ಸಿಐಡಿ, ಲೋಕಾಯುಕ್ತ ವರದಿಗೂ ಕಿಮ್ಮತ್ತಿಲ್ಲ!

7

ಸಿಐಡಿ, ಲೋಕಾಯುಕ್ತ ವರದಿಗೂ ಕಿಮ್ಮತ್ತಿಲ್ಲ!

Published:
Updated:

ಬೆಂಗಳೂರು: ‘ಭೂಮಿ ಸ್ವಾಧೀನ ಪಡಿಸಿ­ಕೊಳ್ಳುವಾಗ ಭಾರಿ ಪ್ರಮಾಣದ ಭ್ರಷ್ಟಾ­ಚಾರ ನಡೆದಿದೆ’ ಎಂದು ಲೋಕಾ­ಯುಕ್ತರು ತನಿಖೆ ನಡೆಸಿ ವರದಿ ನೀಡಿ­ದ್ದಾರೆ. ಸಿಐಡಿ ಪೊಲೀಸರೂ ತನಿಖೆ ನಡೆಸಿ, ‘ಅಧಿಕಾರಿಗಳು ತಪ್ಪಿತಸ್ಥರು’ ಎಂದು ಹೇಳಿದ್ದಾರೆ. ಆದರೂ ಗೃಹ ಮಂಡಳಿಯಾಗಲಿ, ಸರ್ಕಾರವಾಗಲಿ ಈವ­ರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಇದು ಧಾರವಾಡದ ಕತೆ. 2005–06­ನೇ ಸಾಲಿನಲ್ಲಿ ಗೃಹ ಮಂಡಳಿ ಧಾರವಾಡ ತಾಲ್ಲೂಕು ಹೀರೇಮಲ್ಲಿಗ­ವಾಡ ಗ್ರಾಮದ ಸರ್ವೆ ನಂ 7ರಿಂದ 49ರವರೆಗಿನ 300 ಎಕರೆ ಭೂಮಿ­ಯನ್ನು ಖರೀದಿ ಮಾಡಿ ವಸತಿ ಯೋಜನೆ ಜಾರಿಗೊಳಿಸಲು ನಿರ್ಧರಿಸಿತು. ಆದರೆ ಆಗ ರೈತರಿಂದ ನೇರವಾಗಿ ಭೂಮಿ­ಯನ್ನು ಖರೀದಿ ಮಾಡದೆ ಮಧ್ಯವರ್ತಿ­ಗಳಿಂದ ಖರೀದಿಸಿದ್ದರಿಂದ ಮಂಡಳಿಗೆ ಆರ್ಥಿಕ ನಷ್ಟವಾಯಿತು ಹಾಗೂ ರೈತ­ರಿಗೆ ಅನ್ಯಾಯವಾಯಿತು. ಮಧ್ಯವರ್ತಿ­ಗಳು ಸಾಕಷ್ಟು ಹಣ ಮಾಡಿಕೊಂಡರು ಎಂಬ ಆರೋಪ ಬಂತು.ರೈತ ನಾಯಕ ಈರೇಶ್‌ ಹಂಚಟಗೇರಿ ಅವರು ಇದರ ವಿರುದ್ಧ ಹೋರಾಟ ನಡೆಸಿದರು. ಜೊತೆಗೆ ಲೋಕಾಯುಕ್ತಕ್ಕೆ ದೂರನ್ನೂ ಸಲ್ಲಿಸಿದರು. ಲೋಕಾ­ಯುಕ್ತರು ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನೂ ನೀಡಿದರು. ಅಲ್ಲದೆ ಈ ಬಗ್ಗೆ ಸಿಐಡಿ ತನಿಖೆ ಕೂಡ ನಡೆಯಿತು. ಸಿಐಡಿ ಡಿಜಿಪಿಯಾಗಿದ್ದ ಡಾ.ಡಿ.ವಿ. ಗುರುಪ್ರಸಾದ್‌ ಅವರು 30–12–2010ರಂದು ಸರ್ಕಾರಕ್ಕೆ ವರದಿ ಸಲ್ಲಿಸಿ­ದರು. ‘ಅಧಿಕಾರಿಗಳು ತಪ್ಪು ಮಾಡಿ­ದ್ದಾರೆ’ ಎಂದು ಅವರು ತಮ್ಮ ವರದಿ­ಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.  ಆದರೆ ಈವರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.ಧಾರವಾಡ ತಾಲ್ಲೂಕು ಕೆಲಗೇರಿ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಮುಮ್ಮಿಗಟ್ಟಿ, ತಡಸಿನಕೊಪ್ಪ, ಲಕಮನ­ಹಳ್ಳಿ ಹಾಗೂ ಹುಬ್ಬಳ್ಳಿ ತಾಲ್ಲೂಕು ಅಮರಗೋಳ, ಗಾಮನಗಟ್ಟಿ, ಸುತಗಟ್ಟಿ ಗ್ರಾಮಗಳಲ್ಲಿ ಗೃಹ ಮಂಡಳಿ ವಸತಿ ಯೋಜನೆಗಾಗಿ ರೈತರನ್ನು ಕಡೆಗಣಿಸಿ ಮಧ್ಯವರ್ತಿಗಳ ಮೂಲಕ ಭೂಮಿ ಪಡೆಯಲಾಗಿದೆ.ನೂರು ವಸತಿ ಯೋಜನೆಯಡಿ ಗೃಹ ಮಂಡಳಿ ಈ ಯೋಜನೆಯನ್ನು ಕೈಗೊ­ಂಡಿ­ದೆ. ಧಾರವಾಡ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಲೆ ನಿಗದಿ ಸಭೆ ನಡೆದ ಸಂದರ್ಭದಲ್ಲಿಯೂ ನಿಜವಾದ ರೈತರು ಸಭೆಗೆ ಹಾಜರಾಗಿರಲಿಲ್ಲ. ರೈತರೊಂದಿಗೆ ಜಿಪಿಎ ಮಾಡಿಸಿಕೊಂಡಿದ್ದ ಮಧ್ಯವರ್ತಿ­ಗಳೇ ಹಾಜರಾಗಿದ್ದರು ಎನ್ನುವುದು ಸಿಐಡಿ ತನಿಖಾ ವರದಿಯಿಂದ ದೃಢ­ಪಟ್ಟಿದೆ.ಹಿರೇಮಲ್ಲಿಗವಾಡದ 300 ಎಕರೆ ಜಮೀನುಗಳನ್ನು ಎಕರೆಗೆ ರೂ. 5.75 ಲಕ್ಷದಂತೆ ಖರೀದಿ ಮಾಡಲು ಮಂಡಳಿ ಸಭೆ­ಯಲ್ಲಿ ನಿರ್ಧರಿಸಲಾಗಿತ್ತು. ಇದ­ರಂತೆ ವಸತಿ ಇಲಾಖೆ ಅಧಿಸೂಚನೆ­ಯನ್ನೂ ಹೊರಡಿಸಿತು.ಬೆಲೆ ನಿಗದಿ ವಿಷಯವನ್ನು ಮಾಧ್ಯಮ­ಗಳ ಮೂಲಕ ಪ್ರಚಾರ ಮಾಡದೇ ಇರುವುದರಿಂದ ಮಧ್ಯವರ್ತಿಗಳಿಗೆ ಅನುಕೂಲವಾಯಿತು. ಇದಕ್ಕೆ ಮಂಡಳಿ ಅಧಿಕಾರಿಗಳ ಬೆಂಬಲವಿತ್ತು.ಹಿರೇಮಲ್ಲಿಗವಾಡ ಗ್ರಾಮದಲ್ಲಿ 108.17 ಎಕರೆ, ಕೆಲಗೇರಿ ಗ್ರಾಮದಲ್ಲಿ 21.23 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ರೈತರು ಹಾಗೂ ಮಧ್ಯ­ವರ್ತಿಗಳಿಗೆ ಹಣ ನೀಡಲಾಗಿದೆ. ಸರ್ಕಾರದ ಆದೇಶವಿಲ್ಲದ ಭೂಮಿ­ಯನ್ನೂ ಖರೀದಿ ಮಾಡಲಾಗಿದೆ.ವಸತಿ ಯೋಜನೆಗಾಗಿ ಸರ್ಕಾರ 300 ಎಕರೆ ಭೂಮಿಯನ್ನು ಗುರುತಿಸಿತ್ತು. ಆದರೆ ಇದರಲ್ಲಿ ಕೆಲವು ರೈತರು ಭೂಮಿ ನೀಡಲು ನಿರಾಕರಿಸಿದರು. ಈ ವಿಷಯ­ವನ್ನು ಸರ್ಕಾರಕ್ಕೆ ತಿಳಿಸದೆ ಅಕ್ಕಪಕ್ಕದ ಗ್ರಾಮಗಳ ಭೂಮಿಯನ್ನೂ ವಶಪಡಿಸಿ­­ಕೊಳ್ಳಲಾಗಿದೆ.ಗೃಹ ಮಂಡಳಿಯ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಅವರು ಮಂಡಳಿ ಆಯುಕ್ತರ ಒಪ್ಪಿಗೆ ಪಡೆದು ಸರ್ಕಾರ ಅನುಮತಿ ನೀಡದೇ ಇರುವ ಭೂಮಿ­ಯನ್ನೂ ಸ್ವಾಧೀನಪಡಿಸಿ­ಕೊಂಡರು. ಇದಕ್ಕೆ ಇನ್ನೂ ಸರ್ಕಾರಿ ಒಪ್ಪಿಗೆ ಸಿಕ್ಕಿಲ್ಲ.‘ಹಿರೇಮಲ್ಲಿಗವಾಡದ ಸರ್ವೆ ನಂಬರ್‌ 7ರಿಂದ 49ರವರೆಗಿನ 300 ಎಕರೆ ಭೂಮಿಯನ್ನು ಸ್ವಾಧೀನಪಡಿಸಿ­ಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಆದರೆ ಮಂಡಳಿ ಅಧಿಕಾರಿಗಳು ಅದೇ ಆದೇಶ ಇಟ್ಟುಕೊಂಡು ಅಕ್ಕಪಕ್ಕದ ಜಮೀನುಗಳನ್ನೂ ವಶಪಡಿಸಿ­ಕೊಂಡಿ­ದ್ದಾರೆ. ಇದು ಗೃಹ ಮಂಡಳಿ ಕಾಯ್ದೆ ಕಲಂ 33(1) ರ ಸ್ಪಷ್ಟ ಉಲ್ಲಂಘನೆ­ಯಾಗಿದೆ’ ಎಂದು ಸಿಐಡಿ ವರದಿಯಲ್ಲಿ ಹೇಳಲಾಗಿದೆ.ಹಿರೇಮಲ್ಲಿಗವಾಡ, ಕೆಲಗೇರಿ, ಚಿಕ್ಕ­ಮಲ್ಲಿಗವಾಡ ಮತ್ತು ಮಮ್ಮಿಗಟ್ಟಿ ಗ್ರಾಮ­ಗಳ 206.06 ಎಕರೆ ಭೂಮಿ­ಯನ್ನು ರೂ. 11.77 ಕೋಟಿ ಕೊಟ್ಟು ಮಂಡಳಿ ಪಡೆದುಕೊಂಡಿದೆ. ಈ ಹಣ ರೈತರ ಬದಲಾಗಿ ಮಧ್ಯವರ್ತಿಗಳ ಪಾಲಾ­ಗಿದೆ ಎನ್ನುವುದು ವಿಚಾರಣೆ­ಯಿಂದ ದೃಢಪಟ್ಟಿದೆ ಎಂದು ಸಿಐಡಿ ವರದಿಯಲ್ಲಿ ಹೇಳಲಾಗಿದೆ.ಎಂಜಿನಿಯರ್‌ ಕುಮ್ಮಕ್ಕು: ‘ಗೃಹ ಮಂಡಳಿ ಹುಬ್ಬಳ್ಳಿ ವಿಭಾಗದ ಕಾರ್ಯ­ಪಾಲಕ ಎಂಜಿನಿಯರ್‌ ವಿಜಯ­ಕುಮಾರ್‌ ಕಕ್ಕಯ್ಯ ಅವರು ಜಮೀನು ಸ್ವಾಧೀನಪಡಿಸಿಕೊಳ್ಳುವ ವಿಚಾರವನ್ನು ಮಧ್ಯವರ್ತಿಗಳಿಗೆ ಮೊದಲೇ  ತಿಳಿಸಿದ್ದರು. ಮಧ್ಯವರ್ತಿಗಳು ರೈತರಿಂದ ಜಿಪಿಎ ಮಾಡಿ­ಸಿಕೊಂಡಿದ್ದರು.ಇದನ್ನು ನೋಂದಣಿ ಮಾಡಿಸದೇ ಇರುವುದರಿಂದ ಸರ್ಕಾರಕ್ಕೆ ಮುದ್ರಾಂಕ ಶುಲ್ಕವನ್ನೂ ಕಟ್ಟಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟವಾ­ಗಿದೆ. ಅಲ್ಲದೆ ಕೆಲವು ಮಧ್ಯವರ್ತಿಗಳು ರೈತರಿಂದ ಭೂಮಿ­ಯನ್ನು ಪಡೆದು ಅದನ್ನು ನೇರವಾಗಿ ಗೃಹ ಮಂಡಳಿಗೆ ಮಾರಾಟ ಮಾಡಿ­ದ್ದಾರೆ. ರೈತರಿಗೆ ಜಮೀನಿನ ಪರಿಹಾರದ ಹಣ ಸಿಕ್ಕಿಲ್ಲ. ಅದೆಲ್ಲ ಮಧ್ಯವರ್ತಿಗಳ ಪಾಲಾಗಿದೆ ಎನ್ನು­ವುದೂ ಕೂಡ ವಿಚಾರಣೆಯಿಂದ ದೃಢಪಟ್ಟಿದೆ. ಕಾರ್ಯಪಾಲಕ ಎಂಜಿನಿ­ಯರ್‌ ಅವರು ತಮ್ಮ ಲಾಭಕ್ಕಾಗಿ ಮಧ್ಯವರ್ತಿಗಳನ್ನು ಬಳಸಿಕೊಂಡಿದ್ದರು ಎನ್ನುವುದು ಸಾಬೀತಾಗಿದೆ’ ಎನ್ನುವ ಸಂಗತಿಯೂ ಸಿಐಡಿ ವರದಿಯಲ್ಲಿದೆ.ಈ ವಿಷಯಕ್ಕೆ ಸಂಬಂಧಿಸಿದ ದಾಖ­ಲೆಗಳನ್ನೂ ಅದು ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೂ ಮೊದಲು ಲೋಕಾಯುಕ್ತರು ವರದಿ ನೀಡಿದ್ದರು.

ಗೃಹ ಮಂಡಳಿ ಆಯುಕ್ತರ ವಿರುದ್ಧ ಕೂಡ ಕೆಲವು ಆರೋಪಗಳು ಸಾಬೀತಾ­ಗಿದ್ದವು. 2010­ರ ಡಿಸೆಂಬರ್‌ 30ರಂದೇ ಸಿಐಡಿ ವರದಿ ನೀಡಿದ್ದರೂ, ಆ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿಲ್ಲ.ಈ ನಡುವೆ ಸಿಐಡಿ ವರದಿಯಲ್ಲಿ ಆರೋಪಿ ಎಂದು ಗುರುತಿಸಲಾಗಿರುವ ಕಾರ್ಯಪಾಲಕ ಎಂಜಿನಿಯರ್‌ ವಿಜಯ­ಕುಮಾರ್‌ ಕಕ್ಕಯ್ಯ ಸೇವೆಯಿಂದ ನಿವೃತ್ತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry