ಸಿಗದ ಪ್ರಧಾನಿ ಭೇಟಿ: ಶೆಟ್ಟರ್ ಬೇಸರ

7

ಸಿಗದ ಪ್ರಧಾನಿ ಭೇಟಿ: ಶೆಟ್ಟರ್ ಬೇಸರ

Published:
Updated:

ನವದೆಹಲಿ: ಪ್ರಧಾನಿ ಭೇಟಿಗೆ ಅವಕಾಶ ಪಡೆಯಲು ವಿಫಲರಾದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಬಿಡಬೇಕೆಂಬ ಸೆ.19ರ `ಕಾವೇರಿ ನದಿ ಪ್ರಾಧಿಕಾರ~ದ (ಸಿಆರ್‌ಎ) ನಿರ್ದೇಶನವನ್ನು ತಕ್ಷಣ ಮರು ಪರಿಶೀಲಿಸುವಂತೆ ಮನವಿ ಮಾಡಿ ಸೋಮವಾರ ಪತ್ರ ಬರೆದಿದ್ದಾರೆ. ಡಿಎಂಕೆ ಮುಖಂಡ ಎಂ.ಕರುಣಾನಿಧಿ ಸಂದೇಶ ತಂದಿದ್ದ ಮಾಜಿ ಸಚಿವ ಟಿ.ಆರ್.ಬಾಲು ಸಂಜೆ ಮನಮೋಹನ್‌ಸಿಂಗ್ ಅವರನ್ನು ಕಂಡು ಮಾತುಕತೆ ನಡೆಸಿದ್ದಾರೆ.ಕರ್ನಾಟಕ ಹಾಗೂ ತಮಿಳುನಾಡು ನಡುವೆ ಉಲ್ಬಣಗೊಂಡಿರುವ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ದೆಹಲಿಯಲ್ಲಿ ತಂಗಿದ್ದ ಮುಖ್ಯಮಂತ್ರಿ ಸೋಮವಾರ ಸಂಜೆಯೇ ಪ್ರಧಾನಿ ಭೇಟಿಗೆ ಸಮಯ ಕೇಳಿದರು. `ಸಿಆರ್‌ಎ~ ಅಧ್ಯಕ್ಷರೂ ಆಗಿರುವ ಪ್ರಧಾನಿಯನ್ನು ಖುದ್ದು ಭೇಟಿ ಮಾಡಿ ಸಿಆರ್‌ಎನಿರ್ದೇಶನ ತಕ್ಷಣ ಪುನರ್ ಪರಿಶೀಲಿಸುವಂತೆ ಒತ್ತಡ ಹಾಕಲು ಬಯಸಿದ್ದರು. ಆದರೆ, ಮಂಗಳವಾರ ಮಧ್ಯಾಹ್ನದ ವರೆಗೆ ಕಾದರೂ ಕಾಲಾವಕಾಶ ಸಿಗಲಿಲ್ಲ.ಪ್ರಧಾನಿ ಭೇಟಿಗೆ ಅವಕಾಶ ಸಿಗದಿದ್ದರಿಂದ ಬೇಸರಗೊಂಡ ಮುಖ್ಯಮಂತ್ರಿ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಸಚಿವರಾದ ಸುರೇಶ್ ಕುಮಾರ್ ಹಾಗೂ ಬಸವರಾಜ ಬೊಮ್ಮಾಯಿ ಜತೆ ಬೆಂಗಳೂರಿಗೆ ಹಿಂತಿರುಗಿದರು. `ಪ್ರಧಾನಿ ಭೇಟಿಗೆ ಸಮಯ ಕೇಳಲಾಗಿತ್ತು. ಅವಕಾಶ ಸಿಗಲಿಲ್ಲ. ಪ್ರಮುಖ ಕಾರ್ಯಕ್ರಮಗಳು ಇರುವುದರಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದೇನೆ~ ಎಂದು ಶೆಟ್ಟರ್ ಪತ್ರಕರ್ತರಿಗೆ ತಿಳಿಸಿದರು.ಮೊರೆ: ಕರ್ನಾಟಕ ಸೆ. 20ರಂದು ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ಮೇಲೆ ತಕ್ಷಣ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿದಿರುವ ನೀರಿನ ಒಟ್ಟು ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಂಡು ಸೆ. 19ರಂದು ನೀಡಿರುವ ನಿರ್ದೇಶನಕ್ಕೆ ತಡೆ ನೀಡಬೇಕೆಂದು ಮುಖ್ಯಮಂತ್ರಿಗಳು ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.`ರಾಜ್ಯದ ಪುನರ್‌ಪರಿಶೀಲನಾ ಅರ್ಜಿ ಮೇಲೆ ಅಂತಿಮ ನಿರ್ಣಯ ಕೈಗೊಳ್ಳಲು, 28ರಂದು ಸಿಆರ್‌ಎ ನಿರ್ದೇಶನ ಪಾಲಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿದ ಆದೇಶ ಅಡ್ಡಿ ಬರುವುದಿಲ್ಲ. ಸ್ವತಃ ನ್ಯಾಯಪೀಠ ಅ.8ರಂದು ಇದನ್ನು ಸ್ಪಷ್ಟಪಡಿಸಿದೆ. ಈ ಅರ್ಜಿ ಮೇಲೆ ಸಿಆರ್‌ಎ ಅಧ್ಯಕ್ಷರು ಏನಾದರೂ ತೀರ್ಮಾನ ಮಾಡಬಹುದೆಂಬ ಕರ್ನಾಟಕದ ನಿರೀಕ್ಷೆಯಿಂದಾಗಿ ವಿಚಾರಣೆಯನ್ನು ಅ.12ಕ್ಕೆ ಮುಂದೂಡಲಾಗಿದೆ~ ಎಂದು ಶೆಟ್ಟರ್ ಪತ್ರದಲ್ಲಿ ವಿವರಿಸಿದ್ದಾರೆ.`ಕಾವೇರಿ ಕೊಳ್ಳದ ಜಲಾಶಯಗಳಿಂದ ಇನ್ನು ನೀರು ಬಿಡುವುದು ಅಸಾಧ್ಯ. ನಿತ್ಯ 9000 ಕ್ಯೂಸೆಕ್ ನೀರು ಬಿಡಬೇಕೆಂದು ಸಿಆರ್‌ಎ ನಿರ್ದೇಶನ ನೀಡಿದೆ. ಆದರೆ, ಪಕ್ಕದ ರಾಜ್ಯಕ್ಕೆ 13ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಹರಿದು ಹೋಗಿದೆ. ನಮ್ಮ ಜಲಾಶಯಗಳಲ್ಲಿ ಬಿಡಲು ನೀರಿಲ್ಲ. ಈ ಸಂಗತಿಯನ್ನು ನಾರಿಮನ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ~ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.`ರಾಜ್ಯದ ಜನರ ಸಿಟ್ಟು-ಆಕ್ರೋಶ, ಚಳವಳಿ ನಡುವೆ ಸಿಆರ್‌ಎ ಆದೇಶ ಪಾಲನೆ ಮಾಡಲಾಗಿದೆ. ನಮ್ಮ ಜಲಾಶಯಗಳಲ್ಲಿ ಸಂಗ್ರಹ ಕಡಿಮೆಯಾಗುತ್ತಿದೆ. ಒಳ ಹರಿವು ತಗ್ಗಿದೆ. ಇದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು ರಾಜ್ಯದ ಕುಡಿಯುವ ಹಾಗೂ ಕೃಷಿ ಅಗತ್ಯ ಪೂರೈಸುವುದು ಕಷ್ಟವಾಗುತ್ತಿದೆ. ಕಾವೇರಿ ತೀರದ ಜನರ ಬದುಕು ಅತೀ ಕಠಿಣವಾಗಿದೆ~ ಎಂದು ವಿವರಿಸಿದ್ದಾರೆ.ನಾಯ್ಡು ಬುದ್ಧಿವಾದ: ಪ್ರಧಾನಿಗೆ ಮುಖ್ಯಮಂತ್ರಿ ಪತ್ರ ಬರೆಯುವ ಮೊದಲು ಹಿರಿಯ ವಕೀಲ ನಾರಿಮನ್ ಜತೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ವಕೀಲರಾದ ಮೋಹನ್ ಕಾತರಕಿ ಹಾಜರಿದ್ದರು.ಅನಂತರ ಬಿಜೆಪಿ ಸಂಸದರ ಸಭೆ ಕರೆದು ಚರ್ಚಿಸಿದರು. ಪ್ರಧಾನಿ ಭೇಟಿಗೆ ಅವಕಾಶ ದೊರೆಯದಿದ್ದರಿಂದ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ವರ್ತನೆ ಪ್ರತಿಭಟಿಸಿ ಅವರ ಮನೆ ಮುಂದೆ ಧರಣಿ ನಡೆಸಬೇಕೆಂಬ ಸಲಹೆಯನ್ನು ಕೆಲವು ಮುಖಂಡರು ನೀಡಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಆದರೆ, ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು ವಿರೋಧ ವ್ಯಕ್ತಪಡಿಸಿದರು.`ರಾಜಕೀಯ ದೃಷ್ಟಿಯಿಂದ ಸಮಸ್ಯೆಯನ್ನು ನೋಡದೆ ರಾಜ್ಯದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು~ ಎಂದು ಕಿವಿ ಮಾತು ಹೇಳಿದರು ಎನ್ನಲಾಗಿದೆ.ಡಿಎಂಕೆ ಒತ್ತಾಯ: ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ, ಮಂಗಳವಾರ ಡಿಎಂಕೆ ಸಂಸದ ಟಿ.ಆರ್.ಬಾಲು ಜತೆ ಚರ್ಚಿಸಿದರು. ಈ ಸಂದರ್ಭದಲ್ಲಿ ಬಾಲು~ ಕಾವೇರಿ ಕೊಳ್ಳದ ಜಲಾಶಯಗಳನ್ನು ಬಂದ್ ಮಾಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಸಿಆರ್‌ಎ ನಿರ್ದೇಶನ ಪಾಲಿಸಲು ಕರ್ನಾಟಕಕ್ಕೆ ಸೂಚಿಸುವಂತೆ ಒತ್ತಾಯ ಮಾಡಿದರು.

`ಸುಪ್ರೀಂ~ನಲ್ಲಿ ತಮಿಳುನಾಡು ನ್ಯಾಯಾಂಗ ನಿಂದನೆ ಅರ್ಜಿ

ಚೆನ್ನೈ (ಪಿಟಿಐ): ತನ್ನ ಜಲಾಶಯಗಳಿಂದ ಕಾವೇರಿ ನದಿಗೆ ನೀರಿನ ಹರಿವು ನಿಲ್ಲಿಸಿರುವ ಕರ್ನಾಟಕದ ವಿರುದ್ಧ ತಕ್ಷಣವೇ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತಮಿಳುನಾಡು ಸರ್ಕಾರ ತೀರ್ಮಾನಿಸಿದೆ.`ಕರ್ನಾಟಕದ ಕ್ರಮವು ರಾಷ್ಟ್ರದ ಒಕ್ಕೂಟ ತತ್ವಕ್ಕೆ ಧಕ್ಕೆ ಎಸಗುವಂತಿದೆ~ ಎಂಬುದನ್ನೇ ಮುಖ್ಯ ಆರೋಪವನ್ನಾಗಿ ತೋರಿಸಲು ಕೂಡ ಸರ್ಕಾರ ನಿರ್ಧರಿಸಿದೆ.ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಜೆ.ಜಯಲಲಿತಾ, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸೂಚಿಸಿದರು.ರಾಷ್ಟ್ರಪತಿ ಆಳ್ವಿಕೆ- ಡಿಎಂಕೆ ಒತ್ತಾಯ: ಈ ಮಧ್ಯೆ, ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರು ಕರ್ನಾಟಕದಲ್ಲಿ 356ನೇ ಕಲಂ ಜಾರಿಗೊಳಿಸಬೇಕು ಎಂದು ಪ್ರಧಾನಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.`ಅಂತರ ರಾಜ್ಯ ವಿಷಯಗಳ ಬಗ್ಗೆ ಕಲ್ಲು ಹೃದಯ ಹೊಂದಿರುವ ಆಡಳಿತಕ್ಕೆ ಪಾಠ ಕಲಿಸಲು ರಾಷ್ಟ್ರಪತಿ ಆಡಳಿತ ಹೇರಬೇಕು~ ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry