ಬುಧವಾರ, ಜನವರಿ 29, 2020
26 °C

ಸಿಎಡಿ ಕುಸಿತ: ಆರೋಗ್ಯಕರ ಲಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಗಮನಾರ್ಹವಾಗಿ ಕಡಿಮೆ­ಯಾಗಿ­­ರುವುದು ಸದ್ಯದ ನಿರಾಶಾ­ದಾ­ಯಕ ಆರ್ಥಿಕ ಪರಿಸ್ಥಿತಿಯಲ್ಲಿ ಸಕಾ­ರಾತ್ಮಕ ಬೆಳವಣಿಗೆ­ಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಮೊದಲ ತ್ರೈಮಾ­ಸಿಕದಲ್ಲಿ 2,100 ಕೋಟಿ ಡಾಲರ್‌­ಗಳಷ್ಟಿದ್ದ (ರೂ.1,30,­200 ಕೋಟಿ) ಚಾಲ್ತಿ ಖಾತೆ ಕೊರತೆಯು ಈಗ 520 ಕೋಟಿ ಡಾಲರ್‌­ಗಳಿಗೆ (ರೂ.32,240 ಕೋಟಿ­ಗೆ) ತಲುಪಿರುವುದು ಆಶಾ­ದಾಯಕ ಬೆಳವಣಿಗೆಯಾಗಿದೆ.ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4.9­ರಿಂದ ­ಶೇ 1.2ಕ್ಕೆ ಇಳಿದಿರುವುದರ ದ್ಯೋತಕವೂ ಆಗಿದೆ. ವಿದೇಶಿ ವಿನಿ­ಮಯದ ಒಳಹರಿವು ಮತ್ತು ಹೊರ ಹರಿವಿನ ಅಂತರ ಇದಾಗಿದೆ. ಈ ಗಮನಾರ್ಹ ಎನ್ನಬಹುದಾದ ಸುಧಾ­ರಣೆಗೆ ವ್ಯಾಪಾರ ಕೊರತೆಯಲ್ಲಿನ ತೀವ್ರ ಕುಸಿತವೂ ನೆರವಾಗಿದೆ. ಡಾಲರ್ ಎದುರು ರೂಪಾಯಿ ಅಪಮೌಲ್ಯ­ಗೊಂಡ ನಂತರ ರಫ್ತು ವಹಿವಾಟು ಸಾಕಷ್ಟು ಏರಿಕೆ ಕಂಡಿದೆ. ಜತೆಗೆ ಆಮದು ವಹಿವಾಟೂ ಕಡಿಮೆಯಾಗಿದೆ. ಪಾವತಿ ಸಮತೋಲನ ಪರಿಸ್ಥಿತಿಯಲ್ಲಿಯೂ ಸುಧಾರಣೆ ಕಂಡು ಬಂದಿದೆ.

ಆರ್‌ಬಿಐ ಕೈಗೊಂಡ ಕೆಲ ಕ್ರಮಗಳು ಕೂಡ ಮೂರು ತಿಂಗಳ ಹಿಂದಿನ ದಿಗಿಲು ಮೂಡಿಸುವಂತಹ ಮತ್ತು ಅನಿಶ್ಚಿತ ಪರಿಸ್ಥಿತಿ­ಯಿಂದ ದೇಶಿ ಅರ್ಥ ವ್ಯವಸ್ಥೆಯನ್ನು ಪಾರು ಮಾಡುವಲ್ಲಿ ಸಫಲ­ವಾಗಿವೆ. ಅರ್ಥ ವ್ಯವಸ್ಥೆಯ ಎಲ್ಲ ವಲಯಗಳಲ್ಲಿ ಸುಧಾರಣೆ ಕಾಣುತ್ತಿ­ರು­ವುದು ಚೇತ­ರಿಕೆಯ ಲಕ್ಷಣವಾಗಿದೆ ಎಂದು ಹಣ­ಕಾಸು ಸಚಿವಾಲಯವೂ ಭರವಸೆಯ ಮಾತನ್ನಾಡಿದೆ. ಆದರೆ, ಇಂತಹ ತೀರ್ಮಾನಕ್ಕೆ ಬರುವುದು ಸದ್ಯದ ಸಂದರ್ಭದಲ್ಲಿ ಅವಸರದ ನಿಲುವಾಗು­ತ್ತದೆ.ವಾಸ್ತವದಲ್ಲಿ ಇದೊಂದು ನಮ್ಮಷ್ಟಕ್ಕೆ ನಾವೇ ಸಂತುಷ್ಟಪಡು­ವಂತಹ ಪರಿಸ್ಥಿತಿ­ಯಾಗಿದ್ದು, ಕಳವಳಕಾರಿ ಸಂಗತಿಗಳು ಸಾಕಷ್ಟಿವೆ. ವಿದೇಶಿ ವಿನಿಮಯ ಮೀಸಲು ಸಂಗ್ರಹ ಈಗಲೂ ಕೆಳಮಟ್ಟದಲ್ಲಿಯೇ ಇದೆ. ಸರಕು - ಸೇವೆಗಳ ಆಮದು ಪ್ರಮಾಣವು ಹೆಚ್ಚುತ್ತಿರುವುದು ವ್ಯಾಪಾರ ಕೊರತೆ ಇನ್ನಷ್ಟು ಹೆಚ್ಚಲು ಕಾರಣವಾಗ­ಬಹುದು.ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶಿ ಹಣಕಾಸು ಮಾರುಕಟ್ಟೆಯಿಂದ ಹಣ ವಾಪಸ್ ಪಡೆಯುತ್ತಿರುವ ಪ್ರವೃತ್ತಿಯಲ್ಲಿನ ಏರುಪೇರು ಮುಂದು­ವರಿದಿದೆ. ದೇಶದ ಒಳಗೆ ವಿದೇಶಿ ಬಂಡವಾಳವು ದೀರ್ಘಕಾಲದವರೆಗೆ ನಿರಂತರವಾಗಿ ಹರಿದು ಬರುವುದನ್ನು ಉತ್ತೇಜಿಸಲು ಸೂಕ್ತ ನೀತಿ ನಿಯಮ ಮತ್ತು ಪ್ರೋತ್ಸಾಹ ನೀಡುವ ಇನ್ನಷ್ಟು ಕ್ರಮ­ಗಳನ್ನು ಸರ್ಕಾರ ಕೈಗೊಳ್ಳ­ಬೇಕಾ­ಗಿದೆ. ಚಿನ್ನದ ಆಮದು ಪ್ರಮಾಣವು ಆತಂಕಕಾರಿ ಎನ್ನುವ ಪ್ರಮಾಣದಲ್ಲಿ (ಶೇ 25ರಷ್ಟು) ಕಡಿಮೆ­ಯಾಗಿರುವುದು ಈಗ ಇನ್ನೊಂದು ಕಳವಳಕಾರಿ ವಿದ್ಯ­ಮಾನ­­ವಾಗಿದೆ.ಸಿಎಡಿ ಕಡಿಮೆ­ಯಾಗಲು ಇದೂ ಒಂದು ಪ್ರಮುಖ ಕಾರಣವಾಗಿದೆ.  ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಕೈಗೊಂಡ ಕಠಿಣ ಕ್ರಮ­ಗಳು ಚಿನ್ನದ ಆಮದು ಪ್ರಮಾಣ ನಿರ್ಬಂಧಿಸಲು ನೆರವಾಗಿವೆ. ಆಮದು ಮೇಲೆ ಮಿತಿ ವಿಧಿಸಿದ್ದರೂ ದೇಶದಲ್ಲಿ ಚಿನ್ನದ ಬೇಡಿಕೆಗೇನೂ ಕೊರತೆ ಉಂಟಾ­ಗಿಲ್ಲ. ಬದಲಿಗೆ ಚಿನ್ನದ ಕಳ್ಳ ಸಾಗಣೆ ಮಾತ್ರ ಗಮನಾರ್ಹವಾಗಿ ಹೆಚ್ಚಾಗಿದೆ.ಕಾನೂನು­ಬದ್ಧವಾಗಿ ಗರಿಷ್ಠ ಪ್ರಮಾಣದ ಚಿನ್ನ ಆಮದು ಮಾಡಿಕೊಳ್ಳುವುದರಿಂದ ಆಗುವ ಹಾನಿಗಿಂತ ಅಕ್ರಮವಾಗಿ ಹರಿದು ಬರುವ ಚಿನ್ನ ಹೆಚ್ಚು ಅಪಾಯ­ಕಾರಿ. ಈ ಪರಿಸ್ಥಿತಿಯನ್ನೂ ಆರ್‌ಬಿಐ ಸೂಕ್ತವಾಗಿ ನಿಭಾಯಿಸಲು ಮುಂದಾದರೆ ಮಾತ್ರ, ಸಿಎಡಿ ಕಡಿಮೆ­ಯಾಗಿರುವುದಕ್ಕೆ ಸಮಾಧಾನ­ದ ನಿಟ್ಟು­ಸಿರು ಬಿಡಬಹುದು.

ಪ್ರತಿಕ್ರಿಯಿಸಿ (+)