ಬುಧವಾರ, ಜೂನ್ 23, 2021
24 °C

ಸಿಗದ ನಕ್ಸಲೀಯರ ಸುಳಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು:  ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ ಸಮೀಪದ ಕೃಷ್ಣಗಿರಿ ತಪ್ಪಲಲ್ಲಿ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದು ಮೂರು ದಿನಗಳಾದರೂ, ರಾಜ್ಯ ಪೊಲೀಸರಿಗೆ ನಕ್ಸಲೀಯರ ಬಗ್ಗೆ ಯಾವುದೇ ಮಹತ್ವದಸುಳಿವು ದೊರಕಿಲ್ಲ.

ನಕ್ಸಲರ ರಾಜ್ಯ ಮಟ್ಟದ ಸಮಾವೇಶ ಮಾರ್ಚ್ 3 ರಿಂದ 6ರವರೆಗೆ ನಡೆದಿದ್ದು, ತಮ್ಮ ಚಟುವಟಿಕೆಯಲ್ಲಿ ಪರಿಸರದ ಯುವಕರನ್ನು ಸೇರಿಸಿ ತರಬೇತಿಗೆ ಅಣಿಗೊಳಿಸಲು ತಂಡವೊಂದು ಬೀಡುಬಿಟ್ಟ ಬಗ್ಗೆ ನಂಬಲರ್ಹ ಮೂಲಗಳು ಮಾಹಿತಿ ನೀಡಿವೆ. ಆದರೆ ಶನಿವಾರದ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆಯಿಂದಾಗಿ ನಕ್ಸಲೀಯರ ಯೋಜನೆಗಳು ಕಾರ್ಯಗತಗೊಂಡಿಲ್ಲ ಎನ್ನಲಾಗಿದೆ.

ಈ ಬಗ್ಗೆ `ಪ್ರಜಾವಾಣಿ~ ಜತೆ ಪ್ರತಿಕ್ರಿಯಿಸಿದ ಎಎನ್‌ಎಫ್ ಐಜಿ ಅಲೋಕ್ ಕುಮಾರ್ ಅವರು ನಕ್ಸಲರ ಸಮಾವೇಶ ನಡೆದಿರುವ ಸಾಧ್ಯತೆ ತಳ್ಳಿಹಾಕಿದರೂ, ತರಬೇತಿ ಶಿಬಿರ ನಡೆದಿರುವ ಸಾಧ್ಯತೆ ಬಲವಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.

ಸ್ಥಳದಿಂದ ವಶಕ್ಕೆ ಪಡೆದಿರುವ ವಸ್ತುಗಳು ತರಬೇತಿ ಶಿಬಿರ ನಡೆದಿರುವ ಸಾಧ್ಯತೆಯನ್ನು ಸೂಚಿಸುತ್ತದೆ ವಿನಃ ಸಮಾವೇಶವನ್ನಲ್ಲ. ಹೊಸದಾಗಿ ನಕ್ಸಲ್‌ವಾದದತ್ತ ಆಕರ್ಷಿತರಾಗಿರುವರಲ್ಲಿ ಆ ಕುರಿತು ಅರಿವು ಮೂಡಿಸಲು ಆಂಧ್ರಪ್ರದೇಶ, ಕೇರಳದಿಂದ ನಕ್ಸಲ್ ನಾಯಕರು ಬಂದಿರುವ ಸಾಧ್ಯತೆಯಿದೆ ಎಂದರು. ಉರ್ದ್ಯಾರು ಜಲಪಾತ ಬಳಿಯ ಘಟನಾ ಸ್ಥಳದಿಂದ ವಶಪಡಿಸಿಕೊಂಡಿರುವ ಸಾಹಿತ್ಯವು, ಶಸ್ತ್ರಾಸ್ತ್ರಗಳು, ತರಬೇತಿಯ ಸಾಧ್ಯತೆ ಸೂಚಿಸುತ್ತವೆಯೇ ಹೊರತು ದೊಡ್ಡ ದಾಳಿಯ ಸಂಚನ್ನಲ್ಲ~ ಎಂದು ತರ್ಕಿಸಿದರು.

ನಕ್ಸಲ್ ನಿಗ್ರಹಪಡೆ ಸಿಬ್ಬಂದಿ ಪರಿಸರದ ಮನೆ-ಮನೆಗಳಲ್ಲಿ ಸೋಮವಾರ ತೀವ್ರ ಶೋಧ ನಡೆಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಇವರಲ್ಲಿ ಕೆಲವರು ಬಾಯಿಬಿಡಲು ಹಿಂದೇಟು ಹಾಕಿದರೂ, ಮತ್ತೆ ಕೆಲವರು, ದಟ್ಟಾರಣ್ಯದಲ್ಲಿ ತಾವು ಕೆಲವರನ್ನು ಕಂಡಿದ್ದು, ಅವರು ಅರಣ್ಯ ಸಿಬ್ಬಂದಿ ಇರಬಹುದು ಎಂದು ಭಾವಿಸಿದ್ದಾಗಿ  ತಿಳಿಸಿದರು.

ಎಸ್‌ಎಸ್‌ಆರ್ ಮದ್ದುಗುಂಡುಗಳಲ್ಲಿ `ಚೀನಾ ತಯಾರಿತ~ ಎಂದು ನಮೂದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದನ್ನು ನಿರಾಕರಿಸಿದ ಐ.ಜಿ. ಅವರು, ಸ್ವಯಂಚಾಲಿತ ಪಿಸ್ತೂಲು ಅಮೆರಿಕ ನಿರ್ಮಿತವಾಗಿದ್ದು, ಇತರ ಶಸ್ತಾಸ್ತ್ರಗಳು ಎಲ್ಲಿ ತಯಾರಾಗಿವೆ ಎಂಬುದು ಇನ್ನೂ ಖಚಿತವಾಗಬೇಕಿದೆ ಎಂದರು. ಇವೆಲ್ಲ ಆಯುಧಗಳು ಒಂದೇ ಕಡೆಯಿಂದ ಸರಬರಾಜಾಗಿರುವ ಸಾಧ್ಯತೆಯಿದೆ. ತನಿಖಾ ತಂಡ ಇವೆಲ್ಲದರ ಬಗ್ಗೆ ವಿವರ ಪಡೆಯಲಿದೆ ಎಂದರು.

ಆದರೆ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳು, ಇಡೀ ಪ್ರಕರಣದಲ್ಲಿ ಅಂತರ ಕಾಪಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಎ.ಎನ್.ಎಫ್. ಸಿಬ್ಬಂದಿ ಕಷ್ಟಪಟ್ಟರೂ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪಶ್ಚಿಮ ವಲಯ ಐ.ಜಿ. ಇನ್ನೂ ಘಟನಾ ಸ್ಥಳಕ್ಕೆ ಭೇಟಿ ನೀಡದಿರುವುದು ಅಚ್ಚರಿ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.