ಮಂಗಳವಾರ, ಏಪ್ರಿಲ್ 20, 2021
30 °C

ಸಿಎಸ್‌ಟಿ ಪರಿಹಾರ ಬೇಡಿಕೆ ಪರಿಶೀಲನೆ: ಸದನಕ್ಕೆ ಹಣಕಾಸು ಸಚಿವರ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಕೇಂದ್ರ ಮಾರಾಟ ತೆರಿಗೆ (ಸಿಎಸ್‌ಟಿ) ಸಂಗ್ರಹದಲ್ಲಿನ ತಮ್ಮ ಪಾಲಿನಲ್ಲಿ ಕಡಿತವಾಗಿರುವುದರಿಂದ ಸಂಪನ್ಮೂಲ ಕೊರತೆಯಾಗಿದ್ದು, ಅದನ್ನು ತುಂಬಿಕೊಡುವಂತೆ ರಾಜ್ಯಗಳು ಮುಂದಿಟ್ಟಿರುವ ಬೇಡಿಕೆ  ಸದ್ಯ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ವಿಷಯವಾಗಿ ಲೋಕಸಭೆಗೆ ಹಣಕಾಸು ಖಾತೆ ರಾಜ್ಯ ಸಚಿವ ಎಸ್.ಎಸ್.ಪಳನಿ ಮಾಣಿಕ್ಯಂ ಅವರು ಬುಧವಾರ ಲಿಖಿತ ಉತ್ತರ ನೀಡಿದರು.

ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸಿಎಸ್‌ಟಿ, ಜಿಎಸ್‌ಟಿ (ಸರಕು ಮತ್ತು ಸೇವೆಗಳ ಕಾಯ್ದೆ), ತೆರಿಗೆ ವಂಚನೆ ಪ್ರಕರಣಗಳು, ವಿಮಾನ ಯಾನ ಸಂಸ್ಥೆಗಳಿಗೆ ಭಾರಿ ಪ್ರಮಾಣದಲ್ಲಿ ಬ್ಯಾಂಕ್‌ಗಳು ನೀಡಿರುವ ಸಾಲ ಸೇರಿದಂತೆ ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಪ್ರಸ್ತಾಪವಾದವು. ಕಪ್ಪು ಹಣ ಮತ್ತು ತೆರಿಗೆ ವಂಚಿಸುವವರ ವಿರುದ್ಧ ಕೈಗೊಳ್ಳಲಾಗುತ್ತಿರುವ ಕ್ರಮಗಳಿಗೆ, ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆ ಸಾಮಾನ್ಯ  ನಿಯಮ(ಜಿಎಎಆರ್) ಜಾರಿಯ  ವಿಳಂಬದಿಂದ ಯಾವುದೇ ಪ್ರತಿಕೂಲ ಪರಿಣಾಮ ಆಗುವುದಿಲ್ಲ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಸದನಕ್ಕೆ ಲಿಖಿತ ಉತ್ತರ ನೀಡಿದರು. 2012-13ರ ಮುಂಗಡಪತ್ರದಲ್ಲಿ ಪ್ರಸ್ತಾಪವಾಗಿರುವ `ಜಿಎಎಆರ್~ಗೆ ವಿದೇಶಿ ಹೂಡಿಕೆದಾರರಿಂದ ಋಣಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿಯಮ ಜಾರಿಯಾಗುವುದು 2013ರ ಏಪ್ರಿಲ್‌ಗೆ ಮುಂದೆ ಹೋಗಿದ್ದಿತು. `ಜಿಎಎಆರ್ ಕುರಿತು ಸಲಹೆ- ಸೂಚನೆ ಕೋರಲಾಗಿದ್ದು, ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಈವರೆಗೆ 14 ಪ್ರತಿಕ್ರಿಯೆ ಬಂದಿವೆ~ ಎಂದು ಚಿದಂಬರಂ ತಿಳಿಸಿದರು.

ರೂಪಾಯಿ: ರೂಪಾಯಿ ಅಪಮೌಲ್ಯಗೊಳ್ಳುತ್ತಿರುವುದು ಹಣದುಬ್ಬರದ ಮೇಲೆ ಒತ್ತಡ ಉಂಟು ಮಾಡುತ್ತಿದೆ. ಇದರಿಂದಾಗಿ ಆಮದು ಚಟುವಟಿಕೆ ದುಬಾರಿಯಾಗಿದೆ. ಪರಿಣಾಮ ಗ್ರಾಹಕರಿಗೂ ಈ ಹೊರೆಯ ವರ್ಗಾವಣೆ ಆಗುತ್ತಿದೆ ಎಂದು ಚಿದಂಬರಂ ಅವರು ಪ್ರಶ್ನೆಯೊಂದಕ್ಕೆ ಸಂಬಂಧಿಸಿ ಸದನಕ್ಕೆ ಲಿಖಿತ ಉತ್ತರ ನೀಡಿದರು.

ಜೂನ್ 22ರಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ವಿರುದ್ಧ ರೂಪಾಯಿ 57.32ರ ಮಟ್ಟಕ್ಕೆ ಕುಸಿದಿತ್ತು. ಇನ್ನೊಂದೆಡೆ ಹಣದುಬ್ಬರವೂ ಇತ್ತೀಚಿನ ತಿಂಗಳುಗಳಲ್ಲಿ ಶೇ 7ರಿಂದ ಶೇ 7.5ರ  ಮಟ್ಟದಲ್ಲಿಯೇ ಇದೆ.

ತೆರಿಗೆ ವಂಚನೆ: 2011-12ನೇ ಸಾಲಿನಲ್ಲಿ ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆಯಲ್ಲಿ ರೂ. 5,995 ಕೋಟಿಯಷ್ಟು ವಂಚನೆ ಆಗಿರುವುದನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ಸೇವಾ ತೆರಿಗೆ ವಂಚನೆ ಮೊತ್ತವೇ 5013 ಕೋಟಿಯಷ್ಟಿದೆ. ಈ ಸಂಬಂಧ 450 ಪ್ರಕರಣಗಳನ್ನೂ ದಾಖಲಿಸಿಕೊಳ್ಳಲಾಗಿದೆ ಎಂದು ಸಚಿವ ಎಸ್.ಎಸ್.ಪಳನಿ ಮಾಣಿಕ್ಯಂ ಅವರು ಲಿಖಿತ ಉತ್ತರ ನೀಡಿದರು.

ವಿಮಾನ ಸಂಸ್ಥೆ ಬಾಕಿ: 2009ರಿಂದ 2012ರ ಜೂನ್ 30ರವರೆಗೆ ದೇಶದ ವಿಮಾನ ಯಾನ ಕಂಪೆನಿಗಳಿಂದ ಒಟ್ಟು ರೂ. 40,621 ಕೋಟಿಯಷ್ಟು ಬ್ಯಾಂಕ್ ಸಾಲ ಬಾಕಿಯಾಗಿದೆ. ಇದರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)ಗೆ ರೂ. 5120 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 4010 ಕೋಟಿ, ಬ್ಯಾಂಕ್ ಆಫ್ ಇಂಡಿಯಗೆ ರೂ. 4133 ಕೋಟಿ, ಕೆನರಾ ಬ್ಯಾಂಕ್‌ಗೆ 2327 ಕೋಟಿ ಸಾಲ ಮರುಪಾವತಿ ಆಗಬೇಕಿದೆ ಎಂದು ಚಿದಂಬರಂ ಸದನಕ್ಕೆ ತಿಳಿಸಿದರು.

ಗ್ರಾ.ಪಂ. ಬ್ರಾಡ್‌ಬ್ಯಾಂಡ್: ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಒದಗಿಸುವ ಮಹತ್ವದ `ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್‌ವರ್ಕ್~ ಯೋಜನೆಗೆ 2011ರ ಆಕ್ಟೋಬರ್ 25ರಂದೇ ಅನುಮೋದನೆ ನೀಡಲಾಗಿದೆ ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಮಿಲಿಂದ್ ದೇವೂರಾ ಸದನಕ್ಕೆ ತಿಳಿಸಿದರು.

`ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಜಾರಿಗೊಳಿಸಲೆಂದೇ ಬಿಬಿಎನ್‌ಎಲ್ ಎಂಬ ವಿಶೇಷ ವ್ಯವಸ್ಥೆಯನ್ನು 2012ರ ಫೆಬ್ರುವರಿ 25ರಂದು ಆರಂಭಿಸಲಾಗಿದ್ದು, ಅದು ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲಿದೆ~ ಎಂದು ತಿಳಿಸಿದರು. 2012ರ ಜೂನ್ 30ರ ವೇಳೆಗೆ ದೇಶದಲ್ಲಿ ಒಟ್ಟು 3,75,648 ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ಒದಗಿಸಲಾಗಿದೆ.

`ಯೂರೋ; ಹೋಂದಾಣಿಕೆ:ಯೂರೋಪ್ ದೇಶಗಳ `ಯೂರೋ~ ವಲಯದಲ್ಲಿನ ಬಿಕ್ಕಟ್ಟಿನಿಂದ ಭಾರತದ ಮೇಲಾಗುತ್ತಿರುವ ಪರಿಣಾಮಗಳಿಂದ ಹೊರಬರಲು ದೇಶದ ಆರ್ಥಿಕ ನೀತಿಯಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ನಮೋನಾರಾಯಣ ಮೀನಾ ಲೋಕಸಭೆಗೆ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.