿ ಅಥವಾ ಯಾರದ್ದೇ ಹೇಳಿಕೆಯ ಪ್ರಭಾವಕ್ಕೆ ಒಳಗಾಗದೆ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತು. ಯಾವುದೇ ಪ್ರಭಾವಕ್ಕೆ ಒಳಗಾಗದೆ ತನಿಖೆ ನಡೆಸಲು ಸಿಬಿಐಗೆ ನಿರ್ದೇಶಿಸಬೇಕೆಂದು ಕೋರಿ ಸುಬ್ರಮಣಿಯನ್ ಸ್ವಾಮಿ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ನ್ಯಾಯಪೀಠ ‘ಸಿಎಜಿ ವರದಿ ಕುರಿತು ಸಿಬಲ್ ಅವರ ಹೇಳಿಕೆಗಳು ದುರದೃಷ್ಟಕರ. ಸಚಿವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ಹೇಳಿತು.ನಿಯಮ ಉಲ್ಲಂಘಿಸಿ 2 ಜಿ ತರಂಗಾಂತರಗಳನ್ನು ಹಂಚಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ. ಈ ಬಗ್ಗೆ ಸಾರ್ವಜನಿಕವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದ ಸಿಬಲ್, ‘ಸಿಎಜಿ ಆಧಾರರಹಿತವಾಗಿ ನಷ್ಟ ಪ್ರಮಾಣ ಅಂದಾಜಿಸುವ ಮೂಲಕ ಭಾರಿ ತಪ್ಪೆಸಗಿದೆ’ ಎಂದಿದ್ದರು.ಕಂಪೆನಿಗಳಿಗೆ ನೋಟಿಸ್: ಇದೇ ವೇಳೆ ನಿಗದಿತ ಗಡುವಿನೊಳಗೆ ಸೇವೆ ಆರಂಭಿಸದಿದ್ದರೂ ಪರವಾನಗಿ ಪಡೆಯುವಲ್ಲಿ ಸಫಲವಾಗಿದ್ದ  11 ದೂರಸಂಪರ್ಕ ನಿರ್ವಾಹಕ ಕಂಪೆನಿಗಳಿಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿತು.ಯೂನಿನಾರ್. ಲೂಪ್ ಟೆಲಿಕಾಮ್, ಎಟಿಸ್ಯಾಲಟ್, ವಿಡಿಯೋಕಾನ್, ಎಸ್-ಟೆಲ್, ಅಲಯನ್ಸ್ ಇನ್‌ಫ್ರಾ, ಐಡಿಯಾ ಸೆಲ್ಯುಲಾರ್, ಟಾಟಾ ಟೆಲಿಸರ್ವೀಸಸ್, ಸಿಸ್ಟರ್‌ಮಾ ಶ್ಯಾಂ ಟೆಲಿಸರ್ವೀಸಸ್, ಡಿಷ್‌ನೆಟ್ ವೈರ್‌ಲೆಸ್ ಮತ್ತು ವೊಡಾಫೋನ್- ಎಸ್ಸಾರ್ ಈ ಕಂಪೆನಿಗಳಲ್ಲಿ ಸೇರಿವೆ.ಕಂಪೆನಿಗಳು ನಿಗದಿತ ದಂಡ ಕಟ್ಟಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ ಎಂದ ನ್ಯಾಯಪೀಠ, ದಂಡ ಕಟ್ಟಿಸಿಕೊಳ್ಳಲು ದೂರಸಂಪರ್ಕ ಇಲಾಖೆಗೆ ಅನುಮತಿ ನೀಡದಿರಲು ಕೋರಿ ಅರ್ಜಿ ಸಲ್ಲಿಸುವಂತೆ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೂಚಿಸಿತು.ತಾವು ನೀಡಿದ್ದ ಹೇಳಿಕೆಯಂತೆ ಸೇವೆ ಕಲ್ಪಿಸಿದ ದೂರಸಂಪರ್ಕ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದುದಕ್ಕೆ ಕಾರಣವೇನೆಂಬುದನ್ನು ತಿಳಿಸುವಂತೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಕೂಡ ಕೋರ್ಟ್ ನಿರ್ದೇಶಿಸಿದೆ.‘ಗೋಪ್ಯ ಮಾಹಿತಿ ಬಹಿರಂಗದ ಬಗ್ಗೆ ಪ್ರಸ್ತಾಪಿಸುವ ಮೂಲಕ ಸಚಿವ ಸಿಬಲ್ ಅವರು ಸಿಎಜಿಗೇ ಬೆದರಿಕೆ ಹಾಕುತ್ತಿದ್ದಾರೆ. ಆ ಮೂಲಕ ಸರ್ಕಾರದ ಲೆಕ್ಕಾಚಾರದ ಮೇಲೆ ನಿಗಾ ಇಡಲು ಸಂವಿಧಾನಬದ್ಧ ಅಧಿಕಾರ ಹೊಂದಿರುವ ಸಂಸ್ಥೆಯ ಸ್ಥೈರ್ಯವನ್ನೇ ಸಚಿವ ಸಿಬಲ್ ಉಡುಗಿಸುತ್ತಿದ್ದಾರೆ’ ಎಂದೂ ನ್ಯಾಯಪೀಠ ಹೇಳಿತು.ಸರ್ಕಾರ ಹೊಸ ದೂರಸಂಪರ್ಕ ನೀತಿ ಜಾರಿಗೊಳಿಸಲು ಹಾಗೂ ದೂರಸಂಪರ್ಕ ನಿರ್ವಾಹಕ ಕಂಪೆನಿಗಳಿಂದ 73 ಕೋಟಿ ರೂಪಾಯಿ ದಂಡ ಶುಲ್ಕ ಕಟ್ಟಿಸಿಕೊಳ್ಳಲು ಮುಂದಾಗಿರುವುದನ್ನು ತಡೆಯಬೇಕು ಎಂದೂ ಸುಬ್ರಮಣಿಯನ್ ಸ್ವಾಮಿ ಅರ್ಜಿಯಲ್ಲಿ ಕೋರಿದ್ದಾರೆ.ಸಿಬಲ್ ಸಮರ್ಥನೆ: ಆದರೆ, ಇದರಿಂದ ವಿಚಲಿತರಾಗದ ಕಪಿಲ್ ಸಿಬಲ್ ‘ನಾನು ಯಾವುದೇ ತಪ್ಪು ಎಸಗಿಲ್ಲ. ಒಬ್ಬ ಸಚಿವನಾಗಿ, ವಕೀಲನಾಗಿ ಹಾಗೂ ರಾಷ್ಟ್ರದ ಪ್ರಜೆಯಾಗಿ ನನ್ನ ಕರ್ತವ್ಯ ಹಾಗೂ ಜವಾಬ್ದಾರಿಗಳೇನು ಎಂಬುದು ನನಗೆ ಗೊತ್ತು’ ಎಂದು ಸಮರ್ಥಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry