ಗುರುವಾರ , ಮೇ 13, 2021
17 °C
ಆರ್ ಟಿ.ಐ ವ್ಯಾಪ್ತಿಗೆ ರಾಜಕೀಯ ಪಕ್ಷಗಳು

ಸಿಐಸಿ ಆದೇಶಕ್ಕೆ ಕಾಂಗ್ರೆಸ್ ವಿರೋಧ, ಬಿಜೆಪಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಪಣಜಿ/ (ಪಿಟಿಐ/ಐಎಎನ್‌ಎಸ್): ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಚೌಕಟ್ಟಿಗೆ ತರುವ ಕೇಂದ್ರ ಮಾಹಿತಿ ಆಯೋಗದ ಐತಿಹಾಸಿಕ ತೀರ್ಪಿಗೆ ಕಾಂಗ್ರೆಸ್, ಜೆಡಿ(ಯು), ಸಿಪಿಐ(ಎಂ) ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರೆ, ಪ್ರಮುಖ ಪ್ರತಿಪಕ್ಷ ಬಿಜೆಪಿ ಸ್ವಾಗತಿಸಿದೆ.ಪ್ರಮುಖ ರಾಜಕೀಯ ಪಕ್ಷ ಕಾಂಗ್ರೆಸ್ ಕೇಂದ್ರ ಮಾಹಿತಿ ಆಯೋಗದ ತೀರ್ಪಿಗೆ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದರಿಂದ ಕೆಲವು ದುಸ್ಸಾಹಸಿಗಳು ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಗೆಡುವಬಲ್ಲವು. ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ತ್ರಿವೇದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಇದಕ್ಕೆ ದನಿಗೂಡಿಸಿರುವ ಜೆಡಿ(ಯು) ಪಕ್ಷದ ಅಧ್ಯಕ್ಷ ಶರದ್ ಯಾದವ್ ಅವರು ಕೇಂದ್ರ ಮಾಹಿತಿ ಆಯೋಗದ ತೀರ್ಪು ತಮಗೆ ದಿಗ್ಭ್ರಮೆ ಹಾಗೂ ಆಘಾತ ತಂದಿದ್ದು, ಇದು ನ್ಯಾಯಯುವಾಗಿಲ್ಲ ಎಂದು ಹೇಳಿದ್ದಾರೆ.ಪ್ರಮುಖ ಎಡಪಕ್ಷ ಸಿಪಿಐ(ಎಂ) ಸಹ ಕೇಂದ್ರ ಮಾಹಿತಿ ಆಯೋಗದ ತೀರ್ಪಿಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಷದ ಸಿದ್ದಾಂತ, ಆದರ್ಶ, ನಾಯಕತ್ವದ ಮೇಲೆ ಭರವಸೆ ನಂಬಿಕೆ ಇಟ್ಟು ಸ್ವಇಚ್ಛೆಯಿಂದ ನಾಗರಿಕರು ಸೇರಿರುವ ಗುಂಪೇ ರಾಜಕೀಯ ಪಕ್ಷವಾಗಿದೆ. ಈ ಪಕ್ಷಗಳು ಅದರ ಸದಸ್ಯರಿಗೆ ಮಾತ್ರ ಉತ್ತರದಾಯಿಗಳಾಗಿರುತ್ತವೆ ಎಂದು ಪಕ್ಷದ ಪಾಲಿಟ್‌ಬ್ಯೂರೊ ಹೊರಡಿಸಿರುವ ಪ್ರಕಟಣೆಯು ತಿಳಿಸಿದೆ.ಆದರೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಇದನ್ನು ಸ್ವಾಗತಿಸಿದೆ. ಪಾರದರ್ಶಕತೆ, ಜವಾಬ್ದಾರಿಯನ್ನು ತರುವ ಯಾವುದೇ ಪ್ರಯತ್ನವನ್ನು ಬಿಜೆಪಿ ವಿರೋಧಿಸವುದಿಲ್ಲ ಎಂದು ಹೇಳಿರುವ ಅದರ ವಕ್ತಾರರು ಸಿಐಸಿ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.ಗೋವಾದ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರೂ ಕೂಡ ಸಿಐಸಿ ತೀರ್ಪನ್ನು ಸ್ವಾಗತಿಸಿದ್ದಾರೆ. ಇದೊಂದು ಒಳ್ಳೆಯ ಸಂಗತಿ ಎಂದು ಅವರು ಹೇಳಿದ್ದಾರೆ.ಈ ಮಧ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಯಗಳ ಸಂಸ್ಥೆಯಾದ ಎಡಿಆರ್ ದೆಹಲಿ ನ್ಯಾಯಾಲಯದಲ್ಲಿ ಕೇವಿಯಟ್‌ ಒಂದನ್ನು ಸಲ್ಲಿಸಿದ್ದು, ಕೇಂದ್ರ ಮಾಹಿತಿ ಆಯೋಗದ ತೀರ್ಪಿಗೆ ತಡೆಯಾಜ್ಞೆ ನೀಡಬಾರದೆಂದು ಒತ್ತಾಯಿಸಿದೆ.ರಾಜಕೀಯ ಪಕ್ಷಗಳು ತಕ್ಷಣವೇ ನ್ಯಾಯಾಲಯದಲ್ಲಿ ಈ ಆಜ್ಞೆಗೆ ತಡೆಯಾಜ್ಞೆ ತರಲು ಯತ್ನಿಸುವ ಸಾಧ್ಯತೆ ಇರುವುದರಿಂದ ತಾವು ಕೇವಿಯಟ್ ಸಲ್ಲಿಸಿರುವುದಾಗಿ ಎಡಿಆರ್‌ನ ರಾಷ್ಟ್ರೀಯ ಸಂಯೋಜಕ ಅನಿಲ್ ಬರಿವಾಲ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.