ಬುಧವಾರ, ಜೂನ್ 23, 2021
29 °C

ಸಿಕ್ಸ್‌ಪ್ಯಾಕ್‌ನಲ್ಲಿ ರಾಣಾ ದಗ್ಗುಬಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಕ್ಸ್‌ಪ್ಯಾಕ್‌ನಲ್ಲಿ ರಾಣಾ ದಗ್ಗುಬಾಟಿ

ಅತಿ ಎತ್ತರದ ನಿಲುವು. ಕೆನ್ನೆ ಮೇಲಿರುವ ಕುರುಚಲು ಗಡ್ಡ, ಹುರಿಗಟ್ಟಿದ ಮೈಕಟ್ಟು ಈತನ ವ್ಯಕ್ತಿತ್ವಕ್ಕೊಂದು ಹೊಸ ಮೆರುಗು ತಂದುಕೊಟ್ಟಿದೆ. ಮೊನ್ನೆವರೆಗೂ ಜಾನ್ ಅಬ್ರಹಾಂ ಸುತ್ತ ಸುತ್ತಿಕೊಳ್ಳುತ್ತಿದ್ದ ಹುಡುಗಿಯರು ಈಗ ಈತನತ್ತಲೂ ಕಣ್ಣು ಹಾಯಿಸುತ್ತಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈನ ಮಾಲ್‌ಗಳಲ್ಲಿ ಈತ ಕಾಲಿಟ್ಟರೆ ಸಾಕು ಹುಡುಗಿಯರು ಜೇನ್ನೊಣಗಳಂತೆ ಮುತ್ತಿಕೊಳ್ಳುತ್ತಿದ್ದಾರೆ. ಅಂದಹಾಗೆ ಈತನ ಹೆಸರು ರಾಣಾ ದಗ್ಗುಬಾಟಿ. ಎಲ್ಲರೂ ಈತನನ್ನು ಪ್ರೀತಿಯಿಂದ ರಾಣಾ ಎನ್ನುತ್ತಾರೆ.

ರಾಮ್‌ಗೋಪಾಲ್ ವರ್ಮಾ ನಿರ್ದೇಶನದ `ಡಿಪಾರ್ಟ್‌ಮೆಂಟ್~ ಸಿನಿಮಾಕ್ಕಾಗಿ ರಾಣಾ ತನ್ನ ಮೈಯನ್ನು ಮತ್ತಷ್ಟು ಹುರಿಗೊಳಿಸಿಕೊಂಡಿದ್ದಾರೆ. ಡಿಪಾರ್ಟ್‌ಮೆಂಟ್ ಸಿನಿಮಾದ ಸ್ಟಿಲ್‌ಗಳನ್ನು ನೋಡಿ, `ನೀನು ಸಿಕ್ಸ್‌ಪ್ಯಾಕ್‌ನಲ್ಲಿ ಮತ್ತಷ್ಟು ಸೆಕ್ಸಿಯಾಗಿ ಕಾಣ್ತಿಯಾ~ ಅಂತ ಆತನ ಆಪ್ತರು, ಅಭಿಮಾನಿಗಳೆಲ್ಲಾ ಟ್ವೀಟ್ ಮಾಡುತ್ತಿದ್ದಾರಂತೆ. ಅಮಿತಾಬ್ ಬಚ್ಚನ್, ಸಂಜಯ್ ದತ್, ವಿಜಯ್ ರಾಜ್, ಅಭಿಮನ್ಯು ಸಿಂಗ್, ಲಕ್ಷ್ಮಿ ಮಂಚು ಹಾಗೂ ಮಧು ಶಾಲಿನಿ ಮೊದಲಾದ ಬಹು ತಾರಾಗಣವಿರುವ ಡಿಪಾರ್ಟ್‌ಮೆಂಟ್ ಸಿನಿಮಾದಲ್ಲಿ ರಾಣಾ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜಯ್ ದತ್ ಎನ್‌ಕೌಂಟರ್ ಸ್ಕ್ವಾಡ್‌ನ ಲೀಡರ್.

ಖಾಕಿ ತೊಟ್ಟ ಮೇಲೆ ಅದಕ್ಕೆ ತಕ್ಕಂತಹ ಫಿಟ್‌ನೆಸ್ ಬೇಕು ಅಂತ ಅನಿಸಿದ್ದರಿಂದ ರಾಣಾ ಜಿಮ್‌ನಲ್ಲಿ ಗಂಟೆಗಟ್ಟಲೆ ದೇಹ ದಂಡಿಸಿ ಅದಕ್ಕೊಂದು ಸುಂದರ ರೂಪು ನೀಡಿದ್ದಾರೆ. ರಾಣಾ ಈಗ ತಮ್ಮ ಮುಷ್ಟಿಯನ್ನು ಒಮ್ಮೆ ಬಿಗಿ ಹಿಡಿದರೆ ಸಾಕು ಮೈಯಲ್ಲಿನ ನರಗೆಳೆಲ್ಲಾ ಎದ್ದು ಕಾಣುತ್ತವೆ. ಅಂತೂ `ಡಿಪಾರ್ಟ್‌ಮೆಂಟ್~ನಲ್ಲಿ ರಾಣಾ ಸಖತ್ ಆ್ಯಕ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ ರಾಣಾ ಸಿನಿಮಾ ಹಿನ್ನೆಲೆ ಉತ್ತಮವಾಗಿದೆ. ಈತ ತೆಲುಗಿನ ಖ್ಯಾತ ನಿರ್ಮಾಪಕ ಡಿ.ಸುರೇಶ್ ಬಾಬು ಪುತ್ರ. ಜತೆಗೆ ವಿಕ್ಟರಿ ವೆಂಕಟೇಶ್ ಹಾಗೂ ನಾಗಾರ್ಜುನ ಅಕ್ಕಿನೇನಿಯವರ ಸೋದರಳಿಯ. ರಾಣಾ ತೆಲುಗಿನ `ಲೀಡರ್~ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಶೇಖರ್ ಕಮ್ಮುಲ ನಿರ್ದೇಶಿಸಿದ್ದ ಈ ಚಿತ್ರ ಈತನಿಗೆ ಒಂದು ಒಳ್ಳೆ ಬ್ರೇಕ್ ನೀಡಿತು. ರಾಣಾ ನಿರ್ಮಿಸಿದ್ದ `ಬೊಮ್ಮಲಾಟ- ಎ ಬೆಲ್ಲಿ ಫುಲ್ ಆಫ್ ಡ್ರೀಮ್ಸ~ ಚಿತ್ರಕ್ಕೆ ಅತ್ಯುತ್ತಮ ಫೀಚರ್ ಸಿನಿಮಾ ಪ್ರಶಸ್ತಿ ಕೂಡ ಲಭಿಸಿತ್ತು. 

ರಾಣಾ ದೇಹಭಾಷೆ, ಕುಪಿತ ಯುವಕನ ನೋಟ, ದಾಳಿಇಡುವಂಥ ನಿಲುವು ಎಲ್ಲವೂ ಪ್ಲಸ್‌ಪಾಯಿಂಟ್‌ಗಳು. ಹೀಗಾಗಿಯೇ ರಾಣಾ ಟಿ-ಟೌನ್‌ನಿಂದ ಬಿ-ಟೌನ್‌ಗೆ ಪ್ರಯಾಣ ಬೆಳೆಸಿದ್ದು. ಈತ ಹಿಂದಿಯಲ್ಲಿ ನಟಿಸಿದ ಪ್ರಥಮ ಚಿತ್ರ `ದಮ್ ಮಾರೋ ದಮ್~. ಅದರಲ್ಲಿ ಈತನ ನಟನೆಗೆ ಒಳ್ಳೆ ಅಭಿಪ್ರಾಯ ಕೇಳಿಬಂದಿತ್ತು. ಹಾಗಾಗಿಯೇ ರಾಮ್‌ಗೋಪಾಲ್ ವರ್ಮಾ ಅವರ ಆ್ಯಕ್ಷನ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು.

ಈಗ ಅಂತರರಾಷ್ಟ್ರೀಯ ಪ್ರಾಜೆಕ್ಟ್ ಒಂದರಲ್ಲಿ ಕೆಲಸ ಮಾಡುವ ಅವಕಾಶವೂ ಅರಸಿ ಬಂದಿದೆ. ಆದಿತ್ಯ ಭಟ್ಟಾಚಾರ್ಯ ನಿರ್ದೇಶನದ, ಅಮೀರ್ ಖಾನ್ ನಟಿಸಿದ್ದ `ರಾಖ್~ ಚಿತ್ರವನ್ನು ಆಧರಿಸಿದ ಅಂತರರಾಷ್ಟ್ರೀಯ ಚಿತ್ರವಾಗಿದೆ.

ಆದಿತ್ಯ ಅವರೊಂದಿಗೆ ಕೆಲಸ ಮಾಡುವ ಅವಕಾಶ ಇಷ್ಟು ಬೇಗನೆ ದೊರೆತಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳುವ ರಾಣಾ ಬಗ್ಗೆ ಆದಿತ್ಯ ಸಹ ಗುಣಗಾನ ಮಾಡಿದ್ದಾರೆ.

ಈ ಪಾತ್ರಕ್ಕೆ ರಾಣಾ ಜೀವ ತುಂಬಬಹುದು ಎನಿಸಿತ್ತು. ಆದರೆ ಈಗ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಉಳಿದ ಪಾತ್ರಗಳ ಬಗ್ಗೆ ಇನ್ನೂ ಯಾವ ವಿವರಗಳನ್ನೂ ನೀಡಿಲ್ಲ. ಆದರೆ ಹಾಲಿವುಡ್‌ನ ಎ-ಲಿಸ್ಟರ್‌ನಲ್ಲಿರುವ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಮಾತ್ರ ಆದಿತ್ಯ ಹೇಳಿದ್ದಾರೆ.

ರಾಣಾ ಎದೆಯಗಲ ಈ ಪ್ರೊಜೆಕ್ಟ್‌ನಿಂದಾಗಿ ಇನ್ನೊಂದೆರಡು ಅಂಗುಲ ಹೆಚ್ಚಿದೆಯಂತೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.