ಸಿಐಟಿಯು ಜಿಲ್ಲಾ ಸಮ್ಮೇಳನ

6

ಸಿಐಟಿಯು ಜಿಲ್ಲಾ ಸಮ್ಮೇಳನ

Published:
Updated:

ಚಿಕ್ಕಬಳ್ಳಾಪುರ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ದ್ವಿತೀಯ ಜಿಲ್ಲಾ ಸಮ್ಮೇಳನ ಚಿಕ್ಕಬಳ್ಳಾಪುರದಲ್ಲಿ ಇದೇ ತಿಂಗಳ 23 ಮತ್ತು 24ರಂದು ನಡೆಯಲಿದೆ. ಬಹಿರಂಗ ಸಮಾವೇಶ ಮತ್ತು ವಿವಿಧ ತಾಲ್ಲೂಕುಗಳ ಸಂಘಟನೆಯ ಕಾರ್ಯಕರ್ತರ ಸಂವಾದ ಕಾರ್ಯಕ್ರಮವು ನಡೆಯಲಿದೆ.

ಸಮ್ಮೇಳನದ ಸಿದ್ಧತಾ ಕಾರ್ಯಗಳ ಕುರಿತು ಸಿಐಟಿಯು ಸಂಘಟನೆಯ ಮುಖಂಡರು ಮತ್ತು ಸದಸ್ಯರು ಮಂಗಳವಾರ ನಗರದ ಪ್ರವಾಸಿಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು.

`ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಲ್ಲಿ ತಮ್ಮ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮತ್ತು ದುಡಿಮೆಗೆ ತಕ್ಕಂತೆ ಕೂಲಿ ನೀಡುವಂತೆ ಹಕ್ಕೊತ್ತಾಯ ಮಾಡುವ ಗುರಿಯೊಂದಿಗೆ ದ್ವಿತೀಯ ಜಿಲ್ಲಾ ಸಮ್ಮೇಳನ ನಡೆಯಲಿದೆ.ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ನ್ಯಾಯಸಮ್ಮತ ಕೂಲಿಯನ್ನು ನೀಡುವಂತೆ ಸಮ್ಮೇಳನದಲ್ಲಿ ಒತ್ತಾಯಿಸಲಾಗುವುದು.ಜಿಲ್ಲೆಯಾದ್ಯಂತ ವಿವಿಧ ಊರು ಮತ್ತು ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ' ಎಂದು ಸಿಐಟಿಯು ಸಂಘಟನೆಯ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ ತಿಳಿಸಿದರು.`ಅಂಗನವಾಡಿ ನೌಕರರು ಮತ್ತು ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಪಂಚಾಯಿತಿ   ನೌಕರರು, ದಿನಗೂಲಿ ನೌಕರರು, ಗುತ್ತಿಗೆಯಾಧಾರ ನೌಕರರು, ಕಾರ್ಖಾನೆಗಳಲ್ಲಿನ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಹಮಾಲಿ ಮಾಡುವವರು, ಕಟ್ಟಡ ಕಾರ್ಮಿಕರು, ನೇಕಾರಿಕೆಯಲ್ಲಿ ತೊಡಗಿಕೊಂಡವರು ಮುಂತಾದವರು ಕೆಲಸ ಮಾಡುತ್ತಿದ್ದಾರೆಯಾದರೂ ದುಡಿಮೆಗೆ ತಕ್ಕಂತೆ ಅವರಿಗೆ ವೇತನ ಸಿಗುತ್ತಿಲ್ಲ. ಅಸುರಕ್ಷತೆ ಮತ್ತು ಉದ್ಯೋಗ ಅಭದ್ರತೆಯ ಭೀತಿ ಅವರಿಗೆ ಕಾಡುತ್ತಿದ್ದು, ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಅವರು ತಿಳಿಸಿದರು.`8 ರಿಂದ 10 ಗಂಟೆಗಳ ಕಾಲ ದುಡಿದರೂ ಕಾರ್ಮಿಕರಿಗೆ 3 ರಿಂದ 5 ಸಾವಿರ ರೂಪಾಯಿವರೆಗೆ ಮಾತ್ರವೇ ವೇತನ ಸಿಗುತ್ತಿದ್ದು, ಕುಟುಂಬ ನಿರ್ವಹಣೆಗೆ ವೇತನ ಸಾಕಾಗುತ್ತಿಲ್ಲ. ಮೂರು ಹೊತ್ತಿನ ಊಟ ಮಾಡಲಾಗದೇ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲಾಗದೇ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಗುತ್ತಿಗೆಯಾಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಸರ್ಕಾರವು ಕಾಯಂಗೊಳಿಸುತ್ತಿಲ್ಲ ಎಂದು  ತಿಳಿಸಿದರು.`ಡಿ.23ರಂದು ನಡೆಯುವ ಬಹಿರಂಗ ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಲಿದ್ದಾರೆ. ನಂತರ ಚರ್ಚಾ ಕಾರ್ಯಕ್ರಮಗಳು ಅಂಬೇಡ್ಕರ್ ಭವನದಲ್ಲಿ ನಡೆಯಲಿವೆ. ಕಾರ್ಯಕ್ರಮದ ಯಶಸ್ಸಿಗಾಗಿ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ.

ವಿವಿಧ ಸಂಘಟನೆಗಳು ಮತ್ತು ಜನಸಾಮಾನ್ಯರಿಂದ ಉತ್ತಮ ಬೆಂಬಲ ಮತ್ತು ಸಹಕಾರ ದೊರೆಯುತ್ತಿದೆ' ಎಂದು ಅವರು ತಿಳಿಸಿದರು. ಸಿಐಟಿಯು ಮುಖಂಡರಾದ ಸಿದ್ದಗಂಗಪ್ಪ, ಲಕ್ಷ್ಮಿದೇವಮ್ಮ  ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry