ಸಿಎಫ್‌ಟಿಆರ್‌ಐ ನಿರ್ದೇಶಕರ ಮುಖಕ್ಕೆ ಮಸಿ

7
ಕನ್ನಡಪರ ಚಟುವಟಿಕೆಗೆ ಅಡ್ಡಿ: ಕರವೇ ಆರೋಪ

ಸಿಎಫ್‌ಟಿಆರ್‌ಐ ನಿರ್ದೇಶಕರ ಮುಖಕ್ಕೆ ಮಸಿ

Published:
Updated:

ಮೈಸೂರು: ಕನ್ನಡಪರ ಚಟುವಟಿಕೆಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಆಹಾರ ಮತ್ತು ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ನಿರ್ದೇಶಕ ಡಾ.­ರಾಮ ರಾಜಶೇಖರನ್‌ ಅವರ ಮುಖಕ್ಕೆ ಮಸಿ ಎರಚಿ ಅವಮಾನಿಸಿದ ಘಟನೆ ಗುರುವಾರ ಇಲ್ಲಿ ನಡೆಯಿತು.ಮಾನಸಗಂಗೋತ್ರಿಯ ರಾಣಿಬಹ­ದ್ದೂರ್‌ ಸಭಾಂಗಣದಲ್ಲಿ ‘ಜೀವ ರಸಾ­ಯನಶಾಸ್ತ್ರ– ಔಷಧ ಸಂಶೋ­ಧನೆ’ ಕುರಿತು ಮೈಸೂರು ವಿಶ್ವವಿದ್ಯಾ­ಲಯ ಆಯೋಜಿಸಿದ್ದ ಅಂತರರಾಷ್ಟ್ರೀಯ ಕಮ್ಮಟದ ಉದ್ಘಾಟನೆಗೆ ಆಗಮಿಸಿದ್ದ ಆಹಾರ ವಿಜ್ಞಾನಿಯ ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ­ಗೌಡ ಬಣ) ಕಾರ್ಯಕರ್ತರು, ಮುಖ ಹಾಗೂ ದೇಹಕ್ಕೆ ಕಪ್ಪು ಬಣ್ಣ ಎರಚಿದರು. ಘಟನೆಗೆ ಸಂಬಂಧಿಸಿದಂತೆ ಕರವೇ ಕಾರ್ಯಕರ್ತರಾದ ಸುನೀಲ್‌, ನಂದೀಶ್‌ ಅವರನ್ನು ಬಂಧಿಸಲಾಗಿದ್ದು, 20 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.ಅಂತರರಾಷ್ಟ್ರೀಯ ಕಮ್ಮಟದ ಉದ್ಘಾಟನಾ ಸಮಾರಂಭ ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿತ್ತು. ಹತ್ತು ನಿಮಿಷ ಮುಂಚಿತವಾಗಿ ಕಾರ್ಯ­ಕ್ರಮಕ್ಕೆ ಆಗಮಿಸುತ್ತಿದ್ದ ಗಣ್ಯರನ್ನು ಸ್ವಾಗತಿ­ಸಲು ಕಮ್ಮಟದ ಆಯೋಜನಾ ಸಮಿತಿಯ ಸಂಚಾಲಕ ಪ್ರೊ.ಬಿ.ಎಸ್‌. ವಿಶ್ವನಾಥ್‌, ಸೂಕ್ಷ್ಮಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ರವಿಶಂಕರ್‌ ಸಭಾಂಗಣದ ಮುಂಭಾಗದಲ್ಲಿ ನಿಂತಿದ್ದರು. ಸಿಎಫ್‌ಟಿಆರ್‌ಐ ಕಾರನ್ನು ಹಿಂಬಾಲಿಸಿ ಬಂದ ಕರ್ನಾಟಕ ರಕ್ಷಣಾ ವೇದಿಕೆಯ 25ಕ್ಕೂ ಹೆಚ್ಚು ಕಾರ್ಯ­ಕರ್ತರು ರಾಜಶೇಖರನ್‌ ವಿರುದ್ಧ ಘೋಷಣೆ ಕೂಗತೊಡಗಿ­ದರು. ಕಾರನ್ನು ಸುತ್ತುವರಿದ ಗುಂಪು ಬಾಟಲಿ­ಯಲ್ಲಿ ತಂದಿದ್ದ ಮಸಿಯನ್ನು ವಿಜ್ಞಾನಿಯ ಮೇಲೆ ಎರಚಿತು. ಕಾರಿನ ಸಮೀಪ ಧಾವಿಸಿದ ಮಹಿಳಾ ಕಾರ್ಯ­ಕರ್ತರು ರಾಜಶೇಖರನ್‌ ಅವರ ಕೋಟನ್ನು ಹಿಡಿದು ಎಳೆದಾಡಿದರು.ಘಟನೆಯಿಂದ ಗಲಿಬಿಲಿಗೊಂಡ ರಾಜಶೇಖರನ್‌ ತಕ್ಷಣ ಕಾರಿನ ಬಾಗಿಲು ಹಾಕಿಕೊಂಡರು. ಕರವೇ ಕಾರ್ಯ­ಕರ್ತರ ದುಂಡಾವರ್ತನೆ ತಡೆ­ಯಲು ಪ್ರಯತ್ನಿಸಿದ ಪ್ರೊ.ಬಿ.ಎಸ್‌. ವಿಶ್ವನಾಥ್‌ ಅವರ ಮುಖಕ್ಕೂ ಮಸಿ ಬಿದ್ದಿತು. ‘ಕನ್ನಡ ವಿರೋಧಿಗಳಿಗೆ ಧಿಕ್ಕಾರ’ ಎಂದು ಘೋಷಣೆ ಕೂಗುತ್ತಾ ಕಾರಿನ ಗಾಜನ್ನು ಪುಡಿ ಮಾಡಲು ಯತ್ನಿ­ಸಿದರು. ಇದಕ್ಕೆ ವಿರೋಧ ವ್ಯಕ್ತಪ­ಡಿಸಿದ ಕಾರಿನ ಚಾಲಕನಿಗೂ ಬೆದರಿಕೆ ಹಾಕ­ಲಾಯಿತು. ಹೀಗಾಗಿ, ರಾಜ­ಶೇಖರನ್‌ ಕಾರ್ಯಕ್ರಮದಲ್ಲಿ ಭಾಗ­ವಹಿಸದೇ ಕಾರಿನಲ್ಲೇ ಹಿಂತಿರುಗಿದರು. ಸ್ಥಳದಲ್ಲಿದ್ದ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಅಮೆರಿಕ, ರಷ್ಯಾ, ಇಂಗ್ಲೆಂಡ್‌, ಜಪಾನ್‌ನ 16 ವಿದೇಶಿ­ಗರು ಸೇರಿದಂತೆ ದೇಶದ ವಿವಿಧ ಭಾಗ­ಗ­ಳಿಂದ ಬಂದಿದ್ದ ಅತಿಥಿಗಳು ಅನಿ­ರೀಕ್ಷಿತ ಘಟನೆಯಿಂದ ಆತಂಕ­ಗೊಂಡರು.ವರ್ಗಾವಣೆಗೆ ಒತ್ತಾಯ: ಮಾಧ್ಯಮ­­­ದೊಂದಿಗೆ ಮಾತ­ನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್‌ಕುಮಾರ್‌, ‘ಸಿಎಫ್‌­ಟಿಆರ್‌ಐ ನಿರ್ದೇಶಕರು ಕನ್ನಡ ವಿರೋಧಿ ನಿಲುವು ತಳೆದಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಲು ಕನ್ನಡ ಸಹೃದಯ ಬಳಗ ಹಮ್ಮಿಕೊಂಡಿದ್ದ ‘ಕನ್ನಡ ಹಬ್ಬ’ಕ್ಕೆ ಕ್ಯಾಂಪಸ್‌ನಲ್ಲಿ ಅವಕಾಶ ನೀಡಲಿಲ್ಲ. ಇದನ್ನು ಪ್ರತಿಭಟಿಸಿದ ಕನ್ನಡಿಗರನ್ನು ವರ್ಗಾವಣೆ ಮಾಡುವುದಾಗಿ ಬೆದರಿಸಿ­ದ್ದಾರೆ. ಹೀಗಾಗಿ, ನಿರ್ದೇಶಕರನ್ನು ಮೈಸೂ­ರಿ­ನಿಂದ ವರ್ಗಾವಣೆ ಮಾಡು­ವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಆಗ್ರಹಿಸಿದರು.‘ಮನಸ್ಸಿಗೆ ತೀವ್ರ ಘಾಸಿಯಾಗಿದೆ. ಕನ್ನಡ ಪರ ಚಟುವಟಿಕೆಗಳಿಗೆ ಅಡ್ಡಿ­ಪಡಿಸಲಾಗುತ್ತದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುತ್ತೋ­ಲೆ­ಯೊಂದನ್ನು ಹೊರಡಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂ­ಧಿಸಿದ ಕಾರ್ಯಕ್ರಮಗಳಿಗೆ ಮಾತ್ರ ಆವರಣದಲ್ಲಿ ಅವಕಾಶ ನೀಡಬೇಕು ಎಂಬ ನಿಯಮವಿದೆ. ಹೀಗಾಗಿ, ಇತರ ಚಟುವಟಿಕೆಗಳನ್ನು ಕ್ಯಾಂಪಸ್‌ನಿಂದ ಹೊರಗೆ ನಡೆಸುವಂತೆ ಸೂಚಿಸಲಾ­ಗಿತ್ತು’ ಎಂದು ಸಿಎಫ್‌ಟಿಆರ್‌ಐ ನಿರ್ದೇ­ಶಕ ಡಾ.ರಾಮ ರಾಜಶೇಖರನ್‌ ಸ್ಪಷ್ಟಪಡಿಸಿದರು.ಗುರುವಾರ ಮಧ್ಯಾಹ್ನ ಸಭೆ ಸೇರಿದ ಎಲ್ಲ ನೌಕರರು ಮತ್ತು ವಿದ್ಯಾರ್ಥಿಗಳು ಕೇಂದ್ರೀಯ ಆಹಾರ ಮತ್ತು ಸಂಶೋ­ಧನಾ ಸಂಸ್ಥೆ (ಸಿಎಫ್‌ಟಿ­ಆರ್‌­ಐ) ನಿರ್ದೇ­ಶಕ ಪ್ರೊ.ರಾಮ ರಾಜ­ಶೇಖ­ರನ್ ಅವರಿಗೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಮಸಿ ಬಳಿದ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry