ಶುಕ್ರವಾರ, ಜೂನ್ 18, 2021
28 °C

ಸಿಗರೇಟ್ ಸೇದ್ತಾನ್ರೀ ಬೀಳಗಿ ಕಾಮಣ್ಣ...

ಪ್ರಜಾವಾಣಿ ವಾರ್ತೆ/ ವೀರೇಂದ್ರ ಶೀಲವಂತ Updated:

ಅಕ್ಷರ ಗಾತ್ರ : | |

ಬೀಳಗಿ: ಪಟ್ಟಣದ ಕಾಮಣ್ಣ ‘ಧೂಮ­ಪಾನ ಆರೋಗ್ಯಕ್ಕೆ ಹಾನಿಕರ’­ವೆಂಬ ಶಾಸನ ವಿಧಿಸಿದ ಎಚ್ಚರಿಕೆಯನ್ನು ಇದುವರೆಗೂ ಓದಲೇ ಇಲ್ಲವೋ, ‘ಸೇದು, ಸೇದು ಯಾರೇನು ಮಾಡುತ್ತಾರೆ ನೋಡಿಯೇ ಬಿಡೋಣ’­ವೆಂದು ಆತನನ್ನು ಪ್ರತಿಷ್ಠಾಪಿಸಿದವರು ಧೈರ್ಯ ತುಂಬಿ ಸಿಗರೇಟ್ ಕೊಟ್ಟು ಬಿಟ್ಟಿದ್ದಾರೆಯೋ.ಅಂತೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಕೂಡದು ಎಂದು ಕಟ್ಟುನಿಟ್ಟಿನ ಕಾನೂನು ಜಾರಿ­ಯಲ್ಲಿ ಇದ್ದರೂ ಬೀಳಗಿಯ ದೇಸಾಯಿ ಗಲ್ಲಿಯಲ್ಲಿ ಹೆಂಡತಿಯೊಂದಿಗೆ ರಾರಾಜಿ­ಸುತ್ತಿರುವ ಕಾಮಣ್ಣ ಸಿಗರೇಟ್ ಹಾಗೂ ಬೆಂಕಿ ಪೊಟ್ಟಣವನ್ನು ಕೈಯ್ಯಲ್ಲಿ ಹಿಡಿದುಕೊಂಡು ಓಣಿಯ ವ್ಯಾಜ್ಯ ಬಗೆಹರಿಸಲು ನ್ಯಾಯ ಪಂಚಾಯ್ತಿಗೆ ಕುಳಿತಿರುವಂತೆ ಕಾಣುತ್ತಾನೆ.ಹಳ್ಳಿಯ ಧನಿಕರಂತೆ ಗರಿಗರಿಯಾದ ಧೋತರ, ಅಂಗಿ, ರೇಷ್ಮೆ ರುಮಾಲು, ಕಣ್ಣಿಗೆ ತಂಪಿನ ಚಾಳೀಸು ಧರಿಸಿದ ಕಾಮಣ್ಣನೊಂದಿಗೆ ರೇಷ್ಮೆ ಸೀರೆ, ಕೊರಳಲ್ಲಿ ಆಭರಣ, ತಲೆತುಂಬ ಹೂವು ಧರಿಸಿದ ರತಿದೇವಿ ವಿರಾಜಮಾನ­ಳಾಗಿದ್ದಾಳೆ.ಭಾನುವಾರ ಮಧ್ಯಾಹ್ನ ಪ್ರತಿಷ್ಠಾಪಿಸ­ಲಾಗಿರುವ ಕಾಮಣ್ಣನಿಗೆ ಎಲ್ಲರೂ ಪೂಜೆ ಸಲ್ಲಿಸಿ ಹೋಳಿಗೆ ನೈವೇದ್ಯ ಮಾಡುತ್ತಾರೆ.ರಾತ್ರಿಯುದ್ದಕ್ಕೂ ಹೋಳಿ ಹುಣ್ಣಿಮೆಗೆ ಸಂಬಂಧಿಸಿದ ಹಾಡು­ಗಳನ್ನು ಕಾಮಣ್ಣನ ಮುಂದೆ ಹಾಡು­ತ್ತಾರೆ. ಒಬ್ಬರನ್ನು ಕಾಮಣ್ಣನ ಮುಂದೆ ಶವದಂತೆ  ಕುಳ್ಳಿರಿಸಿ ಆತನ ಬದುಕಿನಲ್ಲಿ ನಡೆದ ಗುಣಾವಗುಣಗಳನ್ನು ಹೆಂಡತಿಯಾಗಿ, ಬಂಧು ಬಾಂಧವರಾಗಿ ಹಾಡುತ್ತ ಬೋರಾಡಿ ಅಳುತ್ತ ನೆರೆದವರ ಕಣ್ಣೀರು ಹರಿಸುತ್ತಾರೆ. ಹರಟೆ ಮಾಡಿ ನಕ್ಕು ನಗಿಸುತ್ತಾರೆ. ಸೋಮವಾರ ನಸುಕಿನಲ್ಲಿ ಕಾಮ ದಹನ ಮಾಡಿ, ಕಡಲೆ ಕಾಳು ಸುಟ್ಟು ತಿಂದು ಬಣ್ಣದ ಓಕುಳಿಗೆ ತಯಾರಿ ನಡೆಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.