ಸೋಮವಾರ, ಮೇ 17, 2021
21 °C

ಸಿಖ್-ಅಮೆರಿಕನ್ ಪ್ರಜೆಗಳ ಮೇಲೆ ದಾಳಿ : ದಾಖಲೆ ಪರಿಶೀಲಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್(ಪಿಟಿಐ): ಅಮೆರಿಕದಲ್ಲಿರುವ ಸಿಖ್ ಸಮುದಾಯದವರ ವಿರುದ್ಧ ನಡೆದಿರುವ ಜನಾಂಗೀಯ ದ್ವೇಷದ ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಬೇಕು ಎಂದು ಅಮೆರಿಕದ 92 ಜನಪ್ರತಿನಿಧಿಗಳು ತನಿಖಾ ಸಂಸ್ಥೆ ಎಫ್‌ಬಿಐಗೆ ಮನವಿ ಮಾಡಿದ್ದಾರೆ.`ಸಿಖ್-ಅಮೆರಿಕನ್ ಪ್ರಜೆಗಳ ಮೇಲೆ ನಡೆದಿರುವ ದಾಳಿ ಪ್ರಕರಣಗಳ ಕುರಿತ ಹೆಚ್ಚಿನ ಮಾಹಿತಿಗಳು ತನಿಖಾ ಸಂಸ್ಥೆಗಳ ಬಳಿ ಇದ್ದರೆ ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಬಹುದು ಮತ್ತು ಸಂತ್ರಸ್ತರಿಗೆ ನ್ಯಾಯವನ್ನೂ ಒದಗಿಸಬಹುದು~ ಎಂದು ಎಫ್‌ಬಿಐಗೆ  ಬರೆದ ಪತ್ರದಲ್ಲಿ  ಜನಪ್ರತಿನಿಧಿಗಳು ಹೇಳಿದ್ದಾರೆ.`ಇಂತಹ ಅಪರಾಧಿ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆ ಮತ್ತು ಎಫ್‌ಬಿಐ, ಸಿಖ್ ಸಮುದಾಯದ ಜತೆ ಸೇರಿ ಕೆಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಆದರೆ ಸಿಖ್ ಸಮುದಾಯದ ವಿರುದ್ಧ ನಡೆಯುತ್ತಿರುವ ಜನಾಂಗೀಯ ಹಲ್ಲೆಗಳನ್ನು ಹತ್ತಿಕ್ಕಲು ಕೈಗೊಳ್ಳುತ್ತಿರುವ ಕ್ರಮಗಳನ್ನು ದೃಢಪಡಿಸಲು ನಡೆದಿರುವ ಪ್ರಕರಣಗಳ ದಾಖಲೆಗಳನ್ನೂ ಎಫ್‌ಬಿಐ ಸಂಗ್ರಹಿಸಬೇಕು~ ಎಂದು ಪತ್ರದಲ್ಲಿ ಹೇಳಲಾಗಿದೆ.ಸಿಖ್ಖರು ಹೊಂದಿರುವ ವಿಭಿನ್ನ ಚಹರೆ(ಗುರುತು) ಮತ್ತು ಅವರ ವಿಭಿನ್ನ ವೇಷಭೂಷಣಗಳಿಂದಾಗಿ ಸಾಮಾನ್ಯವಾಗಿ  ಅಮೆರಿಕದಲ್ಲಿ ಅವರು ಜನಾಂಗೀಯ ದ್ವೇಷಕ್ಕೆ ಗುರಿಯಾಗುತ್ತಿದ್ದಾರೆ ಎಂದು  ಅಮೆರಿಕದ ಜನಪ್ರತಿನಿಧಿಗಳ ಸಭೆಯ ಉಪ ಮುಖ್ಯ ಸಚೇತಕ ಜೋಸೆಫ್ ಕ್ರೌಲಿ   ನೇತೃತ್ವದ ಜನಪ್ರತಿನಿಧಿಗಳ ತಂಡ ಪತ್ರದಲ್ಲಿ ಹೇಳಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.