ಸಿಐಡಿ ತನಿಖೆಗೆ ಕೋರ್ಟ್ ಆದೇಶ

7

ಸಿಐಡಿ ತನಿಖೆಗೆ ಕೋರ್ಟ್ ಆದೇಶ

Published:
Updated:

ಬೆಂಗಳೂರು: ತಾವು ಹೇಳಿದ ಕೆಲಸ ನಿರ್ವಹಿಸಿಲ್ಲ ಎನ್ನುವ ಕಾರಣಕ್ಕೆ ತಹಶೀಲ್ದಾರರೊಬ್ಬರನ್ನು ಕೊಲೆ ಮಾಡಿಸಿರುವ ಆರೋಪ ಹೊತ್ತ ಬೆಂಗಳೂರು ನಗರ ಜಿಲ್ಲೆಯ ಅಂದಿನ ವಿಶೇಷ ಜಿಲ್ಲಾಧಿಕಾರಿ (ತುಮಕೂರಿನ ಹಾಲಿ ಜಿಲ್ಲಾಧಿಕಾರಿ) ಡಾ.ಸಿ.ಸೋಮಶೇಖರ ಹಾಗೂ ಇತರರ ವಿರುದ್ಧ ವಿಚಾರಣೆಯನ್ನು ಸಿಐಡಿಗೆ ವಹಿಸಿ ಹೈಕೋರ್ಟ್ ಆದೇಶಿಸಿದೆ.2000ನೇ ಸಾಲಿನಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸೋಮಶೇಖರ, ಪೌರಾಡಳಿತ ನಿರ್ದೇಶನಾಲಯದ ಉಪನಿರ್ದೇಶಕರಾಗಿದ್ದ ಕೆ.ವಿ.ವೆಂಕಟೇಶಯ್ಯ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುಮಾಸ್ತರಾಗಿರುವ ಎಲ್.ಸಿ.ವೀರೇಶ್ ಸಲ್ಲಿಸಿರುವ ಮೇಲ್ಮನವಿಯನ್ನು ಇತ್ಯರ್ಥಗೊಳಿಸಿದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.ಇವರೆಲ್ಲರ ವಿರುದ್ಧ ಎಸ್.ಎನ್.ರಾಮೇಗೌಡ ಅವರ ಪುತ್ರ ಕೋಲಾರ ನಗರಸಭೆಯ ಉಪಾಧ್ಯಕ್ಷರಾಗಿರುವ ಎಸ್.ಆರ್.ಮುರಳಿಗೌಡ ಅವರು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ತನಿಖೆಗೆ ಆದೇಶಿಸಿತ್ತು. ಇದನ್ನು ಆರೋಪಿಗಳು 2003ರಲ್ಲಿ ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿದ್ದರು. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಮೇಲ್ಮನವಿ ಸಲ್ಲಿಸಿ ಎಂಟು ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ.ಪ್ರಕರಣದ ವಿವರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ರೂಪೇನ ಅಗ್ರಹಾರದ ಬಳಿ ವೆಂಕೋಜಿರಾವ್ ಎನ್ನುವವರಿಗೆ ಸೇರಿದ್ದ ಜಮೀನನ್ನು ಅವರು ‘ಶಿಕ್ಷಕರ ಸಂಘ’ ಹಾಗೂ ಗಾರ್ಗ್ ಎನ್ನುವವರಿಗೆ ಮಾರಾಟ ಮಾಡಿದ್ದರು. ಗಾರ್ಗ್ ಅವರಿಗೆ ಜಮೀನು ನೀಡಿದ್ದನ್ನು ಪ್ರಶ್ನಿಸಿ ಸಂಘವು ಹೈಕೋರ್ಟ್ ಮೊರೆ ಹೋಗಿ, ತಡೆಯಾಜ್ಞೆ ಪಡೆದುಕೊಂಡಿತ್ತು.ಈ ಹಿನ್ನೆಲೆಯಲ್ಲಿ ಗಾರ್ಗ್ ಅವರ ಹೆಸರಿಗೆ ಖಾತೆ ಮಾಡಿಕೊಡಲು ತಮ್ಮ ತಂದೆ ನಿರಾಕರಿಸಿದರು. ಸೋಮಶೇಖರ ಅವರು ಬಹಳ ಒತ್ತಾಯ ಮಾಡಿದರೂ ಅವರ ಮಾತನ್ನು ಕೇಳದ ಹಿನ್ನೆಲೆಯಲ್ಲಿ ಅವರು ಕೊಲೆ ಬೆದರಿಕೆ ಒಡ್ಡಿದರು. ಅದಕ್ಕೂ ಜಗ್ಗದಿದ್ದ ಕಾರಣ, ತಮ್ಮ ತಂದೆಯ ಕೊಲೆ ಮಾಡಲಾಗಿದೆ ಎನ್ನುವುದು ಎಸ್.ಆರ್.ಮುರುಳಿಗೌಡ ಅವರ ವಾದ.ರಾಜಕೀಯದವರ ಬೆಂಬಲ ಕೊಲೆಗಾರರ ಮೇಲೆ ಇದ್ದ ಕಾರಣ, ಈ ಬಗ್ಗೆ ತನಿಖೆ ಮುಂದುವರಿಸದ ಪೊಲೀಸರು ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ‘ಬಿ ರಿಪೋರ್ಟ್’ ಹಾಕಿದರು.ತನಿಖೆಯನ್ನು ಸರಿಯಾಗಿ ಮಾಡಿಲ್ಲ ಎಂದು ದೂರಿ ಮುರುಳಿಗೌಡ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿತ್ತು.ಇದನ್ನು ಪ್ರಶ್ನಿಸಿ ಆರೋಪಿಗಳು ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ‘ಅರ್ಹತೆಯ ಆಧಾರದ ಮೇಲೆ ಈ ತೀರ್ಪು ಹೊರಡಿಸಿಲ್ಲ. ಬದಲಿಗೆ ಈ ಕೊಲೆ ಪ್ರಕರಣದ ತನಿಖೆ ಸರಿಯಾಗಿ ನಡೆಯಲಿಲ್ಲ ಎಂದು ಪ್ರತಿವಾದಿ ಮುರಳಿಗೌಡ ಅವರಿಗೆ ಎನಿಸಿರುವ ಹಿನ್ನೆಲೆಯಲ್ಲಿ, ಇದರ ತನಿಖೆಗೆ ಆದೇಶಿಸಲಾಗಿದೆ’ ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry