ಶನಿವಾರ, ಮೇ 15, 2021
22 °C

ಸಿಐಟಿಯು ಅನಿರ್ದಿಷ್ಟ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸದಸ್ಯರು ನಗರದಲ್ಲಿ ಮಂಗಳವಾರದಿಂದ ಧರಣಿ ಕೈಗೊಂಡಿದ್ದಾರೆ.ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸುತ್ತಿರುವ ಸದಸ್ಯರು, `ಸರ್ಕಾರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ರಚನೆ ಮಾಡಿ ಮೂರು ವರ್ಷ ಕಳೆದರೂ ಫಲಾನುಭವಿಗಳನ್ನು ನೋಂದಣಿ ಮಾಡಿಕೊಂಡಿಲ್ಲ. ಅಲ್ಲದೇ ಮಂಡಳಿಯ ಯೋಜನೆಗಳನ್ನು ಸಹ ರೂಪಿಸಿಲ್ಲ~ ಎಂದು ದೂರಿದರು.`ಸರ್ಕಾರ ನೆಪ ಮಾತ್ರಕ್ಕೆ ಈ ಮಂಡಳಿಯನ್ನು ರಚಿಸಿದೆ. ಆದರೆ, ಮಂಡಳಿಯಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅಸಂಘಟಿತ ಕಾರ್ಮಿಕರಿಗೆ ರಾಜ್ಯ ವ್ಯಾಪಿ ಸಮಾನ ಕನಿಷ್ಠ ಕೂಲಿ ನೀತಿ ರೂಪಿಸುವ ಕಾರಣಕ್ಕಾಗಿ ಸರ್ಕಾರ 2010ರಲ್ಲಿ ರಚಿಸಿದ್ದ ಸಮಿತಿಯು ಈವರೆಗೂ ಸಭೆ ಸೇರಿಲ್ಲ~ ಎಂದು ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಪ್ರಸನ್ನಕುಮಾರ್ ಹೇಳಿದರು.ಖಾಸಗಿ ಕಂಪೆನಿಗಳು ಹೆಚ್ಚಿನ ಆದಾಯ ಗಳಿಸುತ್ತಿದ್ದರೂ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡುತ್ತಿಲ್ಲ. ಕಂಪೆನಿಗಳು ಒಟ್ಟು ಆದಾಯ ಗಳಿಕೆಯಲ್ಲಿ ಶೇ 12ರಷ್ಟನ್ನು ಮಾತ್ರ ವೇತನಕ್ಕೆ ನೀಡುತ್ತಿವೆ. ಕೂಲಿ ಪ್ರಮಾಣ ಕಡಿಮೆ ಇರುವುದರಿಂದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಹೆಚ್ಚಳ ಮಾಡಿ ಸಮಾನ ಕೂಲಿ ನೀತಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.ರಾಜ್ಯದೆಲ್ಲೆಡೆ ಸಮಾನ ಕೂಲಿ ನೀತಿ ಜಾರಿಗೆ ತರಬೇಕು. ಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಣೆಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು. ಕಾರ್ಮಿಕ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು. ಸಿಐಟಿಯು ಬೆಂಗಳೂರು ನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಮೀನಾಕ್ಷಿ ಸುಂದರಂ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಉಮೇಶ್ ಇತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.