ಮಂಗಳವಾರ, ಮೇ 18, 2021
22 °C

`ಸಿಗರೇಟ್ ನಿಷೇಧಕ್ಕೆ ಸರ್ಕಾರ ಬದ್ಧ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಿಗರೇಟ್ ನಿಷೇಧಕ್ಕೆ ಸರ್ಕಾರ ಬದ್ಧ'

ಬೆಂಗಳೂರು: `ಸಿಗರೇಟ್ ನಿಷೇಧಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ' ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಈಚೆಗೆ ನಡೆದ `ಗುಟ್ಕಾ ತ್ಯಜಿಸಿದವರಿಗೆ ವಿಶೇಷ ಕಾರ್ಯಾಗಾರ' ಶಿಬಿರದಲ್ಲಿ ಅವರು ಮಾತನಾಡಿದರು.`ಸುಪ್ರೀಂ ಕೋರ್ಟ್ ಗುಟ್ಕಾವನ್ನು ನಿಷೇಧಿಸಬೇಕೆಂದು ಆದೇಶವನ್ನು ಹೊರಡಿಸಿತ್ತು. ಹೀಗಾಗಿ ಗುಟ್ಕಾ ನಿಷೇಧಿಸಲು ಯಾವುದೇ ಕಾನೂನಾತ್ಮಕ ತೊಡಕುಗಳಿರಲಿಲ್ಲ. ಇದರಿಂದ ರಾಜ್ಯದಲ್ಲಿ ಗುಟ್ಕಾವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ' ಎಂದರು.`ಗುಟ್ಕಾದಂತೆಯೇ ಸಿಗರೇಟ್ ಅನ್ನು ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ಅಥವಾ ಕೇಂದ್ರ ಸರ್ಕಾರ ಆದೇಶ ಹೊರಡಿಸಿದರೆ, ಇಂದೇ ಸಿಗರೇಟ್ ಅನ್ನು ನಿಷೇಧಿಸಲಾಗುವುದು' ಎಂದರು.`ರಾಜ್ಯವನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ಮಾದರಿ ರಾಜ್ಯವನ್ನಾಗಿ ಮಾಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಈಗಾಗಲೇ ಗುಟ್ಕಾವನ್ನು ನಿಷೇಧಿಸಲಾಗಿದೆ. ಗುಟ್ಕಾ ದುಶ್ಚಟವನ್ನು ಸುಮಾರು ವರ್ಷಗಳಿಂದ ಅಭ್ಯಾಸ ಮಾಡಿಕೊಂಡವರು ಒಂದೇ ಬಾರಿ ಬಿಡುವುದರಿಂದ, ಅವರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.ತೊಂದರೆಗೆ ಒಳಗಾದ ಜನರಿಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಪ್ತ ಸಮಾಲೋಚನಾ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನು ಮುಂದೆ ಎಲ್ಲ ತಾಲ್ಲೂಕುಗಳಲ್ಲಿಯೂ ತೆರೆಯಲಾಗುವುದು' ಎಂದರು.`ಮುಂದಿನ ಆರು ತಿಂಗಳು ಗುಟ್ಕಾದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ಈಗಿನ ಪ್ರಾಥಮಿಕ ಕೇಂದ್ರಗಳಲ್ಲಿ ಆಪ್ತ ಸಮಾಲೋಚನೆಯನ್ನು ಕೈಗೊಳ್ಳಲಾಗುವುದು' ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.