ಶುಕ್ರವಾರ, ಆಗಸ್ಟ್ 7, 2020
23 °C
ಐಪಿಎಲ್ ಟೂರ್ನಿ ವೇಳೆ ನಿಷೇಧಿತ ಮದ್ದು ಸೇವಿಸಿದ್ದ ಕೆಕೆಆರ್ ಆಟಗಾರ

ಸಿಕ್ಕಿಬಿದ್ದ ಪ್ರದೀಪ್ ಸಂಗ್ವಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಕ್ಕಿಬಿದ್ದ ಪ್ರದೀಪ್ ಸಂಗ್ವಾನ್

ನವದೆಹಲಿ (ಪಿಟಿಐ): ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಟಗಾರ ಪ್ರದೀಪ್ ಸಂಗ್ವಾನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಆರನೇ ಋತುವಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ವೇಳೆ ನಡೆಸಿದ್ದ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ.ಎಡಗೈ ವೇಗಿಯಾಗಿರುವ 22ರ ಹರೆಯದ ಸಂಗ್ವಾನ್ ರಣಜಿ ಟೂರ್ನಿಯಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದ ಟೂರ್ನಿಯ ವೇಳೆ ಸಂಗ್ವಾನ್ ಅವರನ್ನು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಿಲಾಗಿತ್ತು. ಅವರು ನಿಷೇಧಿತ ಮದ್ದು ಸೇವಿಸಿದ್ದರು ಎಂಬುದು `ಎ' ಸ್ಯಾಂಪಲ್ ಪರೀಕ್ಷೆಯಿಂದ ಸಾಬೀತಾಗಿದೆ.ಐಪಿಎಲ್‌ನ ಆರನೇ ಋತುವಿನ ಟೂರ್ನಿ `ಸ್ಪಾಟ್ ಫಿಕಿಂಗ್ಸ್' ಹಾಗೂ ಬೆಟ್ಟಿಂಗ್ ಹಗರಣದಿಂದ ಈಗಾಗಲೇ ವಿವಾದಕ್ಕೆ ಗುರಿಯಾಗಿದೆ. ಇದೀಗ ಉದ್ದೀಪನ ಮದ್ದು ವಿವಾದದ ಕಳಂಕ ಕೂಡಾ ಈ ಟೂರ್ನಿಗೆ ಅಂಟಿಕೊಂಡಿದೆ. ಸಂಗ್ವಾನ್ ಅವರು ಪಾಕಿಸ್ತಾನದ ವೇಗಿ ಮೊಹಮ್ಮದ್ ಆಸಿಫ್ ಬಳಿಕ ಐಪಿಎಲ್‌ನಲ್ಲಿ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.`ಈ ಬಾರಿಯ ಐಪಿಎಲ್ ಟೂರ್ನಿಯ ವೇಳೆ ಸಂಗ್ವಾನ್ ನಿಷೇಧಿತ ಮದ್ದು ಸೇವಿಸಿದ್ದು ಸಾಬೀತಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಗ್ಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಪತ್ರ ಬರೆದಿದೆ. ಅವರ ದೇಹದಲ್ಲಿ ನಿಷೇಧಿತ ಮದ್ದಿನ ಅಂಶ ಇದ್ದದ್ದು `ಎ' ಸ್ಯಾಂಪಲ್ ಪರೀಕ್ಷೆಯಲ್ಲಿ ತಿಳಿದುಬಂದಿದೆ' ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅವರು ಸೇವಿಸಿದ್ದು ಕೇವಲ ನಿಷೇಧಿತ ಮದ್ದೇ ಅಥವಾ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಮದ್ದನ್ನು ಸೇವಿಸಿದ್ದಾರೆಯೇ ಎಂಬ ಪ್ರಶ್ನೆಗೆ, `ಅದನ್ನು `ಬಿ' ಸ್ಯಾಂಪಲ್ ಪರೀಕ್ಷೆಯ ಬಳಿಕವೇ ತಿಳಿಯಬಹುದು. ಸಾಮಾನ್ಯವಾಗಿ `ಎ' ಸ್ಯಾಂಪಲ್ ಪರೀಕ್ಷೆಯ ವರದಿಯಲ್ಲಿರುವ ಅಂಶವನ್ನೇ `ಬಿ' ಸ್ಯಾಂಪಲ್ ಪರೀಕ್ಷೆಯಲ್ಲೂ ಕಾಣಲು ಸಾಧ್ಯ. ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದವರ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳುತ್ತದೆ. ಆದರೆ ಸಂಗ್ವಾನ್ ಮೇಲೆ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ' ಎಂದು ಆ ಅಧಿಕಾರಿ ಉತ್ತರಿಸಿದ್ದಾರೆ.ಸಂಗ್ವಾನ್ 2008 ರಲ್ಲಿ ವಿಶ್ವಕಪ್ ಗೆದ್ದ ಭಾರತ 19 ವರ್ಷ ವಯಸ್ಸಿನೊಳಗಿನವರ ತಂಡದಲ್ಲಿದ್ದರು. ಹೋದ ಎರಡು ಋತುಗಳ ಐಪಿಎಲ್ ಟೂರ್ನಿಯಲ್ಲಿ ಅವರು ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆರನೇ ಋತುವಿನ ಟೂರ್ನಿಯಲ್ಲಿ ಕೇವಲ ಎರಡು ಪಂದ್ಯಗಳನ್ನಾಡಿದ್ದ ಅವರು ಯಾವುದೇ ವಿಕೆಟ್ ಪಡೆದಿಲ್ಲ.ಐಪಿಎಲ್ ವೇಳೆ ಭುಜದ ನೋವಿಗೆ ಒಳಗಾಗಿದ್ದ ಸಂಗ್ವಾನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮರುಚೈತನ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇದೀಗ ಅವರ ಶಸ್ತ್ರಚಿಕಿತ್ಸೆಗಾಗಿ ಇಂಗ್ಲೆಂಡ್‌ನಲ್ಲಿದ್ದಾರೆ.ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಅಥವಾ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೂ ತನ್ನದೇ ಆದ ಉದ್ದೀಪನ ಮದ್ದು ತಡೆ ಘಟಕವನ್ನು ಹೊಂದಿದೆ. ಐಸಿಸಿ ಟೂರ್ನಿಯಂತೆಯೇ ಐಪಿಎಲ್ ಟೂರ್ನಿಯ ಪಂದ್ಯಗಳ ಸಂದರ್ಭವೂ ಕೆಲವು ಆಟಗಾರರನ್ನು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಿಸಲಾಗುತ್ತದೆ.ಕ್ರಿಕೆಟ್‌ಗೆ ಇದು ಹೊಸತಲ್ಲ

ಉದ್ದೀಪನ ಮದ್ದು ಪ್ರಕರಣ ಐಪಿಎಲ್ ಟೂರ್ನಿ ಮತ್ತು ಕ್ರಿಕೆಟ್‌ಗೆ ಹೊಸತಲ್ಲ. 2008ರ ಋತುವಿನ ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಪಾಕಿಸ್ತಾನ ತಂಡದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು.ಅದೇ ರೀತಿ, ಮಾದಕ ದ್ರವ್ಯ ಹೊಂದಿದ್ದಾರೆ ಎಂಬ ಕಾರಣಕ್ಕೆ ದುಬೈನಲ್ಲಿ ಆಸಿಫ್ ಬಂಧನಕ್ಕೆ ಒಳಗಾಗಿದ್ದ ಘಟನೆಯೂ ಈ ಅವಧಿಯಲ್ಲಿ ನಡೆದಿತ್ತು.ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಹಲವು ಸಲ ಉದ್ದೀಪನ ಮದ್ದು ಪ್ರಕರಣ ನಡೆದಿದೆ. ಆಸ್ಟ್ರೇಲಿಯಾದ ವಿಶ್ವವಿಖ್ಯಾತ ಸ್ಪಿನ್ನರ್ ಶೇನ್ ವಾರ್ನ್ 2003ರ ಐಸಿಸಿ ವಿಶ್ವಕಪ್‌ಗೆ ಮುನ್ನ ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಈ ಕಾರಣ ಅವರು ಟೂರ್ನಿಯಲ್ಲಿ ಆಡಿರಲಿಲ್ಲ.2006ರಲ್ಲಿ ಭಾರತದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಮುನ್ನ ಪಾಕಿಸ್ತಾನದ ಶೋಯಬ್ ಅಖ್ತರ್ ಮತ್ತು ಆಸಿಫ್ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.