ಸೋಮವಾರ, ಜೂನ್ 21, 2021
21 °C
ಚಿತ್ರ: ಶಾದಿ ಕೆ ಸೈಡ್‌ ಎಫೆಕ್ಟ್ಸ್‌ (ಹಿಂದಿ)

ಸಿಕ್ಕುಗಳ ಕೊಲಾಜ್

-ವಿಶಾಖ ಎನ್. Updated:

ಅಕ್ಷರ ಗಾತ್ರ : | |

ನಿರ್ಮಾಣ: ಬಾಲಾಜಿ, ಮೋಷನ್ ಪಿಕ್ಚರ್ಸ್, ನಿದೇಶನ: ಸಾಕೇತ್ ಚೌಧರಿ, ತಾರಾಗಣ: ಫಹಾನ್ ಅಖ್ತರ್, ವಿದ್ಯಾ ಬಾಲನ್, ರಾಮ್‌ಕಪೂರ್, ಇಲಾ ಅರುಣ್ ಮತ್ತಿತರರು.ಎರಡು ದಶಕಗಳ ಹಿಂದೆ ಹಿಂದಿಯಲ್ಲೇ ‘ಅಖೇಲೆ ಹಮ್ ಅಖೇಲೆ ತುಮ್’ ಎಂಬ ಸಿನಿಮಾ ಬಂದಿತ್ತು. ಸಾಂಸಾರಿಕ ತಲ್ಲಣಗಳು ಹಾಗೂ ವೃತ್ತಿಬದುಕಿನ ಸಂಘರ್ಷದ ವಸ್ತುವಿನ ಚಿತ್ರ ಅದು. ಪ್ರೇಮಿಗಳು ಗಂಡ–ಹೆಂಡತಿ ಆಗುವುದು, ಆಮೇಲೆ ಮಗು ಹುಟ್ಟುವುದು, ಅದರ ಲಾಲನೆ ಪಾಲನೆಯ ಜರೂರಿನಿಂದಾಗಿ ವೃತ್ತಿಬದುಕಿನಲ್ಲಿ ಏರುಪೇರಾಗುವುದು, ಕೊನೆಗೆ ಅದು ದೊಡ್ಡ ಸಮಸ್ಯೆಯೊಂದು ಹುಟ್ಟಲು ಕಾರಣವಾಗುವುದು ಆ ಚಿತ್ರದ ಸಂಕ್ಷಿಪ್ತ ಸಾರಾಂಶ. ಸಿನಿಮಾ ಮಾಧ್ಯಮಕ್ಕೆ ಇದು ಹೊಸ ವಸ್ತುವೇನಲ್ಲ. ಸಾಕೇತ್ ಚೌಧರಿ ಅದೇ ವಸ್ತುವಿಗೆ ಈ ದಿನಮಾನದ ಪೋಷಾಕು ತೊಡಿಸಿ, ‘ಶಾದಿ ಕೆ ಸೈಡ್ ಎಫೆಕ್ಟ್ಸ್’ ಚಿತ್ರ ಮಾಡಿದ್ದಾರಷ್ಟೆ.

ಸಿನಿಮಾದ ನಾಯಕ–ನಾಯಕಿಗೆ ಹಳೆ ಕಾಲದಂಥ ಆರ್ಥಿಕ ತಾಪತ್ರಯಗಳಿಲ್ಲ. ಹಾಗಿದ್ದೂ ಇಬ್ಬರೂ ವೃತ್ತಿಬದುಕು ರೂಪಿಸಿಕೊಳ್ಳುವ ಹಾದಿಯಲ್ಲಿರುವವರು. ಊರೂರು, ದೇಶ-ವಿದೇಶ ಸುತ್ತುವುದು, ಅಲ್ಲಿ ಕ್ಲಬ್‌ಗಳಲ್ಲಿ ಅಪರಿಚಿತರಂತೆ ಭೇಟಿಯಾಗಿ ರಮಿಸುವುದು ಇಬ್ಬರೂ ಕಂಡುಕೊಂಡ ಪ್ರೇಮ ನವೀಕರಣದ ಮಾರ್ಗ. ಆಧುನಿಕ ಕಾಲದ, ರಮಿಸುವ ಇಂಥ ಆಟದ ಫಲವೂ ಮಗುವಿನ ಜನನವೇ ಹೌದು.ಹೆಣ್ಣು ಮಗುವಿನ ತಂದೆ–ತಾಯಿ ಆಗುವ ಹಂತದಿಂದ ನಾಯಕ ನಾಯಕಿಯ ಬದುಕಿನ ತಲ್ಲಣ ತಾಕಲಾಟಗಳು ಶುರುವಾಗುತ್ತವೆ. ಹೊಸ ತಲೆಮಾರಿನ ಮಂದಿ ಸಂಸಾರದ ಸಹಜ ಸುಖಗಳನ್ನೂ ಹೇಗೆ ಸಿಕ್ಕುಗಳಾಗಿಸಿದ್ದಾರೆ ಎಂಬು­ದಕ್ಕೆ ನಿರ್ದೇಶಕರು ಎತ್ತಿಕೊಂಡಿರುವ ಈ ವಸ್ತುವೇ ಸಾಕ್ಷಿ.ಮಗುವಿನ ಬೇಕು–ಬೇಡಗಳನ್ನು ಅರ್ಥ ಮಾಡಿಕೊಳ್ಳಲು ನಾಯಕನ ಹೆಣಗಾಟ, ಅವನ ಸಣ್ಣ ಪುಟ್ಟ ಸುಖಗಳಿಗೆ ಅಡ್ಡಗಾಲು ಹಾಕುವಂತಾಗುವ ನಾಯಕಿಯ ಸಹಜ ಕಕ್ಕುಲತೆ, ಖಾಸಗೀತನ/ಆರಾಮ ಕಂಡುಕೊಳ್ಳಲು ನಾಯಕ ಹುಡುಕಿಕೊಳ್ಳುವ ಹೋಟೆಲ್ ಕೋಣೆ/ ಪೇಯಿಂಗ್ ಗೆಸ್ಟ್ ವಾಸ್ತವ್ಯದ ದಾರಿ– ಇವೆಲ್ಲವೂ ಸಂಸಾರಸ್ಥರಾಗಿಯೂ ಆಧುನಿಕ ಮನಸ್ಸುಗಳು ಹೇಗೆಲ್ಲಾ ದಿಕ್ಕೆಟ್ಟಿವೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತವೆ.ಕಾಸ್ಮೊಪಾಲಿಟನ್ ನಗರದ ಸಾಂಸಾರಿಕ ಸಂವೇದನೆ, ವೇದನೆಗಳ ಈ ಚಿತ್ರವನ್ನು ನಿರ್ದೇಶಕರು ಲವಲವಿಕೆಯಿಂದ ಮಾಡಹೊರಟಿದ್ದಾರೆ. ನಗಿಸಬೇಕು, ಎಲ್ಲೂ ಬೋರ್ ಹೊಡೆಸಕೂಡದು, ತುಂಟತನ–ತರಲೆಗಳನ್ನು ಕೂಡ ಗಾಂಭೀರ್ಯದ ಪರಿಭಾಷೆಯಲ್ಲೇ ದಾಟಿಸಬೇಕು, ಇಷ್ಟೆಲ್ಲಾ ಉಮೇದು ಅವರಿಗೆ. ಹಾಗಾಗಿ ಚಿತ್ರದ ಶಿಲ್ಪ ಶಿಥಿಲವಾಗಿದೆ. ಭಾವನೆಗಳ ಮೊಹರನ್ನು ಅವರು ಢಾಳಾಗಿ ಒತ್ತಲು ಆಗಿಲ್ಲ. ಇಡೀ ಚಿತ್ರ ಜಾಹೀರಾತು ದೃಶ್ಯಗಳ ಕೊಲಾಜ್‌ನಂತೆ ಭಾಸವಾಗುತ್ತದೆ. ನಾಯಕ, ನಾಯಕಿಯ ಹೊಯ್ದಾಟ ಬರಬರುತ್ತಾ ಬೋಧನೆಯ ಸರಕಾಗಿಬಿಡುತ್ತದೆ.ನಾಯಕನ ಪಾತ್ರದಲ್ಲಿ ಫರ್‍್ಹಾನ್ ಅಖ್ತರ್ ಅವರದ್ದು ತಣ್ಣನೆಯ ಅಭಿನಯ. ಬಾಲಿವುಡ್ ನಾಯಕಿಯ ಅನಾಟಮಿಯನ್ನು ಸಂಪೂರ್ಣವಾಗಿ ಮೀರಿದಂತೆ ದೇಹ ಬೆಳೆದಿದ್ದರೂ ವಿದ್ಯಾ ಬಾಲನ್‌ ಮುಖಭಾವ, ದೇಹಭಾಷೆ, ಅಭಿನಯ ಕೌಶಲದಲ್ಲಿ ಹರೆಯದ ಪಸೆ ಇದೆ. ಹಾಡುಗಳಿಗೆ ಕಾಡುವ ಗುಣವಿಲ್ಲ.ನಗರ ನಾಗರಿಕರ ಕೈಗೆ ಅವಕಾಶಗಳು ಸುಲಭವಾಗಿ ಎಟುಕುತ್ತಿರುವುದರಿಂದಲೋ ಏನೋ ಸಮಸ್ಯೆಗಳಿಗೆ ಮುಖಮಾಡುವುದರಲ್ಲೂ ಒಂದು ಉಡಾಫೆ ಇದೆ- ಎಂಬ ಒಳನೋಟವನ್ನು ಕಾಣಿಸುವುದು ಚಿತ್ರದ ಅಗ್ಗಳಿಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.